ಸೋಮವಾರ, ಜನವರಿ 18, 2021
19 °C
ಬಸ್‌ ಮಾಲೀಕರ ಸಿದ್ಧತೆ, ಜಿಲ್ಲಾಡಳಿತದಿಂದ ಹಲವು ಷರತ್ತುಗಳು, ಪ್ರಮುಖ ಮಾರ್ಗಗಳಲ್ಲಿ ಓಡಾಟ

ಚಾಮರಾಜನಗರದಲ್ಲಿ ಇಂದಿನಿಂದ ಖಾಸಗಿ ಬಸ್‌ ಸಂಚಾರ ಶುರು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎರಡು ತಿಂಗಳ ಬಳಿಕ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಸೋಮವಾರ (ಜೂನ್‌ 1) ರಸ್ತೆಗಳಿಯಲಿವೆ. ಕೋವಿಡ್‌–19 ತಡೆಗೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ನಾಲ್ಕನೇ ಹಂತದ ಲಾಕ್‌ಡೌನ್‌ ಅವಧಿ ಪೂರ್ಣಗೊಂಡನಂತರ ರಾಜ್ಯ ಸರ್ಕಾರ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಜಿಲ್ಲಾಡಳಿತ ಹಲವು ಷರತ್ತುಗಳೊಂದಿಗೆ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದೆ. ಆರಂಭದಲ್ಲಿ ಶೇ 50ರಷ್ಟು ಬಸ್‌ಗಳ ಸಂಚಾರಕ್ಕೆ ಮಾತ್ರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅನುಮತಿ ಕೊಟ್ಟಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟು 160 ಖಾಸಗಿ ಬಸ್‌ಗಳಿದ್ದು, ಮೊದಲ ದಿನ 40ರಿಂದ 50 ಬಸ್‌ಗಳನ್ನು ಓಡಿಸಲು ಮಾಲೀಕರು ನಿರ್ಧರಿಸಿದ್ದಾರೆ. ನಂತರ ಹಂತ ಹಂತವಾಗಿ ಬಸ್‌ಗಳ ಸಂಚಾರ ಹೆಚ್ಚಿಸುವುದು ಅವರ ಯೋಜನೆ.

‘ಸೋಮವಾರದಿಂದ ಶೇ 50ರಷ್ಟು ಬಸ್‌ಗಳ ಸಂಚಾರಕ್ಕೆ ನಮಗೆ ಅನುಮತಿ ಸಿಕ್ಕಿದೆ. ಆದರೆ, ನಾವು ಆರಂಭದಲ್ಲಿ 40ರಿಂದ 50 ಬಸ್‌ಗಳಷ್ಟೇ ಓಡಿಸುತ್ತೇವೆ. ಉದಾಹರಣೆಗೆ ಐದು ಬಸ್‌ ಹೊಂದಿರುವ ಮಾಲೀಕರು ಎರಡು ಬಸ್‌ಗಳು, ಮೂರು ಬಸ್‌ ಇರುವವರು ಒಂದು ಬಸ್ಸಿನ ಕಾರ್ಯಾಚರಣೆ ಆರಂಭಿಸಲಿದ್ದಾರೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ಎಚ್‌.ವಿ.ತ್ಯಾಗರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರಯಾಣಿಕರು ಹೆಚ್ಚು ಇರುವ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲಿವೆ. ಕೊಳ್ಳೇಗಾಲ, ಹನೂರು, ರಾಮಾಪುರ, ತಾಳಬೆಟ್ಟದವರೆಗೆ ಬಸ್‌ಗಳು ಹೋಗಲಿವೆ. ಇತ್ತ ಗುಂಡ್ಲುಪೇಟೆಗೆ ಸೇವೆ ಒದಗಿಸಲಿದ್ದೇವೆ. ಅಂತರಜಿಲ್ಲೆ ಮಾರ್ಗದಲ್ಲಿ ಮೈಸೂರಿಗೆ (ಟಿ.ನರಸೀಪುರ ಮಾರ್ಗ) ಮಾತ್ರ ಬಸ್‌ ಸಂಚರಿಸಲಿವೆ. ಜೂನ್‌ 10ರವರೆಗೆ ನಂಜನಗೂಡಿಗೂ ಬಸ್‌ ಹಾಕುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು. 

‘ಅಂತರರಾಜ್ಯ ಬಸ್‌ ಸಂಚಾರವೂ ಸದ್ಯಕ್ಕೆ ಇಲ್ಲ. ಸರ್ಕಾರ ಅನುಮತಿ ನೀಡಿದ ನಂತರ ತಾಳವಾಡಿ, ಸತ್ಯಮಂಗಲ, ಈರೋಡ್‌ ಮುಂತಾದ ಕಡೆಗಳಿಗೆ ಸೇವೆ ಒದಗಿಸುತ್ತೇವೆ’ ಎಂದು ಹೇಳಿದರು.

ಹಲವು ಷರತ್ತುಗಳು: ಸಂಚಾರಕ್ಕೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿ ಅವರು ಹಲವು ಷರತ್ತುಗಳನ್ನು ಒಡ್ಡಿದ್ದಾರೆ. ಬಸ್‌ಗಳಲ್ಲಿ ಸ್ಯಾನಿಟೈಸರ್ ಬಳಕೆ, ಪ್ರಯಾಣಿಕರು ಮಾಸ್ಕ್‌ ಧರಿಸುವುದು, ಬಸ್‌ಗಳಿಗೆ ಸೋಂಕು ನಿವಾರಕ ಸಿಂಪಡಿಸುವುದು ಕಡ್ಡಾಯಗೊಳಿಸಲಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. 

ನಗರಸಭೆ ನೆರವು: ‘ಷರತ್ತುಗಳನ್ನು ಪಾಲಿಸಲು ಕ್ರಮವಹಿಸಿದ್ದೇವೆ. ನಗರಸಭೆ ನಮಗೆ ನೆರವು ನೀಡಲಿದ್ದು, ಸೋಂಕು ನಿವಾರಕಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ. ಬಸ್‌ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ನೇಮಿಸಿ ಸ್ಯಾನಿಟೈಸ್‌ ಮಾಡಲಾಗುವುದು. ಥರ್ಮಲ್‌ ಸ್ಕ್ರೀನಿಂಗ್‌ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳನ್ನು ಕೈಗೊಳ್ಳಲಿದ್ದೇವೆ’ ಎಂದು ತ್ಯಾಗರಾಜ್‌ ಅವರು ತಿಳಿಸಿದರು. 

‘ವೃದ್ಧರಿಗೆ, ಗರ್ಭಿಣಿಯರು ಹಾಗೂ ಮಕ್ಕಳಿಗೆ ಸಂಚರಿಸಲು ಅವಕಾಶ ನೀಡಬಾರದು ಎಂಬ ಸೂಚನೆ ಇದೆ. ಜ್ವರ ಹಾಗೂ ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಬಸ್‌ಗೆ ಹತ್ತಿಸುವುದಿಲ್ಲ’ ಎಂದು ಅವರು ವಿವರಿಸಿದರು. 

ಮಾಲೀಕರಿಗೆ ₹3 ಕೋಟಿ ನಷ್ಟ

ಎರಡು ತಿಂಗಳು ಬಸ್‌ ಸಂಚರಿಸದೇ ಇದ್ದುದರಿಂದ ಖಾಸಗಿ ಬಸ್‌ ಮಾಲೀಕರಿಗೆ ಅಂದಾಜು ₹3 ಕೋಟಿಯಷ್ಟು ನಷ್ಟ ಸಂಭವಿಸಿದೆ. 

‘ಒಂದು ಬಸ್‌ಗೆ ಕನಿಷ್ಠ ₹2 ಲಕ್ಷ ನಷ್ಟವಾಗಿದೆ. ಪ್ರತಿ ತಿಂಗಳು ಪ್ರತಿಯೊಂದ್‌ ಬಸ್‌ಗೂ ₹16 ಸಾವಿರ ತೆರಿಗೆ ಪಾವತಿಸಬೇಕು. ಬಸ್‌ ಅನ್ನೇ ನಂಬಿದ್ದ ನೂರಾರು ಸಿಬ್ಬಂದಿಯೂ ಇದ್ದಾರೆ. ಅವರಿಗೆ ಹಣ, ಊಟ ಉಪಚಾರದ ವ್ಯವಸ್ಥೆಯನ್ನು ಮಾಲೀಕರು ಮಾಡಿದ್ದಾರೆ. ಬಸ್‌ಗಳಿಂದಾಗಿ ಪರೋಕ್ಷವಾಗಿ ಉದ್ಯೋಗ ಪಡೆದಿದ್ದವರಿಗೂ ನಷ್ಟವಾಗಿದೆ’ ಎಂದು ತ್ಯಾಗರಾಜ್‌ ಅವರು ಹೇಳಿದರು. 

‘ನಾವು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ನಮಗೆ ಅನುಕೂಲವಾಗುವಂತಹ ‌ಘೋಷಣೆಯನ್ನು ಸರ್ಕಾರ ಇದುವರೆಗೆ ಮಾಡಿಲ್ಲ’ ಎಂದು ಅವರು ಹೇಳಿದರು. 

ಸದ್ಯ ಹಳೆಯ ದರ

ಖಾಸಗಿ ಬಸ್‌ಗಳ ಟಿಕೆಟ್‌ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಆದರೆ, ದರವನ್ನು ಶೇ 18ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಮಾಲೀಕರಿಗೆ ಅವಕಾಶ ಕಲ್ಪಿಸಿದೆ. ಅದು ಶೀಘ್ರದಲ್ಲೇ ಜಾರಿಗೆ ಬರುವ ನಿರೀಕ್ಷೆ ಇದೆ.

‘ಮಂಗಳವಾರ (ಜೂನ್‌ 2) ತುಮಕೂರಿನಲ್ಲಿ ರಾಜ್ಯ ಖಾಸಗಿ ಬಸ್‌ ಮಾಲೀಕರ ಸಂಘದ ಸದಸ್ಯರು ಸಭೆ ಸೇರಲಿದ್ದು, ಅಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಮಾಲೀಕರೆಲ್ಲ ಸೇರಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ತ್ಯಾಗರಾಜ್‌ ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು