ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪಕ್ಷ ರಹಿತ ಚುನಾವಣೆಯಲ್ಲಿ ಮುಖಂಡರದ್ದೇ ಕಾರುಬಾರು

ಗ್ರಾಮ ಪಂಚಾಯಿತಿ ಚುನಾವಣೆ: ಸಚಿವರು, ಶಾಸಕರು.. ಎಲ್ಲರೂ ಹಳ್ಳಿ ರಾಜಕಾರಣದಲ್ಲಿ ಸಕ್ರಿಯ
Last Updated 18 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಅದು ಪಕ್ಷ ರಹಿತ ಚುನಾವಣೆ. ರಾಜಕೀಯ ಪಕ್ಷಗಳಿಗೆ, ಅವುಗಳ ಚಿಹ್ನೆಗಳಿಗೆ ಈ ಚುನಾವಣೆಯಲ್ಲಿ ಮಹತ್ವವಿಲ್ಲ. ಅವುಗಳನ್ನು ಬಳಸಿಕೊಳ್ಳುವಂತೆಯೂ ಇಲ್ಲ. ಆದರೆ, ಇದೆಲ್ಲವೂ ಕಡತದಲ್ಲಿರುವ ನಿಯಮಗಳಿಗೆ ಮಾತ್ರ ಸೀಮಿತವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಈಗ ಪಕ್ಷ ರಾಜಕಾರಣವೇ ಜೋರಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಎಲ್ಲೂ ಪಕ್ಷಗಳ ಹೆಸರು, ಚಿಹ್ನೆಗಳನ್ನು ಬಳಸಿಲ್ಲ ಎಂಬುದು ನಿಜ. ಪ್ರಚಾರ ಸಭೆಗಳಲ್ಲಿ ಫ್ಲೆಕ್ಸ್‌ ಬ್ಯಾನರ್‌ಗಳೂ ಕಂಡು ಬರುತ್ತಿಲ್ಲ. ಮುದ್ರಿಸಿರುವ ಕರ ಪತ್ರಗಳಲ್ಲಿ ಪಕ್ಷದ ಚಿಹ್ನೆ, ಮುಖಂಡರ ಫೋಟೊಗಳೂ ಇಲ್ಲ. ಈ ವಿಚಾರದಲ್ಲಿ ಚುನಾವಣಾ ಆಯೋಗ ರೂಪಿಸಿರುವ ನಿಯಮಕ್ಕೆ ರಾಜಕೀಯ ಪಕ್ಷಗಳು ಬದ್ಧವಾಗಿವೆ.

ಆದರೆ, ಪಕ್ಷಗಳ ಮುಖಂಡರು, ಶಾಸಕರು, ಸಚಿವರು ‌ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮತ ಕೇಳುವಾಗಲೆಲ್ಲ ಪಕ್ಷ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿ ಎಂದು ಹೇಳುತ್ತಾರೆ. ಚುನಾವಣಾ ಆಯೋಗದ ನಿಯಮದ ಪ್ರಕಾರ, ಪಕ್ಷ ಬೆಂಬಲಿತ ಅಭ್ಯರ್ಥಿ ಎಂದು ಹೇಳುವಂತಿಲ್ಲ. ಒಂದು ವೇಳೆ ದೂರು ದಾಖಲಾಗಿ, ತನಿಖೆಯಲ್ಲಿ ಇದು ಸಾಬೀತಾದರೆ ಅಭ್ಯರ್ಥಿಯ ಸದಸ್ಯತ್ವವೂ ರದ್ದಾಗುತ್ತದೆ.

ಪಕ್ಷ ಬೇಧವಿಲ್ಲ: ಈ ವಿಚಾರದಲ್ಲಿ ಪಕ್ಷಗಳ ನಡುವೆ ಭೇದವಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಬಿಜೆಪಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಮುಖಂಡರು ಹಳ್ಳಿ ರಾಜಕಾರಣದ ಅಖಾಡಕ್ಕಿಳಿದಿದ್ದಾರೆ. ಅತ್ತ ಕಾಂಗ್ರೆಸ್‌ ಕೂಡ ಶಾಸಕರು, ಮಾಜಿ ಸಂಸದರು ಹಾಗೂ ಜಿಲ್ಲಾ ಮುಖಂಡರನ್ನು ಬಳಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಎರಡು ದಿನಗಳ ಕಾಲ ಗುಂಡ್ಲುಪೇಟೆ, ಚಾಮರಾಜನಗರದ ವಿವಿಧ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಸಿದ್ದಾರೆ. ಅತ್ತ ಗುಂಡ್ಲುಪೇಟೆಯಲ್ಲಿ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಉಳಿದ ಕಡೆಗಳಲ್ಲೂ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಹಲವು ದಿನಗಳಿಂದ ಕಾರ್ಯಕರ್ತರ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಚಾಮರಾಜನಗರದ ಸಿ.ಪುಟ್ಟರಂಗಶೆಟ್ಟಿ ಹಾಗೂ ಹನೂರಿನ ಆರ್‌.ನರೇಂದ್ರ ಅವರು ಕೂಡ ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿ ತಿರುಗಾಡುತ್ತಿದ್ದಾರೆ. ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರು ಕೂಡ ಪ್ರಚಾರ ಮಾಡಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳೂ ಗ್ರಾಮಗಳಲ್ಲೇ ಬೀಡು ಬಿಟ್ಟಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಯು ಪಕ್ಷ ರಹಿತವಾಗಿ ನಡೆಯುವುದರಿಂದ ಪಕ್ಷ ಬೆಂಬಲಿತ ಅಭ್ಯರ್ಥಿ ಎಂದೂ ಕರೆಯುವುದಕ್ಕೂ ಅವಕಾಶ ಇಲ್ಲ. ಮುಖಂಡರು ಪಕ್ಷಗಳ ಹೆಸರಿನಲ್ಲಿ ಮತ ಕೇಳುವಂತಿಲ್ಲ. ಇಂತಹ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದರು.

‘ಪಕ್ಷ ರಹಿತ ಚುನಾವಣೆ ಎಂದು ಹೇಳಿಕೊಳ್ಳುವುದಕ್ಕೆ ಸರಿ. ಆದರೆ ರಾಜಕಾರಣವನ್ನು ಬಿಟ್ಟು ಚುನಾವಣೆಯನ್ನು ಊಹಿಸಲು ಸಾಧ್ಯವೇ? ಗ್ರಾಮಿಣ ಭಾಗಗಳಲ್ಲೇ ಪಕ್ಷಗಳು ಹೆಚ್ಚು ಶಕ್ತಿಯುತವಾಗುತ್ತಿರುತ್ತವೆ. ಸಕ್ರಿಯ ಕಾರ್ಯಕರ್ತರು ಹೆಚ್ಚು ಮಂದಿ ಅಲ್ಲೇ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅವರು ಮುಖಂಡರನ್ನು ಕರೆದೇ ಕರೆಯುತ್ತಾರೆ, ನಾವು ಹೋಗಲೇ ಬೇಕಾಗುತ್ತದೆ’ ಎಂದು ಖಾಸಗಿಯಾಗಿ ಹೇಳುತ್ತಾರೆ ಎರಡೂ ಪಕ್ಷಗಳ ಮುಖಂಡರು.

ಕಾರ್ಯಕರ್ತರನ್ನು ಬೆಂಬಲಿಸುವುದು ತಪ್ಪೇ: ಆರ್‌.ಸುಂದರ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು, ‘ನಾವು ಎಲ್ಲಿಯೂ ನಮ್ಮ ಪಕ್ಷದ ಹೆಸರು, ಚಿಹ್ನೆಯನ್ನಾಗಲಿ, ನಾಯಕರ ಹೆಸರನ್ನಾಗಲಿ ಈ ಚುನಾವಣೆಯಲ್ಲಿ ಬಳಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನಮ್ಮ ಕಾರ್ಯಕರ್ತರು ಇದ್ದಾರೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಅವರು ಪಕ್ಷಕ್ಕಾಗಿ ದುಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದೇ ಕಾರ್ಯಕರ್ತರು ಸ್ಪರ್ಧಿಸುತ್ತಾರೆ. ನಮ್ಮ ಕೆಲಸಕ್ಕೆ ಹೆಗಲು ನೀಡಿ ಶ್ರಮಿಸಿದ ಅವರಿಗೆ ನಾವು ಈ ಸಂದರ್ಭದಲ್ಲಿ ಬೆಂಬಲ ನೀಡುವುದು ಬೇಡವೇ? ಇದು ತಪ್ಪಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ಮುಖಂಡರ ಸಹಾಯ ನಿರೀಕ್ಷೆ ಮಾಡುತ್ತಾರೆ: ರವಿಕುಮಾರ್‌

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಅವರು ಪ್ರತಿಕ್ರಿಯಿಸಿ , ‘ನಾವು ಎಲ್ಲೂ ಪಕ್ಷದ ಚಿಹ್ನೆ ಬಳಸುತ್ತಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮುಖಂಡರು ಹಲವರಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವತಿಯಿಂದ ಅಲ್ಲದಿದ್ದರೂ ವೈಯಕ್ತಿಕವಾಗಿ ನಮ್ಮ ಸಹಾಯವನ್ನು ಅವರು ನಿರೀಕ್ಷೆ ಮಾಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಶಾಸಕರು ಹಾಗೂ ಇತರ ಮುಖಂಡರೂ ಅಷ್ಟೆ, ಒಳ್ಳೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT