ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ರೈತನ ಕೈ ಹಿಡಿದ ಅಂತರಬೆಳೆ ಚೆಂಡು ಹೂ

Published 14 ಅಕ್ಟೋಬರ್ 2023, 5:11 IST
Last Updated 14 ಅಕ್ಟೋಬರ್ 2023, 5:11 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಮಂಗಳೂರು ಸೌತೆಕಾಯಿ ಜೊತೆಗೆ ಅಂತರ್ ಬೆಳೆಯಾಗಿ ಚೆಂಡು ಹೂ ಬೆಳೆದು ಚಂದದ ಬದುಕು ಕಟ್ಟಿಕೊಂಡಿದ್ದಾರೆ ಹೆಗ್ಗವಾಡಿ ಗ್ರಾಮದ ರೈತ ಯೋಗೇಶ್.

ತಮ್ಮ ಎರಡು ಎಕರೆ ಜಮೀನಿನಲ್ಲಿ ಮಂಗಳೂರು ಸೌತೆ ಬೆಳೆದಿದ್ದ ಯೋಗೇಶ್‌, ಅದರ ಮಧ್ಯೆ ಚೆಂಡು ಹೂ ಬೆಳೆದಿದ್ದರು. ಈ ಬಾರಿ ಚೆಂಡು ಹೂವು, ಮಂಗಳೂರು ಸೌತೆಗೂ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇಲ್ಲದಿದ್ದರೂ, ಯೋಗೇಶ್ ಅವರಿಗೆ ಲಾಭ ತಂದು ಕೊಟ್ಟಿದೆ. ಮಂಗಳೂರು ಸೌತೆಗಿಂತಲೂ ಚೆಂಡು ಹೂ ಹೆಚ್ಚು ಆದಾಯ ಕೊಟ್ಟಿದೆ. 

ಕೊಳವೆ ಬಾವಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವ ಯೋಗೇಶ್‌, ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಹನಿ ನೀರಾವರಿ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಾರೆ. 

ನರ್ಸರಿಯಲ್ಲಿ ಒಂದು ಪೈರಿಗೆ ₹2 ರಂತೆ ಎರಡು ಸಾವಿರ ಚೆಂಡು ಹೂವಿನ ಗಿಡಗಳನ್ನು ನಾಟಿ ಮಾಡಿದ್ದರು. ನಾಟಿ, ಕೀಟ ನಾಶಕ ಇನ್ನಿತರೆ ಖರ್ಚು ಸೇರಿ ₹10 ಸಾವಿರ ವ್ಯಯಿಸಿದ್ದಾರೆ. ಮೂರು ತಿಂಗಳಿಗೆ ಸರಿಯಾಗಿ ಹೂವು ಕಟಾವಿಗೆ ಬಂದಿದೆ. ಈ ಬಾರಿಯ ಗೌರಿ ಗಣೇಶ ಹಬ್ಬದ ಸಮಯದಲ್ಲೇ ಮೊದಲ ಹಂತದ ಕಟಾವು ಮಾಡಿದ್ದಾರೆ. ಹಬ್ಬ ಇದ್ದುದರಿಂದ ಚೆಂಡು ಹೂವು ಕೆಜಿಗೆ ₹15 ರಿಂದ ₹20ಕ್ಕೆ ಮಾರಾಟ ಮಾಡಿದ್ದಾರೆ.  ಮೊದಲನೇ ಬೀಡಿನಲ್ಲಿ ₹50 ಸಾವಿರ ಗಳಿಸಿದ್ದಾರೆ.

ಹಬ್ಬ ಮುಗಿದು ಎರಡು ವಾರ ಕಳೆಯುತ್ತಾ ಬಂದಿದ್ದು, ಇದೀಗ ಎರಡನೇ ಹಂತದ ಕಟಾವಿಗೆ ಯೋಗೇಶ್‌ ಸಿದ್ಧತೆ ಮಾಡಿಕೊಂಡಿದ್ದಾರೆ.

‘ಆದರೆ, ಈಗ ಹೂ ಧಾರಣೆ ಕುಸಿದಿದೆ ₹5 ಕ್ಕೆ ಮಾರಾಟ ಮಾಡುತ್ತಿದ್ದೇನೆ. ಮುಂದಿನ ವಾರ ಆಯುಧ ಪೂಜೆ ಇರುವುದರಿಂದ ಮತ್ತೆ ಧಾರಣೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಯೋಗೇಶ್ ಹೇಳಿದರು. 

‘ಈಗಾಗಲೇ ಎರಡು ಬಾರಿ ಕಟಾವು ಮಾಡಿದ್ದೇನೆ. ಇನ್ನೂ ಮೂರು ಬಾರಿ ಕಟಾವು ಮಾಡುವುದಕ್ಕೆ ಅವಕಾಶ ಇದೆ. ಹೂವಿನ ಧಾರಣೆ ಹೆಚ್ಚು ಕಡಿಮೆಯಾದರೂ ಉತ್ತಮ ಆದಾಯ ಕೈಸೇರುವ ನಿರೀಕ್ಷೆ ಹೊಂದಿದ್ದೇನೆ’ ಎಂದರು. 

‘ಹಬ್ಬ ಹರಿದಿನಗಳಿಗೆ ಹೂ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕೆಜಿಗೆ ₹50ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು. ಬೇಡಿಕೆ ಇರುವ ಸಮಯದಲ್ಲಿ ಹೂ ಮಾರಾಟಗಾರರು ಜಮೀನಿಗೆ ಬಂದು ಹೂ ಗಳನ್ನು ಖರೀದಿಸಿಕೊಂಡು ಹೋಗುತ್ತಾರೆ’ ಎಂದು ಅವರು ವಿವರಿಸಿದರು. 

‘ಒಂದೇ ಬೆಳೆಗೆ ಅಂಟಿಲ್ಲ’

ಯೋಗೇಶ್‌ ಅವರು ಒಂದೇ ಬೆಳೆಗೆ ಅಂಟಿಕೊಂಡಿಲ್ಲ. ಆಗಾಗ ಬೆಳೆಯನ್ನು ಬದಲಾಯಿಸುತ್ತಾ ಹೋಗುತ್ತಾರೆ. ಮೂರು ತಿಂಗಳಿಗೆ ಫಸಲು ಬರುವ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚೆಂಡು ಹೂವಿನ ಬಳಿಕ ಟೊಮೆಟೊ ಹಾಕಲು ಅವರು ನಿರ್ಧರಿಸಿದ್ದಾರೆ.  ಮೊದಲು ಎರಡು ಎಕರೆಯಲ್ಲಿ ಮಂಗಳೂರು ಸೌತೆ ಹಾಕಿದ್ದೆ. ಅಂತರ ಬೆಳೆಯಾಗಿ ಚೆಂಡು ಹೂ ಬೆಳೆದೆ. ಮಂಗಳೂರು ಸೌತೆಯಲ್ಲಿ ಹೆಚ್ಚು ಆದಾಯ ಬರಲಿಲ್ಲ. ಆದರೆ ಚೆಂಡು ಹೂ ಕೈಬಿಡಲಿಲ್ಲ. ನಾವು ಒಂದೇ ಬೆಳೆಗೆ ಅಂಟಿಕೊಂಡಿದ್ದರೆ ನಷ್ಟದ ಸಾಧ್ಯತೆ ಹೆಚ್ಚು’ ಎಂಬುದು ಯೋಗೇಶ್‌ ಅವರ ಅನುಭವದ ಮಾತು. 

–ಮಹದೇವ್‌ ಹೆಗ್ಗವಾಡಿಪುರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT