ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತೆಗಳ ಸಾಂಗತ್ಯದಲ್ಲಿ ಕೀಟ ಪ್ರಪಂಚ

ಬಿಆರ್‌ಟಿ ಕಾಡಿನ ವಿಭೂತಿ ಗುಡ್ಡದಲ್ಲಿ ತರಣಿ ಪುಷ್ಪಗಳ ಪರಿಮಳ
Last Updated 16 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಯಳಂದೂರು:ಚಿತ್ತ ಮಳೆಯ ಆರ್ಭಟಕ್ಕೆ ಚೆಲುವಿನ ಪುಷ್ಪಗಳು ಬಣ್ಣದ ರಂಗೋಲಿ ಬಿಡಿಸಿವೆ. ತರುಲತೆಗಳಸಾಂಗತ್ಯಕ್ಕೆ ನೂರಾರು ಕೀಟಗಳು ಮುಗಿಬಿದ್ದಿವೆ. ಬನದಿಂದ ಬೀಸುವ ತಂಗಾಳಿಗೆಪಾತರಗಿತ್ತಿಗಳು ರೆಕ್ಕೆ ಅಗಲಿಸಿ ಸಂಭ್ರಮಿಸುತ್ತಿದ್ದರೆ, ತರಣಿ ಹೂಗಳನ್ನು ಮುಡಿಯಲುಯುವತಿಯರೂ ಮುಗಿ ಬೀಳುತ್ತಿದ್ದಾರೆ.

ತಾಲ್ಲೂಕಿನ ಬಿಳಿಗಿರಿರಂಗನಬನದ ವಿಭೂತಿ ಗುಡ್ಡ ಮತ್ತು ಜರಿಮಲೆಗಳ ಕಾನನ ಹಸಿರೊದ್ದುಮಲಗಿದೆ. ವರುಣನ ಸಹವಾಸದಲ್ಲಿ ಭೂರಮೆ ತಂಪಾಗಿ, ಸಸ್ಯ ವೈವಿಧ್ಯತೆಗೆ ಜೀವತುಂಬಿದ್ದಾಳೆ. ಪಟಗಿ, ಚಕ್ರಲತೆ, ಹರಿವೆ, ಗ್ಲೋರಿಯೋಸಾ, ಯುಟ್ರಿಕ್ಸುಲೇರಿಯಂ, ಡ್ರಾಸೆರಾ, ತುತ್ತೂರು ಹೂಗಳು ಜೀವ ಜಗತ್ತಿಗೆ ದರ್ಶನ ನೀಡಲು ಸಿದ್ಧತೆ ನಡೆಸಿವೆ. ಅಳಿವಿನಂಚಿನ ಸುಮ ಕುಲಗಳಿಂದ ಮಕರಂದ ಸಂಗ್ರಹಿಸಿ, ಪರಾಗಸ್ಪರ್ಶ ಕ್ರಿಯೆಗೆ
ಚಾಲನೆ ನೀಡಲು ದುಂಬಿಗಳ ಜಾತ್ರೆಯೂ ಸಾಥ್‌ ನೀಡಿದೆ.

‘ಪುರಾಣಿಪೋಡು ಸಮೀಪದ ವಿಭೂತಿಗುಡ್ಡದಲ್ಲಿ ತುಂಬೆ, ತೊರೆಮಾವು, ದಡಸಲು, ಬೆಜ್ಜ,ನವಲಾದಿ, ಸಿಪ್ರೆ, ಕಗ್ಗಲಿ, ಮಂಡೇಸಿಗೆ, ಪಂಚಪತ್ರೆ, ನಾಗದಾಳೆ ಗಿಡಗಳು ಮಳೆಗೆ ಮರುಹುಟ್ಟು ಪಡೆಯುತ್ತಿವೆ. ಈ ಗುಡ್ಡವು ಮಾಕಳಿ ಬೇರು ಮತ್ತು ನೆಲನೆಲ್ಲಿ ಸಸ್ಯ ವರ್ಗಗಳನ್ನು ಕಾಪಿಟ್ಟಿದೆ. ಮಳೆ ಕೊರತೆ ಮತ್ತು ಲಂಟಾನ ಸಮೃದ್ಧತೆಯಿಂದ ವನೌಷಧಗಳು ಕುಂದುತ್ತಸಾಗಿದ್ದು, ಹೆಚ್ಚಾದ ವರ್ಷಧಾರೆಗೆ ಕೆಲವು ಪುಷ್ಪ ಸಂಕುಲಗಳು ಮತ್ತೆ ನಳನಳಿಸಿವೆ’ ಎನ್ನುತ್ತಾರೆ ಸೋಲಿಗರು.

‘ಅಕ್ಟೋಬರ್ ಆರಂಭದಲ್ಲಿ ಗೌರಿ ಹೂ (ಕರ್ನಾಟಕ ಫ್ಲವರ್) ರೆಕ್ಕೆ ಬಿಚ್ಚಿದೆ. ಹಳದಿ,ಕೆಂಪು ವರ್ಣದಿಂದ ಕಂಗೊಳಿಸುತ್ತದೆ. ಕೋಳಿ ಹುಂಜದ ಜೊಟ್ಟಿನಂತೆ ಎಳೆ ಬಿಸಿಲಿನಲ್ಲಿಎದ್ದು ಕಾಣುತ್ತದೆ. ಬೇಲಿಗಳ ಮಧ್ಯೆ ಹಾಗೂ ಕಲ್ಲು ಬಂಡೆಗಳ ಝರಿಗಳ ನಡುವೆ ಮೊಸರು ಚೆಲ್ಲಿದಂತೆ ಅರಳುವ ಗಿರಿ ಮಲ್ಲಿಗೆ ಒಂದು ಕಿಲೋ ಮೀಟರ್ ದೂರ ಸುವಾಸನೆ ಸ್ಫುರಿಸುತ್ತದೆ. ಇದರ ಜಾಡು ಹಿಡಿದು ಸಾಗುವ ಗೋಸುಂಬೆಗಳುಇವುಗಳ ಬಳಿ ಬರುವ ಕೀಟಗಳನ್ನು ಭಕ್ಷಿಸುತ್ತವೆ’ ಎಂದು ಹೇಳುತ್ತಾರೆ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

ಅರಿವಿನ ಕೊರತೆ:12 ವರ್ಷಗಳಿಗೆ ಒಮ್ಮೆ ಅರಳುವ ನೀಲಕುರುಂಜಿ ಹೂ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.ಆದರೆ, ನಮ್ಮ ಸುತ್ತಮುತ್ತಲ ಕಾನುಗಳಲ್ಲಿ ವಿಕಸಿಸುವ ಸಸ್ಯ ಕ್ಷೇತ್ರಗಳ ಬಗ್ಗೆ ಅರಿವಿನಕೊರತೆ ಎದುರಾಗಿದೆ. ಶುಷ್ಕ, ಶೋಲಾ, ಬೈಸೆ ಕಾಡು ಮತ್ತು ಜಲಾವರಗಳ ಬಳಿ ವಿಕಸಿಸುವ ಸುಮಸಂತತಿಗಳ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ. ತಜ್ಞರು ಪಶ್ಚಿಮ ಮತ್ತು ಪೂರ್ವಘಟ್ಟಕೂಡುವ ತಾಣಗಳಲ್ಲಿ ಇರಬಹುದಾದ ಹೂ ಮತ್ತು ಕೀಟ ಕುಲವನ್ನು ಪರಿಚಯಿಸಬೇಕು ಎನ್ನುತ್ತಾರೆಪರಿಸರ ಪ್ರಿಯರು.

ಸುವಾಸಿತ ತರಣಿ ಆಕರ್ಷಣೆ

ಕುಮಾರವ್ಯಾಸ ಭಾರತದಲ್ಲಿ ವರ್ಣಿಸಿರುವ ತರಣಿ ಪುಷ್ಪ ಈ ವರ್ಷದ ವಿಶೇಷ. ಇದು ಸದಾಸುವಾಸನೆ ಸೂಸುತ್ತದೆ. ಹಾಗಾಗಿ, ಜೇನು ಮತ್ತು ಇರುವೆಗಳು ಸದಾ ಮುತ್ತಿರುತ್ತವೆ. ತರಣಿ ಸಸ್ಯ ಹೂ ಬಿಟ್ಟರೆ, ಮಳೆ ಮತ್ತು ಬೆಳೆ ಹೆಚ್ಚುತ್ತದೆ. ಹಿಂಗಾರು ಮಳೆ ಸುರಿದಂತೆಹತ್ತಾರು ಬಗೆಯ ಹೂ ಮತ್ತು ಸಸಿಗಳು ಜೀವಕಳೆ ತರುತ್ತದೆ. ಹಸಿರು ಗುಡ್ಡಕ್ಕೆ
ಬಣ್ಣಬಣ್ಣದ ಚುಕ್ಕಿ ಇಟ್ಟಂತೆ ಆಕರ್ಷಿಸುತ್ತವೆ. ಪುಟ್ಟ ಪಕ್ಷಿಗಳನ್ನೂ ತನ್ನತ್ತ ಸೆಳೆಯುತ್ತದೆ.

‘ಕೆಲವು ಪುಷ್ಪಗಳು ಚೆಂದ ಕಂಡರೂ, ಅಪಾಯಕಾರಿ. ಒಮ್ಮೆ ಬಿಆರ್‌ಟಿಗಿರಿಶ್ರೇಣಿ ಸುತ್ತ ಕಣ್ಣು ಹಾಯಿಸಿದರೆ, ತರಾವರಿ ಪುಷ್ಪಗಳನ್ನು ಮನಸಾರೆ ಕಣ್ತುಂಬಿಕೊಳ್ಳಬಹುದು’ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT