ಸೋಮವಾರ, ಮೇ 23, 2022
30 °C

ದೊಣ್ಣೆ ವರಸೆಗೆ ಬದುಕು ಮೀಸಲಿಟ್ಟ 'ಪುಟ್ಟಯ್ಯ'

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಗ್ರಾಮೀಣ ಕಲೆಗಳಲ್ಲಿ ಇನ್ನೂ ಉಸಿರಾಡುತ್ತಿರುವ ಕಲೆ ‘ದೊಣ್ಣೆ ವರಸೆ’. ಈ ಜನಪದ ಕಲೆ ಹಬ್ಬ, ಉತ್ಸವಗಳಲ್ಲಿ ಮಿಂಚಿ ಮಾಯವಾಗುತ್ತಿದೆ. ದಸರಾ, ರಂಗೋತ್ಸವ ಇಲ್ಲವೇ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಲೂ ದೊಣ್ಣೆ ವರಸೆಯ ಸಾಂಪ್ರದಾಯಿಕ ನೆಲೆಯನ್ನು ಕಾಣಬಹುದು. 

ಯರಿಯೂರು ಗ್ರಾಮದ ಪುಟ್ಟಯ್ಯ ಈ ಕಲೆಯನ್ನು ಪರಿಚಯಿಸಲು ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಬಯಲಾಟ ಹೊರತುಪಡಿಸಿ, ದೊಣ್ಣೆವರಸೆ ಹತ್ತಾರು ಕವಲಾಗಿ ಬೆಳೆದಿದೆ. ಬಹುತೇಕ ಪರಿಶಿಷ್ಟ ಜನಾಂಗದ ಮೂಲ ವರಸೆಯಾಗಿರುವ ಈ ಕಲೆಯ ಉಳಿಕೆ ಮತ್ತು ಕಲಿಕೆಗೆ ಅವರು ಸಮಯ ಇಟ್ಟಿದ್ದಾರೆ. ಹೀಗಾಗಿ, ಗುರುಗಳ ಮಾರ್ಗದರ್ಶನದಲ್ಲಿ ಎಳೆಯರು ಮತ್ತು ಯುವಕರು ದೊಣ್ಣೆ ವರಸೆ ಕಲಿಯುವ ಕಾಯಕದಲ್ಲಿ ಆಸಕ್ತರಾಗಿದ್ದಾರೆ.

‘40 ವರ್ಷಗಳಿಂದ ದೊಣ್ಣೆ ವರಸೆ ಕಲಿಸುತ್ತಿದ್ದೇನೆ. ಮದ್ದೂರು, ಕೆಸ್ತೂರು, ಗಣಿಗನೂರು ಗ್ರಾಮಗಳ ದಲಿತರ ಬೀದಿಯಲ್ಲಿ ಈಗಲೂ ನೂರಾರು ಜನರು ದೊಣ್ಣೆ ವರಸೆ ಅಭ್ಯಾಸ ಮಾಡುತ್ತಿದ್ದಾರೆ. ಚಾವಡಿಗಳ ಮುಂಭಾಗ ಈಗಲೂ ಮುಂಜಾನೆ ಮತ್ತು ಸಂಜೆ ಬೆತ್ತದ ಶಬ್ಧ
ಕೇಳಬಹುದು. 45 ದಿನಗಳಲ್ಲಿ ಕಲೆಯ ಎಲ್ಲ ವರಸೆಗಳು ಸಿದ್ಧಿಸುತ್ತವೆ. ಕೆಲವು ವಿದ್ಯಾರ್ಥಿಗಳು ಕಲಿತು ನಾಡಿನ ವಿವಿಧೆಡೆ ಕಾರ್ಯಕ್ರಮ ನೀಡುತ್ತಿದ್ದಾರೆ. ರಂಗಾಯಣ ಮತ್ತು ಬೀದಿ ನಾಟಕಗಳಲ್ಲೂ ಲಾಟಿ ಕಲೆಯನ್ನು ವೈವಿಧ್ಯಮಯವಾಗಿ ಪ್ರಚುರಪಡಿಸುತ್ತಾರೆ’ ಎಂದು ಪುಟ್ಟಯ್ಯ ಅವರು ಹೇಳಿದರು. 

ಮರೆಯಾಗಿರುವ ದೊಣ್ಣೆ ವರಸೆ ಅಭ್ಯಾಸ ಈಚೆಗೆ ಬೇಡಿಕೆ ಪಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದರ ಬಗ್ಗೆ ಪ್ರಚಾರ ಸಿಗುತ್ತಿದೆ.  

‘ನಾಡಿನ ಸಂಸ್ಕೃತಿ ಮತ್ತು ಮನೋಬಲ ಹೆಚ್ಚಿಸುವ ವೇದಿಕೆಯಾಗಿ ಮಕ್ಕಳು ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಏಕಾಗ್ರತೆ ಮತ್ತು ಕುಶಲತೆ ಬಹುಬೇಗ ಸಿದ್ಧಿಸುತ್ತದೆ. ಹಾಗಾಗಿ, ಪೋಷಕರು ಕನ್ನಡಿಗರ ಕಲೆಯನ್ನು ಮತ್ತೆ ಉನ್ನತ ಮಟ್ಟಕ್ಕೆ 
ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಚಿಂತಿಸಬೇಕು’ ಎನ್ನುತ್ತಾರೆ ಮದ್ದೂರು ಯಜಮಾನರು.

‘ಕತ್ತಿವರಸೆ, ಸಾದಾವರಸೆ, ಚಂಡುವರಸೆ, ಬಾಕುವರಸೆ, ವಾರ್ನಾ.. ಮೊದಲಾದ ಶೈಲಿಗಳಿವೆ. ದೇಹದ ಬಾಗು ಬಳುಕಿಗೆ ಅನುಗುಣವಾಗಿ ದೊಣ್ಣೆವರಸೆ ಸಾಗುತ್ತದೆ. ಜಾತ್ರೆ, ಕರಗ, ಮೆರವಣಿಗೆ ಸಂದರ್ಭಗಳಲ್ಲಿ ಗ್ರಾಮೀಣ ಜನರು ಈ ಕಲೆಯಲ್ಲಿ ತಮ್ಮ ಕೈಚಳಕ ತೋರುತ್ತಾರೆ.  ಈ ಕಲೆ ಸಾದರ ಪಡಿಸುವವರಿಗೆ ಆತ್ಮವಿಶ್ವಾಸ ಮತ್ತು ಚತುರತೆ ತಾನೇ ತಾನಾಗಿ ಸಿದ್ಧಿಸುತ್ತದೆ. ಮಕ್ಕಳಿಂದ ವೃದ್ಧರವರೆಗೂ ಕಲಿಯುವವರು ಇದ್ದಾರೆ’ ಎಂದು ದೊಣ್ಣೆವರಸೆ ಗುರುಗಳಾದ ಪುಟ್ಟಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ದೊಣ್ಣೆ ವರಸೆ ಚರಿತ್ರೆ

ಕರ್ನಾಟಕದ ಇತಿಹಾಸದಲ್ಲಿ ದೊಣ್ಣೆ ವರಸೆ ಕಲಿತವರನ್ನು ಸುಂಕ ವಸೂಲಿಗೆ ಕಳುಹಿಸಲಾಗುತ್ತಿತ್ತು ಎಂದು ಹೇಳುತ್ತದೆ ಇತಿಹಾಸ. ರಾಜ್ಯ ರಕ್ಷಣೆಯಲ್ಲಿ ಕಳ್ಳಕಾಕರನ್ನು ತಡೆಯಲು ಕೋಲನ್ನು ಕುಶಲತೆಯಿಂದ ಬಳಸಬೇಕಿತ್ತು. ಲಾಟಿ ತಿರುಗಿಸಲು ಮುಂಜಾನೆ ಸಾಮು ಮಾಡಬೇಕಿತ್ತು. ವ್ಯಾಯಾಮಕ್ಕೂ ಅವಕಾಶ ಇತ್ತು, ರಟ್ಟೆಯಲ್ಲಿ ಕಸುವು ಇದ್ದವರು ಕೋಲು ಬಳಸಿ 64 ಪ್ರದರ್ಶನ ನೀಡುತ್ತಿದ್ದರು. ದಲಿತ, ಬೇಡ, ನಾಯಕ, ಉಪ್ಪಾರ ಜನಾಂಗಗಳಲ್ಲಿ ಇನ್ನೂ ಈ ಕಲೆಗಳನ್ನು ಪೋಷಿಸಿಕೊಂಡು ಬರಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು