ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪಡೆದರೆ ಉಪ್ಪಾರ ಸಮಾಜ ಅಭಿವೃದ್ಧಿ: ಡಿ. ಜಗನ್ನಾಥ್‌ಸಾಗರ್

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಸಾಧಕರಿಗೆ ಉಪ್ಪಾರ ಯುವಕ ಸಂಘದಿಂದ ಪ್ರತಿಭಾ ಪುರಸ್ಕಾರ
Last Updated 7 ನವೆಂಬರ್ 2021, 16:43 IST
ಅಕ್ಷರ ಗಾತ್ರ

ಚಾಮರಾಜನಗರ: ಶೈಕ್ಷಣಿಕವಾಗಿ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವುದು ಅತ್ಯಗತ್ಯ ಎಂದುವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಡಿ. ಜಗನ್ನಾಥ್‌ಸಾಗರ್ ಅವರು ಭಾನುವಾರ ಪ್ರತಿಪಾದಿಸಿದರು.

ನಗರದಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘ ಹಮ್ಮಿಕೊಂಡಿದ್ದ 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉಪ್ಪಾರ ಸಮುದಾಯದವು ಸಾಕ್ಷರತೆಯಲ್ಲಿ ತುಂಬಾ ಹಿಂದೆ ಉಳಿದಿದೆ. 2011ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 60ರಿಂದ ಶೇ 65ರಷ್ಟಿತ್ತು. ಸಮುದಾಯದ ಸಾಕ್ಷರತೆ ಪ್ರಮಾಣ ಜಾಸ್ತಿ ಇದ್ದಿದ್ದರೆ ಜಿಲ್ಲೆಯ ಒಟ್ಟಾರೆ ಪ್ರಮಾಣ ಹೆಚ್ಚಾಗುತ್ತಿತ್ತು. ಉಪ್ಪಾರ ಸಮುದಾಯದಲ್ಲಿ ಎಲ್ಲಿಯವರೆಗೆ ಶಿಕ್ಷಣದ ಮಹತ್ವದ ಅರಿವು ಮೂಡುವುದಿಲ್ಲವೋ ಅಲ್ಲಿಯವರೆಗೆ, ಸಮಾಜ ಅಭಿವೃದ್ಧಿಯಾಗುವುದಿಲ್ಲ’ ಎಂದು ಹೇಳಿದರು.

‘ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಪಡೆಯುವುದಲ್ಲ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ತೊಂದರೆ ಇಲ್ಲ. ಆದರೆ, ಆ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಸಂಪಾದಿಸುವುದು ಮುಖ್ಯ. ಶಿಕ್ಷಣ ಪಡೆಯುವುದರಿಂದ ಮೂಢನಂಬಿಕೆಗಳನ್ನು ದೂರಮಾಡಬಹುದು. ಪ್ರತಿಭಾ ಪುರಸ್ಕಾರದಂತಹ ವೇದಿಕೆಯು ಸಮುದಾಯದಲ್ಲಿ ಶಿಕ್ಷಣದ ಮಹತ್ವವನ್ನು ಸಾರುತ್ತದೆ’ ಎಂದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಅವರು ಮಾತನಾಡಿ, ‘ಪೋಷಕರು ಮಕ್ಕಳ ಜತೆ ನಿರಂತರ ಸಂಪರ್ಕವಿಟ್ಟುಕೊಂಡು, ಅವರ ಶಿಕ್ಷಣದ ಪ್ರಗತಿಗೆ ಪ್ರೋತ್ಸಾಹ ನೀಡಬೇಕು. ಚಾಮರಾಜನಗರ ಹಿಂದುಳಿದ ಜಿಲ್ಲೆ ಎನ್ನುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರ ಪ್ರತಿಭೆಯನ್ನು ಹೊರತಂದು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸ ಸಂಘಸಂಸ್ಥೆಗಳಿಂದ ನಡೆಯಬೇಕಿದೆ’ ಎಂದರು.

ಉಪನ್ಯಾಸಕ ಗೋವಿಂದರಾಜು ಅವರು ಮಾತನಾಡಿ, ‘ಆಧುನಿಕತೆಯ ಭರಾಟೆಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನೇ ಮರೆತಿದ್ದಾರೆ. ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತ್ಯುನ್ನತ ಸ್ಥಾನಗಳಿಸಿರುವ ಒಂಬತ್ತು ಮಂದಿ ವಿದ್ಯಾರ್ಥಿಗಳಿಗೆ ಪ್ರಥಮ-₹10 ಸಾವಿರ, ದ್ವಿತೀಯ-₹5000 ಹಾಗೂ ತೃತೀಯ ಬಹುಮಾನವಾಗಿ ₹2,500 ನಗದು ಹಣ ನೀಡಿ ಪುರಸ್ಕರಿಸಲಾಯಿತು.ಇವರ ಜತೆ ಇತರ 100 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ, ಲೆಕ್ಕಪರಿಶೋಧಕ ಧರ್ಮೇಂದ್ರ, ಬಾಲಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಮಹೇಶ್, ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ನಂದಿನಿ, ರಾಮಚಂದ್ರ, ಮಾದೇಶ್, ಬಾಗಳಿಮಹದೇವಸ್ವಾಮಿ, ಸೆಸ್ಕ್ ಲೆಕ್ಕಾಧಿಕಾರಿ ಮಹೇಶ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಸಿ.ಎಸ್.ನಾಗರಾಜು, ಉಪಾಧ್ಯಕ್ಷ ಬಿ.ಸ್ವಾಮಿ, ಖಜಾಂಚಿ ರವಿ, ಹೊಂಗನೂರು ಚಿಕ್ಕಸಿದ್ದು, ಶಿವಕುಮಾರ್, ನಾರಾಯಣ, ಕಾಳಪ್ಪ, ಮಹದೇವಸ್ವಾಮಿ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT