ಚಾಮರಾಜನಗರ: ಕೋವಿಡ್ ನಿಯಂತ್ರಣಕ್ಕಾಗಿ ವಾರದ ನಾಲ್ಕು ದಿನಗಳ ಕಾಲ ಹೇರಲಾಗಿದ್ದ ಸಂಪೂರ್ಣ ಲಾಕ್‌ಡೌನ್ ನಂತರ ಸೋಮವಾರ ಬೆಳಿಗ್ಗೆ ನಗರದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂದಿದೆ.
ಗುರುವಾರದಿಂದ ಭಾನುವಾರದವರೆಗೂ ದಿನಸಿ ಖರೀದಿಗೆ ನಿರ್ಬಂಧ ಹೇರಲಾಗಿತ್ತು. ಸೋಮವಾರದಿಂದ ಬುಧವಾರದವರೆಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಇದರಿಂದ ಸೋಮವಾರ ನಗರದ ಎಲ್ಲ ದಿನಸಿ ಅಂಗಡಿಗಳೂ ಜನರಿಂದ ತುಂಬಿ ಹೋಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ದ್ವಿಚಕ್ರ ವಾಹನಗಳಲ್ಲಿ ಜನರು ಖರೀದಿಗಾಗಿ ಬಂದಿದ್ದರು.
ದಿನಸಿ ಅಂಗಡಿ ಜನರಿಂದ ತುಂಬಿ ಹೋಗಿತ್ತು.
ಹೀಗಾಗಿ, ಇಲ್ಲಿನ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿಗಳು, ಮಾರುಕಟ್ಟೆ,ರಾಚಯ್ಯ ಜೋಡಿ ರಸ್ತೆ, ಪಚ್ಚಪ್ಪ ವೃತ್ತ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ರೀತಿ ಬುಧವಾರವೂ ಪರಸ್ಪರ ಅಂತರ ಇಲ್ಲದೇ ಜನರು ಖರೀದಿ ಭರಾಟೆ ನಡೆಸಿದ್ದರು.