ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಹೆಚ್ಚಿದ ಬೇಟೆ ಪ್ರಕರಣ, ತಮಿಳುನಾಡಿನ ಬೇಟೆಗಾರರಿಂದ ಪ್ರಾಣಿಗಳ ಹತ್ಯೆ

ಕಾವೇರಿ, ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಸ್ಥಳೀಯರು, ತಮಿಳುನಾಡಿನ ಬೇಟೆಗಾರರಿಂದ ಪ್ರಾಣಿಗಳ ಹತ್ಯೆ
Published 2 ಆಗಸ್ಟ್ 2023, 4:27 IST
Last Updated 2 ಆಗಸ್ಟ್ 2023, 4:27 IST
ಅಕ್ಷರ ಗಾತ್ರ

ಹನೂರು: ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಕಳ್ಳಬೇಟೆ ಪ್ರಕರಣಗಳು ಹೆಚ್ಚುತ್ತಿವೆ. ತಮಿಳುನಾಡಿನ ಬೇಟೆಗಾರರಲ್ಲದೆ, ಸ್ಥಳೀಯರು ಕೂಡ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. 

ಬೇಟೆಗಾರರು ಪ್ರಾಣಿಗಳನ್ನು ಕೊಲ್ಲಲು ಕಬ್ಬಿಣದ ಆಯುಧಗಳಲ್ಲದೆ ನಾಡ ಬಂದೂಕುಗಳನ್ನೂ ಬಳಸುತ್ತಿದ್ದಾರೆ. ಇತ್ತೀಚೆಗೆ ನಡೆದ ಒಂದು ಪ್ರಕರಣದಲ್ಲಿ ಬಾಲಕ ಕೂಡ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ.

ಜುಲೈ ತಿಂಗಳೊಂದರಲ್ಲೇ ನಾಲ್ಕು ಪ್ರಕರಣಗಳು ವರದಿಯಾಗಿವೆ. ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. 

ಎರಡೂ ವನ್ಯಧಾಮಗಳು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಆ ಭಾಗದಿಂದ ಬೇಟೆಗಾರರು ಇಲ್ಲಿಗೆ ಬರುತ್ತಾರೆ. ಸ್ಥಳೀಯ ಬೇಟೆಗಾರರು ಕೂಡ ಅವರೊಂದಿಗೆ ಸಂಪರ್ಕಹೊಂದಿದ್ದು, ಪ್ರಾಣಿಗಳ ಬೇಟೆಯಲ್ಲಿ ತೊಡಗುತ್ತಿದ್ದಾರೆ. 

ಕಾವೇರಿ ವನ್ಯಧಾಮದ ಕೌದಳ್ಳಿ ಹಾಗೂ ಗೋಪಿನಾಥಂ ವನ್ಯಜೀವಿ ವಲಯ ಮಲೆಮಹದೇಶ್ವರ ವನ್ಯಾಧಾಮದ ಪಿ.ಜಿ ಪಾಳ್ಯ, ರಾಮಾಪುರ, ಹೂಗ್ಯಂ ಹಾಗೂ ಪಾಲಾರ್ ವನ್ಯಜೀವಿ ವಲಯಗಳು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿವೆ. ಈ ವಲಯಗಳಲ್ಲೇ ಹೆಚ್ಚು ಬೇಟೆ ಪ್ರಕರಣಗಳು ವರದಿಯಾಗುತ್ತಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದರೂ, ಅವರ ಕಣ್ಣುತಪ್ಪಿಸಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ವನ್ಯಪ್ರಾಣಿಗಳಾದ ಜಿಂಕೆ, ಆನೆದಂತ ಹಾಗೂ ಇತರೆ ಪ್ರಾಣಿಗಳ ಅಂಗಗಳ ಕಳ್ಳ ಸಾಗಣೆಯೂ ನಡೆಯುತ್ತಿರುತ್ತದೆ. ಕೆಲವು ತಿಂಗಳ ಹಿಂದೆ ಹುಲಿ ಉಗುರು, ಚರ್ಮ ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಎಂಟು ಜನರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು.

ನಿಲ್ಲದ ಗುಂಡಿನ ಶಬ್ದ: ಮಲೆಮಹದೇಶ್ವರ ವನ್ಯಧಾಮದ ಪಾಲಾರ್ ವನ್ಯಜೀವಿ ವಲಯ ಹಾಗೂ ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಇಂದಿಗೂ ರಾತ್ರಿ ವೇಳೆ ಅರಣ್ಯದಲ್ಲಿ ಗುಂಡಿನ ಶಬ್ದ ಕೇಳಿ ಬರುತ್ತಿದೆ. ತಮಿಳುನಾಡು ಭಾಗದಲ್ಲಿ ವನ್ಯಪ್ರಾಣಿಗಳ ಸಂಖ್ಯೆ ಕಡಿಯಾಗುತ್ತಿದ್ದಂತೆ ಕಾವೇರಿ ಹಾಗೂ ಪಾಲಾರ್ ನದಿಯನ್ನು ದಾಟಿ ರಾಜ್ಯದ ಅರಣ್ಯಕ್ಕೆ ನುಗ್ಗುವ ಬೇಟೆಗಾರರು ಇಲ್ಲಿನ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. 

ಈ ವರ್ಷದ ಫೆಬ್ರುವರಿಯಲ್ಲಿ ಕಾವೇರಿ ನದಿ ದಾಟಿ ಬೇಟೆಯಾಡಲು ಬಂದಿದ್ದ ತಮಿಳುನಾಡಿನ ಬೇಟೆಗಾರರಿಗೂ ಅರಣ್ಯ ಇಲಾಖೆ ಸಿಬ್ಬಂದಿಗೂ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ರಾಜ ಎಂಬ ಆರೋಪಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ.

ಕಾವೇರಿ ನದಿ ಭಾಗದ ಅರಣ್ಯದಲ್ಲಿ ತಮಿಳುನಾಡಿನ ಬೇಟೆಗಾರರ ಹಾವಳಿ ಇದೇ ಮೊದಲೇನಲ್ಲ. ಮೇಲಿಂದ ಮೇಲೆ ಕಾವೇರಿ ನದಿ ದಾಟಿ ಬರುತ್ತಾರೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಕಾರ್ಯಾಚರಣೆಗೆ ಇಳಿದಾಗ ಸಿಬ್ಬಂದಿ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಸಾಕಷ್ಟು ಉದಾಹರಣೆಗಳೂ ಇವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌, ‘ನಮ್ಮ ಭಾಗದ ಅರಣ್ಯ ಪ್ರದೇಶದಲ್ಲಿ ಸಂರಕ್ಷಣೆ ಕಾರ್ಯ ಉತ್ತಮವಾಗಿದೆ. ಆದರೆ ತಮಿಳುನಾಡಿನಲ್ಲಿ ಅರಣ್ಯ ಸಂರಕ್ಷಣೆ ಉತ್ತಮವಾಗಿಲ್ಲ. ಹೀಗಾಗಿ ಗಡಿ ದಾಟಿ ಬರುವ ತಮಿಳುನಾಡಿನ ಬೇಟೆಗಾರರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ’ ಎಂದರು. 

ಈಗಾಗಲೇ ಒಂದು ಬಾರಿ ತಮಿಳುನಾಡಿನ ಅಧಿಕಾರಿಗಳೊಂದಿಗೆ ಗಡಿ ಸಭೆ ನಡೆಸಲಾಗಿದೆ. ಎರಡು ಸಭೆ ಕರೆದು ಬೇಟೆ ಪ್ರಕರಣ ಬಗ್ಗೆ ಚರ್ಚಿಸಲಾಗುವುದು
-ಎಂ ಮಾಲತಿಪ್ರಿಯಾ ಚಾಮರಾಜನಗರ ವೃತ್ತದ ಪ್ರಭಾರ ಸಿಸಿಎಫ್
ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಹಗಲು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ
-ಜಿ.ಸಂತೋಷ್‌ಕುಮಾರ್‌ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್
ಬೇಟೆ ಪ್ರಕರಣ ತಗ್ಗುವ ನಿರೀಕ್ಷೆ
ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಮೀಸಲು ಅರಣ್ಯ ಪ್ರದೇಶಗಳನ್ನು ಸೇರಿಸಿ ಕಾವೇರಿ ದಕ್ಷಿಣ ವನ್ಯಧಾಮ ಎಂದು ತಮಿಳುನಾಡು ಸರ್ಕಾರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಿತ್ತು.  ಈ ವನ್ಯಧಾಮವು ರಾಜ್ಯದ ಕಾವೇರಿ ವನ್ಯಧಾಮದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹೊಸ ವನ್ಯಧಾಮದಲ್ಲಿ ಬೇಟೆ ತಡೆ ಶಿಬಿರ ಸ್ಥಾಪನೆ ಸೇರಿದಂತೆ ಕಠಿಣ ಸಂರಕ್ಷಣಾ ಕ್ರಮಗಳ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ ನಂತರ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಹಾವಳಿ ತಗ್ಗಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಅಧಿಕಾರಿಗಳು ಇದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT