ಶನಿವಾರ, ಜುಲೈ 31, 2021
27 °C
ಮೂರು ವಾರಗಳ ನಂತರ ಸ್ವಲ್ಪ ಇಳಿದ ಕೊತ್ತಂಬರಿ ಸೊಪ್ಪಿನ ಬೆಲೆ

ಚಾಮರಾಜನಗರ | ಹೂವಿಗೆ ಕುಸಿದ ಬೇಡಿಕೆ, ಬೀನ್ಸ್‌ ಮತ್ತಷ್ಟು ಅಗ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಣ್ಣು, ತರಕಾರಿ, ಹೂವು, ಮಾಂಸದ ಧಾರಣೆಯಲ್ಲಿ ಈ ವಾರ ಗಮನಾರ್ಹವಾದ ಬದಲಾವಣೆ ಕಂಡು ಬಂದಿಲ್ಲ. ತರಕಾರಿಗಳ ಪೈಕಿ ಬೀನ್ಸ್‌ ಬೆಲೆ ಕುಸಿದಿದೆ. ಮೂರು ವಾರಗಳಿಂದ ಗಗನಮುಖಿಯಾಗಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರ ಸ್ವಲ್ಪ ಕಡಿಮೆಯಾಗಿದೆ. 

ಕೆಲವು ವಾರಗಳಿಂದ ಸ್ವಲ್ಪ ದುಬಾರಿಯಾಗಿದ್ದ ಬೀನ್ಸ್‌ನ ಬೆಲೆ ಈ ವಾರ ಕಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ ಬೀನ್ಸ್‌ ₹25ರಿಂದ ₹30ಕ್ಕೆ ಸಿಗುತ್ತಿದೆ. ಸುಡು ಬೇಸಿಗೆಯಲ್ಲಿ ‘ಘಾಟು’ ಹೆಚ್ಚಿಸಿದ್ದ ಕೊತ್ತಂಬರಿ ಸೊಪ್ಪಿನ ಬೆಲೆಯೂ ಕೊಂಚ ಇಳಿದಿದೆ. ನಾಟಿ ಕೊತ್ತೊಂಬರಿ ಸೊಪ್ಪು ಕಟ್ಟಿಗೆ ₹25–₹30ಕ್ಕೆ ಮಾರಾಟವಾಗುತ್ತಿದೆ. ಎರಡು ವಾರಗಳಿಂದೀಚೆಗೆ ಇದರ ಬೆಲೆ ₹50ರಷ್ಟಿತ್ತು. 

‘ಕೊತ್ತಂಬರಿ ಸೊಪ್ಪು ಹಾಗೂ ಬೀನ್ಸ್‌ ಈಗ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಹಾಗಾಗಿ, ಬೆಲೆ ಕಡಿಮೆಯಾಗಿದೆ. ಈರುಳ್ಳಿ, ಟೊಮೆಟೊ ಕ್ಯಾರೆಟ್‌ ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆಷಾಢ ಮಾಸ ಸಮೀಪಿಸುತ್ತಿದ್ದಂತೆಯೇ ಹೂವಿಗೆ ಬೇಡಿಕೆ ಕಡಿಮೆ ಆಗುವುದಕ್ಕೆ ಆರಂಭವಾಗಿದೆ. ಹಾಗಾಗಿ, ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ₹800ರಿಂದ ₹1,000ದವರೆಗೆ ಇದ್ದ ಕನಕಾಂಬರದ ಬೆಲೆ ಈ ವಾರ ₹600ರಿಂದ ₹800ರವರೆಗೆ ಇದೆ. ಮಲ್ಲಿಗೆ ಕೆ.ಜಿ.ಗೆ ₹150 ಇದೆ. ಚೆಂಡು ಹೂವು ₹20, ಸುಗಂಧರಾಜ ₹40 ಇದೆ.

‘ಆಷಾಢ ಮಾಸ ಸಮೀಪದಲ್ಲೇ ಇರುವುದರಿಂದ, ಶುಭ ಸಮಾರಂಭಗಳ ಮುಹೂರ್ತಗಳು ಕಡಿಮೆಯಾಗುತ್ತಿವೆ. ಹಾಗಾಗಿ, ಹೂವುಗಳಿಗೆ ಬೇಡಿಕೆ ಕುಸಿಯುತ್ತಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಹೇಳಿದರು. 

ಕಿತ್ತಳೆ, ಮೂಸಂಬಿ ಬಿಟ್ಟರೆ ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕೆ.ಜಿ.ಗೆ ₹160 ಇರುವ ಸೇಬು ಖರೀದಿಸಲು ಜನರು ಇನ್ನೂ ಯೋಚಿಸುತ್ತಿದ್ದಾರೆ. ಕಿತ್ತಳೆ, ಮೂಸಂಬಿ ಬೆಲೆ ಕೆ.ಜಿ.ಗೆ ₹10ರಷ್ಟು ಇಳಿದಿದೆ. 

ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆ ಸ್ವಲ್ಪ ಅಗ್ಗವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ 100 ಮೊಟ್ಟೆಗೆ ₹465 ಬೆಲೆ ಇತ್ತು. ಸೋಮವಾರ ₹445ಕ್ಕೆ ಕುಸಿದಿದೆ. ಚಿಕನ್‌ ಬೆಲೆ ₹180ರಿಂದ ₹200ರವರೆಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು