ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದನ್ನು ಭಾನುವಾರ ಮುಂಜಾವಿನಲ್ಲಿ ನಡೆದ ಗುಂಡಿನ ಚಕಮಕಿ ಸಾಬೀತು ಪಡಿಸಿದೆ.
ಭಾನುವಾರ ರಾತ್ರಿ 12ರ ಸುಮಾರಿಗೆ ಬೇಟೆಗಾರರ ತಂಡ ಕಡವೆಗೆ ಗುಂಡಿಕ್ಕಿದಾಗ ಹತ್ತಿರದಲ್ಲೇ ಇದ್ದ ಬೇಟೆ ತಡೆ ಶಿಬಿರದ ಸಿಬ್ಬಂದಿಗೆ ಗುಂಡಿನ ಶಬ್ದ ಕೇಳಿಸಿದ್ದರಿಂದ ಬೇಟೆ ನಡೆದಿರುವುದು ಗೊತ್ತಾಯಿತು. ಬೇಟೆಗಾರರು ಗುಂಡು ಹೊಡೆಯದಿದ್ದರೆ ಬೇಟೆ ಪ್ರಕರಣ ಬೆಳಕಿಗೇ ಬರುತ್ತಿರಲಿಲ್ಲ.
ಇಂತಹ ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ ಎಂದು ಹೇಳುತ್ತಾರೆ ವನ್ಯಪ್ರೇಮಿಗಳು.
ಭಾನುವಾರ ನಸುಕಿನಲ್ಲಿ ಅರಣ್ಯ ಸಿಬ್ಬಂದಿಯ ಗುಂಡೇಟು ತಗುಲಿ ಮೃತಪಟ್ಟ ಯುವಕ ಮನು (27) ತಾಲ್ಲೂಕಿನ ಭೀಮನಬೀಡು ಗ್ರಾಮದ ಯುವಕ. ಭೀಮನಬೀಡು, ಅಣ್ಣೂರು ಕೇರಿ, ಬನ್ನಿತಾಳಪುರ ಕೊಡಹಳ್ಳಿ, ಬೀಚನಹಳ್ಳಿ, ಮದ್ದೂರು ಕಾಲೊನಿ ಸೇರಿದಂತೆ ಬುಡಕಟ್ಟು ಸಮುದಾಯದ ಕಾಲೊನಿಗಳಲ್ಲಿ ಈಗಲೂ ಬೇಟೆಗಾರರು ಸಕ್ರಿಯರಾಗಿದ್ದಾರೆ ಎಂದು ಹೇಳುತ್ತವೆ ಅರಣ್ಯ ಇಲಾಖೆಯ ಮೂಲಗಳು.
ಮಾಂಸಕ್ಕಾಗಿ ಜಿಂಕೆ, ಕಡವೆ, ಮೊಲ, ಕಾಡು ಹಂದಿಗಳನ್ನು ಇಲ್ಲಿನವರು ಬೇಟೆಯಾಡುತ್ತಿರುತ್ತಾರೆ. ಬೇಟೆಯಾಡಲು ಉರುಳುಗಳನ್ನೂ ಹಾಕುತ್ತಾರೆ. ಜಿಂಕೆಯಂತಹ ಪ್ರಾಣಿಗಳು ಸುಲಭವಾಗಿ ಬೇಟೆಯಾಡಬಹುದು. ಕಡವೆಯಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಇವರು ನಾಡ ಬಂದೂಕುಗಳನ್ನು ಬಳಸುತ್ತಾರೆ.
ವರ್ಷದ ಹಿಂದೆ ಮದ್ದೂರು ವಲಯದಲ್ಲಿ ಜಿಂಕೆಯನ್ನು ಭೇಟೆಯಾಡಿದ್ದರು. ಅ ಸಂದರ್ಭದಲ್ಲಿ ಐವರನ್ನು ಜಿಂಕೆ ಮಾಂಸ ಸಮೇತ ಬಂಧಿಸಲಾಗಿತ್ತು. ಈ ವರ್ಷ ಜನವರಿಯಲ್ಲಿ ಮದ್ದೂರು ವಲಯದ ಮಾವಿನಹಳ್ಳ ಅರಣ್ಯ ಪ್ರದೇಶದಲ್ಲಿ ಮೂವರು ಒಂಟಿ ನಳಿಕೆ ಬಂದೂಕಿನೊಂದಿಗೆ ಸಿಕ್ಕಿಬಿದ್ದಿದ್ದರು. ಆ ಸಂದರ್ಭದಲ್ಲಿ ಜಿಂಕೆಯನ್ನು ಭೇಟೆಯಾಡಿ ಮಾಂಸ ಕೊಂಡೊಯುತ್ತಿದ್ದರು.
ಅಕ್ಟೋಬರ್ ತಿಂಗಳಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಬೇಗೂರು ಹೋಬಳಿಯ ಬನ್ನಿತಾಳಪುರದಿಂದ ಹಕ್ಕಲಪುರಕ್ಕೆ ಹೋಗುವ ದಾರಿಯಲ್ಲಿ ಮೊಲಗಳು ಹಾಗೂ ಕಾಡು ಬೆಕ್ಕುಗಳನ್ನು ಬೇಟೆಯಾಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿದ್ದರು.
ಹೆಚ್ಚಿನ ಸಂದರ್ಭಗಳಲ್ಲಿ ಬೇಟೆ ನಡೆದಿರುವುದು ಗೊತ್ತಾಗುವುದಿಲ್ಲ. ಅಂತಹ ಪ್ರಕರಣಗಳು ಮುಚ್ಚಿ ಹೋಗುತ್ತವೆ.
'ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಹವ್ಯಾಸಕ್ಕೋ ಅಥವಾ ಮಾಂಸ ಮಾರಾಟದ ಉದ್ದೇಶದಿಂದಲೋ ಏನೋ ಬೇಟೆಯಾಡುತ್ತಲೇ ಇದ್ದಾರೆ. ಬೇಟೆಯಾಡಬಾರದು ಎಂದು ಎಚ್ಚರಿಕೆ ನೀಡಿದ್ದರೂ, ಕೆಲವು ಪ್ರಕರಣಗಳು ನಡೆಯುತ್ತಿರುತ್ತದೆ. ಬೇಟೆಗಾರರ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದೇವೆ’ ಎಂದು ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಾಂಸ ಮಾರಾಟಕ್ಕಾಗಿ ಬೇಟೆ?
ಕಡವೆ ಜಿಂಕೆ ಮೊಲದ ಮಾಂಸಕ್ಕೆ ಕಾಳಸಂತೆಯಲ್ಲಿ ಬೇಡಿಕೆ ಇದೆ. ಬೆಲೆಯೂ ಹೆಚ್ಚಿದೆ. ಮಾಂಸದ ಉದ್ದೇಶದಿಂದಲೇ ಬೇಟೆಗಾರರು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸುತ್ತಾರೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ. ಕೇರಳ ಭಾಗದಲ್ಲಿ ಹೆಚ್ಚು ಬೇಡಿಕೆ ಇದ್ದು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಾರೆ. ‘ಭಾನುವಾರದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 120 ಕೆಜಿಯಷ್ಟು ಕಡವೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೇಟೆಗಾರರು ಅಷ್ಟು ಪ್ರಮಾಣದ ಮಾಂಸವನ್ನು ತಮ್ಮ ಮನೆಯಲ್ಲಿ ಬಳಸಲು ಸಾಧ್ಯವೇ ಇಲ್ಲ. ಹೊರಗಡೆ ಮಾರಾಟ ಮಾಡುವ ಸಾಧ್ಯತೆಯೇ ಹೆಚ್ಚಿತ್ತು’ ಎಂದು ಹೇಳುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.