ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಭಜನೆಗೆ ಆಯಾಮ ತುಂಬಿದ ಮಹಾದೇವಯ್ಯ

2004ರಿಂದ ಭಜನಾ ಮೇಳ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿರುವ ಕಲಾವಿದ
Last Updated 26 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಯಳಂದೂರು:ಭಜನೆಗೆ ಭಕ್ತಿಯೇ ಆಧಾರ. ರಾಗ, ತಾಳ ಜ್ಞಾನಕ್ಕಿಂತ ಧ್ಯಾನ ಮುಖ್ಯ. ಕೀರ್ತನೆ, ಭಜನೆ
ನೆಲದ ದೇವರನ್ನು ಆಲಿಸುವವರ ಹೃದಯಕ್ಕೆ ಸುಲಲಿತವಾಗಿ ದಾಟಿಸುವ ಸಾಧನ. ಹತ್ತಾರು ತಾಸು
ಹಾಡುವಾಗ ಮೌಲ್ಯಗಳ ಮಂಟಪ ಕಟ್ಟಬೇಕು. ಚಪ್ಪಾಳೆ ಹಾಕತ್ತಲೇ ಶಿವಧ್ಯಾನ ಸಾಧ್ಯ...

– ಹೀಗೆ ಸಾಗುತ್ತವೆ 20 ವರ್ಷಗಳಿಂದ ಜನಪದರ ಕಾರ್ಯಕ್ರಮ ನೀಡುತ್ತ ಬಂದಿರುವ 'ಗುರು ಪೇರ್ಸಿಂಗ್
ಮೂರ್ತಿ' ಸತ್ಸಂಗ ಭಜನಾ ಮಂಡಳಿಯ ಕೋಟಂಬಳ್ಳಿ ಮಹಾದೇವಯ್ಯ ಅವರ ಅಚಲ ಮಾತುಗಳು.

ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಸಣ್ಣಪುಟ್ಟ ಕಾಯಕ ಮಾಡುತ್ತಲೇ, 2004ರಲ್ಲಿ ಸಮಾನ
ಮನಸ್ಕರ ಭಜನಾ ಮೇಳ ಕಟ್ಟಿದರು. ಊರೂರುಗಳಲ್ಲಿ ಹಾಡಿದರು. ಪ್ರತಿ ಸಂಜೆ ಜಗುಲಿಗಳ ಮೇಲೆ
ಕುಳಿತು ಮಹದೇಶ್ವರ, ಬಿಳಿಗಿರಿರಂಗ, ಮಂಟೇಸ್ವಾಮಿ, ದೊಡ್ಡಮ್ಮ, ಚಿಕ್ಕಮ್ಮ.., ಹೀಗೆ
ಹತ್ತಾರು ದೈವಗಳ ಲೀಲೆಗಳನ್ನು ಭಜನೆಯ ಭಾಗವಾಗಿಸಿದರು. ಸಂಜೆ ಕಾಲಹರಣ ಮಾಡದೆ ಜನ
ಸಮುದಾಯದ ಬೇಸರಿಕೆ-ಆಸರಿಕೆ ನೀಗುವ ಮನಸ್ಥಿತಿಯಿಂದ ಕಾರ್ಯಕ್ರಮಗಳನ್ನು ನೀಡುತ್ತ
ಬಂದರು. ಜಾತ್ರೆ, ಹಬ್ಬ, ಮರಣ, ಹುಟ್ಟು ಮೊದಲಾದ ಸಂಭ್ರಮಗಳಲ್ಲಿ ತೊಡಗಿಕೊಳ್ಳುವ ಮೂಲಕ
ಭಜನೆಯ ಭಾವವನ್ನು ಪಸರಿಸಿದರು.

‘ಗ್ರಾಮದಲ್ಲಿ ಹಲವಾರು ಭಜನಾ ತಂಡಗಳಿವೆ. ಇದರಲ್ಲಿ ಐದಾರು ಮಂದಿ ಗುರು ನಿಂಗರಾಜಪ್ಪಅವರ ಮಾರ್ಗದರ್ಶನದಲ್ಲಿ ಭಜನಾ ಕಲೆಯನ್ನು ಶಾಸ್ತ್ರೀಯವಾಗಿ ಕಲಿತೆವು. ಆರಂಭದಲ್ಲಿನೆರೆ ಮನೆಗಳಿಗೆ ಸೀಮಿತವಾಗಿದ್ದ ಭಜನಾ ಕೈಂಕರ್ಯ ಮುಂದೆ ಪಟ್ಟಣ ಮತ್ತು ನಗರಗಳತ್ತಲೂ ವಿಸ್ತರಿಸಿತು. ಆಕಾಶವಾಣಿ, ಕನ್ನಡ ಮತ್ತು ಸಂಸ್ಖೃತಿ ಇಲಾಖೆಯಕಾರ್ಯಕ್ರಮಗಳಲ್ಲೂ ನಮಗೆ ವೇದಿಕೆ ಸಿಕ್ಕಿತು. ಹೀಗೆ. ಸಾವಿರಾರು ಕಾರ್ಯಕ್ರಮಗಳ ಹಿಂದೆತಂಡದ ಸದಸ್ಯರ ಸಹಕಾರ ಮನೋಭಾವವು ಮುಖ್ಯವಾಗಿದೆ' ಎಂದು ಹೇಳುತ್ತಾರೆ ಮಹಾದೇವಯ್ಯ.

‘ಗ್ರಾಮೀಣ ಭಾಗಗಳಲ್ಲಿ ಈಗಲೂ ಭಜನೆ ಬದುಕಿನ ಭಾಗವಾಗಿದೆ. ಹಾಗಾಗಿ, ಅನಕ್ಷರಸ್ಥರು ಭಜನಾ ಮೇಳಗಳಿಗೆ ಬರುತ್ತಾರೆ. ನಮ್ಮ ಸತ್ಸಂಗದಲ್ಲಿ ಸ್ತ್ರೀಯರು ಹಾಡುತ್ತಾರೆ. ಯುವಕರು ಸ್ವರಸೇರಿಸುತ್ತಾರೆ. ವೃದ್ಧರೂ ಮಾರ್ಗದರ್ಶನ ಮಾಡುತ್ತಾರೆ. ಒಟ್ಟಾರೆ ತಂಡದಲ್ಲಿ ಮೂರು ತಲೆಮಾರಿನ ಭಕ್ತರು ಇದ್ದಾರೆ. ಇದು ನಮ್ಮ ಸತ್ಸಂಗದ ಶ್ರದ್ಧೆ, ದೇವರ ಮೇಲಿನ ಭಕ್ತಿಎರಡರ ಸಂಗಮವಾಗಿ ರೂಪು ತಳೆದಿದೆ. ಕಲಿಯುವ ಮಕ್ಕಳು ಅನೌಪಚಾರಿಕವಾಗಿ ಪಾಲ್ಗೊಳ್ಳುವ ಮೂಲಕ ಭಜನೆಯ ಲಾಲಿತ್ಯವನ್ನು ಒಲಿಸಿಕೊಳ್ಳುತ್ತಾರೆ’ ಎಂದು ತಂಡದ ರತ್ನಮ್ಮ, ಜವರಯ್ಯ, ಸಿಂಡಯ್ಯ, ಕುಮಾರಸ್ವಾಮಿ ಮತ್ತು ಭಾಗ್ಯ ಸಂತಸದಿಂದ ಹೇಳುತ್ತಾರೆ.

ಕಡಿಮೆ ಸಂಗೀತ ಪರಿಕರ

ರಾಮನವಮಿ, ಹನುಮ ಜಯಂತಿ, ಶಿವರಾತ್ರಿಗಳಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳು ಇರುತ್ತವೆ.ಇವುಗಳ ನಡುವೆ ಸತ್ತವರು, ಕಟ್ಟವರ ಮನೆಗಳಲ್ಲೂ ನಮಗೆ ಮೊದಲ ಮರ್ಯಾದೆ ಸಲ್ಲುತ್ತದೆ.ತಿಂಗಳಿಗೆ ಹತ್ತಾರು ಆಹ್ವಾನಗಳು ಕಾದಿರುತ್ತವೆ. ಶುಲ್ಕ, ಮುಂಗಡ ಯಾವುದಕ್ಕೂ ಒತ್ತಾಯಇಲ್ಲ. ಕೊಟ್ಟರೆ ಉಂಟು, ಇಲ್ಲವೇ ನಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತಲುಪುತ್ತೇವೆ ಎಂದು ಹೇಳುತ್ತಾರೆ ಮಹಾದೇವಯ್ಯ.

‘ಭಜನೆಯಲ್ಲಿ ಸಂಗೀತ ವಾದನಗಳಿಗಿಂತ ಸಾಹಿತ್ಯವೇ ಮುನ್ನಲೆ ಪಡೆದಿರುತ್ತದೆ. ಅತ್ಯಂತಕಡಿಮೆ ಪರಿಕರಗಳಿಂದಲೇ ಭಜನೆಗೆ ದೈವತ್ವ ತುಂಬಬೇಕಿದೆ. ಖಂಜಿರ, ದಮಡಿ, ಗೆಜ್ಜೆ,ತಾಳ, ಶ್ರುತಿ ಪೆಟ್ಟಿಗೆಗಳಿಂದಲೇ ಭಕ್ತಿಯ ಸಾಂಗತ್ಯ ಕಟ್ಟಿಕೊಡಬೇಕು. ಕೆಲವರುಹಾರ್ಮೋನಿಯಂ ಬಳಸುತ್ತಾರೆ. ಒಟ್ಟಾರೆ, ಭಜನೆಗೆ ಎಲ್ಲರನ್ನು ಸೆಳೆಯುವ ಕಲಕಂಠ, ತಂಬೂರಿಸಾನಿಧ್ಯದಿಂದ ಭಜನೆಯ ವೈಭವ ಸಾರಬಹುದು’ ಎಂದು ಅವರು 'ಪ್ರಜಾವಾಣಿ'ಗೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT