ಶನಿವಾರ, ಮಾರ್ಚ್ 6, 2021
24 °C
‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಮಕ್ಕಳ ಮನೆಗೆ ಭೇಟಿ

ಕೊಳ್ಳೇಗಾಲ | ವಿಶೇಷ ಮಕ್ಕಳಿಗೆ ಥೆರಪಿ: ಸಚಿವ ಸುರೇಶ್‌ಕುಮಾರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯದಿಂದಾಗಿ ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿ ಮನೆಯಲ್ಲೇ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ತಕ್ಷಣದಿಂದಲೇ ಥೆರಪಿ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. 

ಎರಡು ತಿಂಗಳುಗಳಿಂದ ಥೆರಪಿಸ್ಟ್‌ಗಳು ಲಭ್ಯ ಇಲ್ಲದಿರುವುದರಿಂದ ಮನೆಯಲ್ಲೇ ಶಿಕ್ಷಣ ಪಡೆಯುತ್ತಿರುವ ‘ವಿಶೇಷ’ ಮಕ್ಕಳಿಗೆ ಚಿಕಿತ್ಸೆ (ಮಸಾಜ್‌) ಸಿಗದೆ ಮಾಂಸ ಖಂಡಗಳು ಬಿಗಿಯಾಗಿ ಮಕ್ಕಳು ಕಷ್ಟಪಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯು ಮೇ 3ರ ಸಂಚಿಕೆಯಲ್ಲಿ ವಿಶೇಷ ವರದಿ (ಮಾಂಸಗಳ ಬಿಗಿತ: ಕಂಗೆಟ್ಟ ಎಳೆಯರು) ಮೂಲಕ ಇಲಾಖೆಯ ಗಮನಸೆಳೆದಿತ್ತು.

ಥೆರಪಿಸ್ಟ್‌ಗಳ ಗುತ್ತಿಗೆ ಅವಧಿ ಮಾರ್ಚ್‌ನಲ್ಲೇ ಮುಗಿದಿದ್ದರಿಂದ, ಅವರು ಚಿಕಿತ್ಸೆ ನೀಡಲು ಬಂದಿಲ್ಲ. ಹೊಸದಾಗಿ ನೇಮಕಮಾಡಬೇಕಿದೆ ಎಂಬ ಮಾಹಿತಿಯನ್ನು ಜಿಲ್ಲಾ ಸಾರ್ವಜನಿಕ ಇಲಾಖೆ ನೀಡಿತ್ತು. 

ಈ ವರದಿಯನ್ನು ಗಮನಿಸಿರುವ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಬುಧವಾರ ಕೊಳ್ಳೇಗಾಲ ಮುಡಿಗುಂಡ ಬಡಾವಣೆಯ ನಾಯಕರ ಬೀದಿಯಲ್ಲಿ ಇರುವ ಗೃಹ ಆಧಾರಿತ ಶಿಕ್ಷಣಕ್ಕೆ ಒಳಪಟ್ಟಿದ್ದ ವಿದ್ಯಾರ್ಥಿ ಅಖಿಲ ಮತ್ತು ಸುಶ್ಮಿತಾ ಎಂಬ ಇಬ್ಬರು ವಿಶೇಷ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸಿದರು. ಎದುರಿಸುತ್ತಿರುವ ಕಷ್ಟದ ಬಗ್ಗೆ ಮಾಹಿತಿ ನೀಡಿದರು. 

ಇದನ್ನೂ ಓದಿ: ಲಾಕ್‌ಡೌನ್‌: ಮಾಂಸಖಂಡಗಳ ಬಿಗಿತ; ಕಂಗೆಟ್ಟ ಎಳೆಯರು

ವಿದ್ಯಾರ್ಥಿನಿ ಅಖಿಲಾ ಮಾತನಾಡಿ, ನಾವೂ ಚೆನ್ನಾಗಿ ಓದಿ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಆಸೆ ಇದೆ. ಆದರೆ, ಬಡವರಾಗಿರುವುದರಿಂದ ಓದುವುದು ಕಷ್ಟವಾಗುತ್ತದೆ. ಎರಡು ತಿಂಗಳುಗಳಿಂದ ನಮಗೆ ಥೆರಪಿ ಸಿಗುತ್ತಿಲ್ಲ. ಇದರಿಂದ ಕಷ್ಟವಾಗುತ್ತಿದೆ’ ಎಂದಳು.

ಸುಶ್ಮಿತಾ ಮಾತನಾಡಿ, ‘ನನಗೆ ಕಿವಿ ಸರಿಯಾಗಿ ಕೇಳುವುದಿಲ್ಲ. ಕಿವಿಗೆ ಅಳವಡಿಸುವ ಯಂತ್ರ ಕೆಟ್ಟು ಹೋಗಿದೆ’ ಎಂದಳು.

ಇದಕ್ಕೆ ಉತ್ತರಿಸಿದ ಸಚಿವರು, ‘ನೀವು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ನಿಮ್ಮ ಶಿಕ್ಷಣದ  ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುತ್ತದೆ. ಮಸಾಜ್ (ಥೆರಪಿ) ಮಾಡಲು ಕಳೆದ ಎರಡು ತಿಂಗಳಿಂದ ಬರುತ್ತಿಲ್ಲ ಎಂಬ ವಿಷಯ ನನಗೆ ತಿಳಿದಿದೆ. ಇನ್ನೂ ಎರಡು ಮೂರು  ದಿನದೊಳಗೆ ಮಸಾಜ್ (ಥೆರಪಿ) ಮಾಡುವವರು ಬರುತ್ತಾರೆ. ಯೋಚಿಸಬೇಡಿ’ ಎಂದು ಭರವಸೆ ನೀಡಿದರು. 

ಸ್ಥಳದಲ್ಲೇ ಇದ್ದ ಡಿಡಿಪಿಐ ಎಸ್‌.ಟಿ.ಜವರೇಗೌಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದಾಗ, ಥೆರಪಿಸ್ಟ್‌ಗಳ ನೇಮಕಾತಿಗೆ ಅನುದಾನ ಇನ್ನು ಬಿಡುಗಡೆಯಾಗಬೇಕಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌ ಅವರು, ‘ಅನುದಾನ ಬಿಡುಗಡೆ ಮಾಡಲಾಗುವುದು. ತಕ್ಷಣವೇ ಥೆರಪಿಗೆ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

ಶಾಸಕ ಎನ್.ಮಹೇಶ್, ನಗರಸಭೆ ಸದಸ್ಯೆ ಪುಷ್ಪಲತಾ,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ತಹಶೀಲ್ದಾರ್ ಕುನಾಲ್, ಡಿವೈಎಸ್‌ಪಿ ನವೀನ್ ಕುಮಾರ್, ಸಿಪಿಐ ಶ್ರೀಕಾಂತ್ ಮತ್ತಿತರರು ಇದ್ದರು. 

ಪರೀಕ್ಷೆ ಮಾಡಬೇಕಾ, ಬೇಡವಾ?

ನಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಮಕ್ಕಳಾದ ಶಶಾಂಕ್, ಮಂಟೇಸ್ವಾಮಿ, ಕೀರ್ತನ, ಮೇಘನ, ದಿವ್ಯ ಮಕ್ಕಳ ಜೊತೆ ಸಚಿವರು ಸಂವಾದ ನಡೆಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಬಹುದೇ? ನೀವು ಹೇಳಿ ಪರೀಕ್ಷೆ ಮಾಡೋಣವೇ ಅಥವಾ ಬೇಡವಾ ಎಂದು  ಕೇಳಿದರು.  ಇದಕ್ಕೆ ಉತ್ತರಿಸಿದ ಮಕ್ಕಳು, ‘ಪರೀಕ್ಷೆ ನಡೆಸಬೇಕು. ನಾವು  ಬರೆಯುವುದಕ್ಕೆ ಸಿದ್ಧರಾಗಿದ್ದೇವೆ’  ಎಂದರು. 

‘ಪ್ರತಿನಿತ್ಯ ಮಧ್ಯಾಹ್ನ 3 ರಿಂದ 4.30ವರೆಗೆ ಚಂದನ ಟಿವಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧ ಪಟ್ಟ ಮಾಹಿತಿ ಬರುತ್ತದೆ. ಕಡ್ಡಾಯವಾಗಿ ಎಲ್ಲರೂ ವೀಕ್ಷಣೆ ಮಾಡಿ. ಪರೀಕ್ಷೆಗೆ ಎಲ್ಲರೂ ಸಿದ್ದರಾಗಿ. ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸಲು ಯೋಚಿಸಲಾಗುತ್ತಿದೆ. ಕೋವಿಡ್‌–19 ಬಗ್ಗೆ ಬಗ್ಗೆ ಮಕ್ಕಳು ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

ಥೆರಪಿಸ್ಟ್‌ಗಳನ್ನು ಕಳುಹಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಥೆರಪಿಸ್ಟ್‌ಗಳೊಂದಿಗೂ ಮಾತನಾಡಿದ್ದೇವೆ. ಗುರುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಡಿಸಿಪಿಐ ಎಸ್‌.ಟಿ.ಜವರೇಗೌಡ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು