ಭಾನುವಾರ, ಜುಲೈ 3, 2022
27 °C
ಮೂರು ಕೇಂದ್ರಗಳಲ್ಲಿ 13 ಭತ್ತ ಬೆಳೆಗಾರರ ನೋಂದಣಿ

ಕನಿಷ್ಠ ಬೆಂಬಲ ಬೆಲೆ: ಖರೀದಿ ಕೇಂದ್ರದತ್ತ ಮುಖ ಮಾಡದ ರೈತರು

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಸಂತೇಮರಹಳ್ಳಿ: 2021–22ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲೆಯಲ್ಲಿ ಐದು ಖರೀದಿ ಕೇಂದ್ರ ತೆರೆದಿದ್ದರೂ, ರೈತರು ಅವುಗಳತ್ತ ಮುಖ ಮಾಡುತ್ತಿಲ್ಲ.

ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಚಾಮರಾಜನಗರದ ಎಪಿಎಂಸಿ ಯಾರ್ಡ್‌ ಆವರಣ, ಸಂತೇಮರಹಳ್ಳಿಯ ಎಪಿಎಂಸಿ ಆವರಣ, ಕೊಳ್ಳೇಗಾಲದ ಎಪಿಎಂಸಿ ಯಾರ್ಡ್‌ ಆವರಣ, ಯಳಂದೂರಿನ ಟಿಎಪಿಸಿಎಂಎಸ್‌ ಆವರಣ ಹಾಗೂ ಹನೂರಿನ ಎಪಿಎಂಸಿ ಯಾರ್ಡ್‌ ಆವರಣ ಸೇರಿ ಐದು ಕಡೆಗಳಲ್ಲಿ ಇದೇ 10ರಿಂದ ಖರೀದಿ ಕೇಂದ್ರ ತೆರೆಯಲಾಗಿದೆ.

14 ದಿನದ ಅವಧಿಯಲ್ಲಿ 13 ರೈತರು ಮಾತ್ರ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಯಳಂದೂರು, ಕೊಳ್ಳೇಗಾಲದ ಕೇಂದ್ರಗಳಲ್ಲಿ ತಲಾ ಆರು ಮಂದಿ ನೋಂದಣಿ ಮಾಡಿಕೊಂಡರೆ, ಸಂತೇಮರಹಳ್ಳಿಯ ಕೇಂದ್ರದಲ್ಲಿ ಒಬ್ಬರು ನೋಂದಣಿ ಮಾಡಿಕೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ, ಯಳಂದೂರು, ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ರೈತರು ಖಾಸಗಿಯವರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಬಾಗಳಿ, ಬಾನಹಳ್ಳಿ, ಕಮರವಾಡಿ, ತೆಳ್ಳನೂರು ಈ ಭಾಗದಲ್ಲಿ ಬಹುತೇಕ ಭಾಗದಲ್ಲಿ ಭತ್ತ ಕೊಯ್ಲು ಮುಕ್ತಾಯ ಹಂತ ತಲುಪಿದೆ. ಯಳಂದೂರು, ಕೊಳ್ಳೇಗಾಲ ಭಾಗದಲ್ಲೂ ಕಟಾವಿನ ಕಾರ್ಯ ವೇಗವಾಗಿ ನಡೆಯುತ್ತಿದೆ. ಖಾಸಗಿ ಅಕ್ಕಿ ಗಿರಣಿಯವರು ನೇರವಾಗಿ ಗದ್ದೆಯ ಬಳಿಯಿಂದಲೇ ಭತ್ತವನ್ನು ಖರೀದಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಉತ್ತಮ ದರ: ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತ ಪ್ರತಿ ಕ್ರಿಂಟಲ್‌ಗೆ ₹ 1940 ಹಾಗೂ ‘ಎ’ ದರ್ಜೆಯ ಭತ್ತಕ್ಕೆ ₹ 1,960 ನಿಗದಿ ಪಡಿಸಿದೆ.

ಖಾಸಗಿ ಅಕ್ಕಿ ಗಿರಣಿ ಮಾಲೀಕರು ಪ್ರತಿ ಕ್ವಿಂಟಲ್‍ಗೆ ಪೆನ್ನಾ ಸೂಪರ್, ಪದ್ಮಾವತಿ ಹಾಗೂ ಆರ್‌ಎನ್‍ಆರ್ ತಳಿ ಭತ್ತಗಳಿಗೆ ₹ 2,000 ಹಾಗೂ ಜ್ಯೋತಿ ಭತ್ತಕ್ಕೆ ₹ 2,650 ರಿಂದ ₹ 2800 ನೀಡಿ ಖರೀದಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಉತ್ತಮ ದರ ಇರುವುದರಿಂದ ರೈತರು ಖಾಸಗಿಯವರಿಗೆ ಭತ್ತ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಖರೀದಿ ಪ್ರಕ್ರಿಯೆ ವಿಳಂಬ: ಭತ್ತ ಖರೀದಿ ಕೇಂದ್ರದಲ್ಲಿ ಹೊರಗಿನ ಮಾರುಕಟ್ಟೆಗಿಂತ ಕಡಿಮೆ ಬೆಲೆ ಇದೆ. ಇಲ್ಲಿ ನೋಂದಣಿ, ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ರೈತರು ಪೂರಕ ದಾಖಲೆ ಸಲ್ಲಿಸಬೇಕು. ಭತ್ತದ ಗುಣಮಟ್ಟ ಉತ್ತಮವಾಗಿರಬೇಕು. ಇಲಾಖೆ ನಿಗದಿ ಪಡಿಸಿದ ಅಕ್ಕಿ ಗಿರಣಿಗೆ ರೈತರು ಸ್ವಂತ ಖರ್ಚಿಂದ ಭತ್ತ ಸಾಗಣೆ ಮಾಡಬೇಕು. ಬಹುತೇಕ ರೈತರು ಭತ್ತ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಹೊಂದಿಲ್ಲ. 

ಖಾಸಗಿಯವರು ಹೆಚ್ಚಿನ ಬೆಲೆ ನೀಡುವುದರ ಜೊತೆಗೆ ಕೊಯ್ಲು ಮಾಡುತ್ತಿರುವ ಸ್ಥಳಕ್ಕೆ ಬಂದು ಖರೀದಿಸುತ್ತಿದ್ದಾರೆ. ತೂಕ ಹಾಕಿ ಸ್ಥಳದಲ್ಲೇ ರೈತರಿಗೆ ಹಣ ನೀಡುತ್ತಿದ್ದಾರೆ. ಇದರಿಂದಾಗಿ ರೈತರು ಭತ್ತ ಸಾಗಣೆ ಮಾಡುವ ಸಂಗ್ರಹ ಮಾಡಿಟ್ಟುಕೊಳ್ಳುವ ತಾಪತ್ರಯ ಇಲ್ಲ ಎಂದು ಹೇಳುತ್ತಾರೆ ಬೆಳೆಗಾರರು. 

‘ಸಾಲ ಮಾಡಿ ಭತ್ತ ಬೆಳೆದಿದ್ದೇವೆ. ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿ ಅಕ್ಕಿ ಗಿರಣಿಗೆ ನೀಡಿ, ಬೆಂಬಲ ಬೆಲೆಯ ಹಣ ನಮಗೆ ತಲುಪಲು 15 ದಿನಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ರೈತರಿಗೆ ಸಮಸ್ಯೆಯೇ ವಿನಾ ಅನುಕೂಲವಿಲ್ಲ. ಆದ್ದರಿಂದ ಸ್ಥಳದಲ್ಲಿಯೇ ಮಾರಾಟ ಮಾಡಿ ಹಣ ಪಡೆದುಕೊಳ್ಳುತ್ತೇವೆ’ ಎಂದು ಬಾಣಹಳ್ಳಿಯ ರೈತ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಖರೀದಿ ಕೇಂದ್ರದಿಂದ ಬೆಲೆ ಸ್ಥಿರ
ಭತ್ತ ಖರೀದಿ ಕೇಂದ್ರಗಳು ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಭತ್ತದ ಬೆಲೆ ₹ 2000ದ ಆಸುಪಾಸಿನಲ್ಲಿದೆ. ಖರೀದಿ ಕೇಂದ್ರಗಳಿಗೆ ಭತ್ತ ಬಾರದೇ ಇದ್ದರೂ, ರೈತರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. 

‘ಭತ್ತ, ರಾಗಿ ಹಾಗೂ ಮುಸುಕಿನ ಜೋಳವನ್ನು ಖಾಸಗಿಯವರು ಪಡೆದುಕೊಳ್ಳುವ ದರದಲ್ಲಿ ಸರ್ಕಾರ ಖರೀದಿಸಬೇಕು. ಜತೆಗೆ ಖಾಸಗಿಯವರು ತೂಕದ ವ್ಯತ್ಯಾಸದಲ್ಲಿ ಮೋಸ ಮಾಡುತ್ತಾರೆ. ಅವರಿಗೆ ಪರವಾನಗಿ ಇದೆಯೇ ಹಾಗೂ ರಶೀದಿ ನೀಡುತ್ತಿದ್ದಾರೆ ಎಂಬುದನ್ನು ಇಲಾಖೆಯವರು ಪರಿಶೀಲಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

***

ಜಿಲ್ಲೆಯಲ್ಲಿ 5 ಕೇಂದ್ರಗಳನ್ನು ತೆರೆಯಲಾಗಿದೆ. ನಿರೀಕ್ಷೆಯಂತೆ ರೈತರು ನೋಂದಣಿ ಮಾಡಿಕೊಂಡಿಲ್ಲ. ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
–ಯೋಗಾನಂದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು