ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌: ‘ಗಾಬರಿ ಬೇಡ, ಧೈರ್ಯವಾಗಿ ಪರೀಕ್ಷೆ ಎದುರಿಸಿ’

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್‌ ಸಲಹೆ
Published 6 ಮಾರ್ಚ್ 2024, 6:31 IST
Last Updated 6 ಮಾರ್ಚ್ 2024, 6:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪರೀಕ್ಷೆ ಬಗ್ಗೆ ಗಾಬರಿ, ಭಯ ಪಡಬೇಡಿ. ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ. ಅದೇ ಮಾದರಿಯ ಪ್ರಶ್ನೆಗಳು ಅಂತಿಮ ಪರೀಕ್ಷೆಯಲ್ಲೂ ಬರುತ್ತವೆ. ಅನ್ವಯಿಕ ಪ್ರಶ್ನೆಗಳಿಗೆ ಸ್ವಲ್ಪ ಯೋಚಿಸಿ ಉತ್ತರಿಸಿ. ಚೆನ್ನಾಗಿ ಅಭ್ಯಾಸ ಮಾಡಿ...’

2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜುಗೊಳ್ಳುತ್ತಿರುವ ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್‌ ನೀಡಿರುವ ಸಲಹೆ ಇದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂಗವಾಗಿ ‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಫೋನ್‌ –ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳ ವಿವಿಧ ಕಡೆಗಳಿಂದ ಪೋಷಕರು, ಮಕ್ಕಳು ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಕ್ಕಳು ಹಾಗೂ ಪೋಷಕರಲ್ಲಿದ್ದ ಗೊಂದಲಗಳನ್ನು ಪರಿಹರಿಸಿದರು. 

ಒಂದು ಗಂಟೆ ಅವಧಿಯ ಕಾರ್ಯಕ್ರಮ ಒಂದೂವರೆ ಗಂಟೆ ನಡೆಯಿತು. 35ಕ್ಕೂ ಹೆಚ್ಚು ಮಂದಿ ಕರೆ ಮಾಡಿದರು. ಸಮಯದ ಅಭಾವದಿಂದ 26 ಕರೆಗಳನ್ನಷ್ಟೇ ಸ್ವೀಕರಿಸಲು ಸಾಧ್ಯವಾಯಿತು. ಪೋಷಕರಿಗಿಂತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿದ್ದರು. 

ಭಯ ಬೇಡ: ಕೊಳ್ಳೇಗಾಲದಿಂದ ಕರೆ ಮಾಡಿದ್ದ ಪೋಷಕಿ ಲತಾ, ಹನೂರು ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕೇಯನ್‌ ಅವರು ಪರೀಕ್ಷಾ ಭಯ ಎದುರಿಸುವುದು ಹೇಗೆ ಎಂಬ ಬಗ್ಗೆ ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಅರಸ್‌, ‘ಪರೀಕ್ಷೆ ಬಗ್ಗೆ ಭಯ ಪಡಬೇಕಾಗಿಲ್ಲ. ಈಗಾಗಲೇ ಜಿಲ್ಲಾ,  ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆದಿವೆ. ಪ್ರಶ್ನೆಗಳು ಹೇಗೆ ಬರುತ್ತವೆ ಎಂಬ ಚಿತ್ರಣ ಎಲ್ಲರಿಗೂ ಗೊತ್ತಾಗಿದೆ. ಅದೇ ಮಾದರಿಯಲ್ಲಿ ಪ್ರಶ್ನೆಗಳು ಬರಲಿವೆ. ಈಗಾಗಲೇ ಭರವಸೆ ತುಂಬುವ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇನ್ನೂ 20 ದಿನಗಳು ಇವೆ. ಚೆನ್ನಾಗಿ ಓದಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಪಠ್ಯಪುಸ್ತಕಗಳನ್ನು ಓದಿ. ಕಷ್ಟ ಎನಿಸಿದ್ದನ್ನು ಬರೆದು ಕಲಿಯಿರಿ’ ಎಂದು ಸಲಹೆ ನೀಡಿದರು. 

ಸ್ಕ್ವಾಡ್‌ ಎಂದರೆ ಭಯ: ಕೊಳ್ಳೇಗಾಲದ ಪೋಷಕ ಚಂದ್ರು ಅವರು ‘ನನ್ನ ಮಗಳು ಚೆನ್ನಾಗಿ ಓದುತ್ತಾಳೆ. ಅಂಕಗಳು ಚೆನ್ನಾಗಿ ಬರುತ್ತಿವೆ. ವಾರ್ಷಿಕ ಪರೀಕ್ಷೆಯಲ್ಲಿ ಮೇಲ್ವಿಚಾರಕರಾಗಿ ಬೇರೆ ಶಿಕ್ಷಕರು ಇರುತ್ತಾರೆ. ಅವರು ಪರಿಶೀಲನೆ ಮಾಡಿದರೆ, ಗದರಿಸಿದರೆ ಎನ್ನುವ ಭಯ ಆಕೆಗೆ ಕಾಡುತ್ತಿದೆ’ ಎಂದರು. ಕೊಳ್ಳೇಗಾಲದವರೇ ಆದ ಗಣೇಶ್‌ ಅವರು ಕೂಡ ‘ನಕಲು ತಡೆಗೆ ನಿಯೋಜಿಸಿರುವ ಸ್ಕ್ವಾಡ್‌ನವರು ಏನು ಮಾಡುತ್ತಾರೋ ಎಂಬ ಭಯ ಮಕ್ಕಳಿಗೆ ಇರುತ್ತದೆ’ ಎಂದು ಹೇಳಿದರು.  

ಅರಸ್‌ ಪ್ರತಿಕ್ರಿಯಿಸಿ, ‘ಮೊದಲೆಲ್ಲ ಪ್ರೌಢ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತಿತ್ತು. ಈ ಬಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ ನಿಯೋಜಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಕೊಠಡಿಯಲ್ಲಿ ಮಕ್ಕಳು ಗಾಬರಿಯಾಗುವಂತೆ ನಡೆದುಕೊಳ್ಳಬೇಡಿ. ಕೊಠಡಿ ಒಳಕ್ಕೆ ಬರುವುದಕ್ಕಿಂತ ಮೊದಲೇ ಎಲ್ಲ ರೀತಿಯ ತಪಾಸಣೆ ನಡೆಸುವಂತೆ ಸೂಚಿಸಲಾಗುವುದು. ಈ ಸಂಬಂಧ ಸಭೆ ನಡೆಸಲಾಗುವುದು. ಸ್ಕ್ವಾಡ್‌ನವರಿಗೂ ಇದೇ ರೀತಿಯ ನಿರ್ದೇಶನ ನೀಡಲಾಗುವುದು. ಇದರ ಪೂರ್ಣ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು. 

ರಜೆ ಕೊಡಿ: ಪರೀಕ್ಷೆ ಆರಂಭವಾಗುವುದಕ್ಕೂ ಮೊದಲು ಮನೆಯಲ್ಲೇ ಅಭ್ಯಾಸ ಮಾಡಲು ರಜೆ ಕೊಡುವಂತೆ ಹನೂರು ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಹನಾ ಮನವಿ ಮಾಡಿದಳು. 

ಇದಕ್ಕೆ ಸ್ಪಂದಿಸಿದ ಡಿಡಿಪಿಐ, ‘ಖಂಡಿತವಾಗಿಯೂ ರಜೆ ನೀಡಲಾಗುವುದು. ನಿಮ್ಮ ಶಾಲೆಯ ಶಿಕ್ಷಕರಿಗೆ ಸೂಚಿಸಲಾಗುವುದು. ಮನೆಯಲ್ಲಿದ್ದುಕೊಂಡು ಚೆನ್ನಾಗಿ ಓದಬೇಕು’ ಎಂದು ಕಿವಿಮಾತು ಹೇಳಿದರು. 

ಪ್ರಶ್ನೆ ಪತ್ರಿಕೆ ಹೇಗಿರುತ್ತದೆ?: ಕರೆ ಮಾಡಿದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳ ಸ್ವರೂಪದ ಬಗ್ಗೆ ಪ್ರಶ್ನೆ ಕೇಳಿದರು. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದ ಪ್ರಶ್ನೆಪತ್ರಿಕೆಗಳಿಗೆ ಹೋಲಿಸಿದರೆ ರಾಜ್ಯ ಮಟ್ಟದ ವಿಜ್ಞಾನ, ಗಣಿತ ಪ್ರಶ್ನೆ ಪತ್ರಿಕೆಗಳು ಕಷ್ಟ ಇದ್ದವು. ಅನ್ವಯಿಕ ಪ್ರಶ್ನೆಗಳನ್ನು ನೇರವಾಗಿ ಕೇಳಿರಲಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತಂದರು. 

ಹನೂರು ಮಾರಳ್ಳಿ ಪ್ರೌಢಶಾಲೆಯ  ಭೂಮಿಕಾ, ಹನೂರಿನ ಗೌತಮ್‌ ಪ್ರೌಢಶಾಲೆಯ ಸಮೃದ್ಧಿ, ಚಾಮರಾಜನಗರ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯ ದಿವ್ಯಾ, ಮಾನಸ, ಚಾಮರಾಜನಗರ ಸೇಂಟ್ ಜೋಸೆಫ್‌ ಪ್ರೌಢಶಾಲೆಯ ಭಾವನ, ಲಕ್ಷ್ಮಿ, ಪ್ರಜ್ವಲ್‌, ಪ್ರೇಮ್‌ ಕುಮಾರ್,  ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಚೇತನ್‌, ಯೋಗೇಶ್‌,  ಸಿಂಚನಾ, ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಶಾಲೆಯ ಶಿವ, ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಸಂಯುಕ್ತ ಪಿಯು ಕಾಲೇಜಿನ ಸುಮಲತಾ, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಅಹಲ್ಯಾ, ಚಾಮರಾಜನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢ ಶಾಲೆ ವಿಭಾಗ) ಹರ್ಷಿತಾ, ಮರಿಯಮ್ಮ ಈ ಬಗ್ಗೆಯೇ ಪ್ರಶ್ನೆ ಕೇಳಿದರು. 

ಎಲ್ಲರಿಗೂ ಉತ್ತರಿಸಿದ ಡಿಡಿಪಿಐ, ‘ಪ್ರಶ್ನೆ ಪತ್ರಿಕೆಗಳು ಒಂದೇ ರೀತಿ ಇರುವುದಿಲ್ಲ. ಸುಲಭ, ಸಾಧಾರಣ, ಸ್ವಲ್ಪ ಕಠಿಣ ಎನಿಸುವಂತಹ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಆದರೆ, ಪಠ್ಯದಲ್ಲಿರುವ ಅಂಶಗಳನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳುವುದಿಲ್ಲ. ವಿಜ್ಞಾನ, ಗಣಿತ ಪ್ರಶ್ನೆ ಪತ್ರಿಕೆಗಳು ಯಾವಾಗಲೂ ಅದೇ ರೀತಿ ಇರುತ್ತದೆ. ಒಂದೇ ಪ್ರಶ್ನೆಯನ್ನು ಭಿನ್ನ ರೀತಿಯಲ್ಲಿ ಅಥವಾ ತಿರುವು ಮುರುವಾಗಿ ಕೇಳಬಹುದು. ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರಿಸಬೇಕಾಗುತ್ತದೆ. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ತಿರುವು ಹಾಕುವುದಿರಿಂದ, ಪಠ್ಯ ಪುಸ್ತಕದಲ್ಲಿರುವ ಅಂಶಗಳನ್ನು ಗಮನವಿಟ್ಟು ಓದುವುದರಿಂದ ಅನ್ವಯಿಕ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಬಹುದು’ ಎಂದು ಹೇಳಿದರು. 

ಉತ್ತರ ಮರೆವಿಗೆ ಮದ್ದೇನು?: ವೆಂಕಟಯ್ಯನಛತ್ರದ ವಿದ್ಯಾರ್ಥಿನಿ ಸಿಂಚನಾ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ನೋಡಿದ ಕೂಡಲೇ ಮರೆತು ಹೋಗುತ್ತದೆ. ಇದಕ್ಕೆ ಏನು ಮಾಡಬೇಕು ಎಂದು ಪ್ರಶ್ನಿಸಿದಳು. 

ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ಪ್ರತಿಕ್ರಿಯಿಸಿ, ‘ಉತ್ತರ ಮರೆತು ಹೋಗಿರುವುದಿಲ್ಲ. ಗಾಬರಿಯಿಂದ ಆ ರೀತಿ ಆಗುತ್ತದೆ. ಪ್ರಶ್ನೆ ಪತ್ರಿಕೆ ಓದುವುದಕ್ಕೆ ಎಂದೇ 15 ನಿಮಿಷಗಳಿವೆ. ಪ್ರಶ್ನೆ ಪತ್ರಿಕೆ ಕೊಟ್ಟ ತಕ್ಷಣವೇ ಬರೆಯುವುದಕ್ಕೆ ಶುರು ಮಾಡುವುದು ಬೇಡ. ಎರಡು ನಿಮಿಷ ಸುಮ್ಮನೆ ಕುಳಿತು ದೀರ್ಘವಾಗಿ ಉಸಿರಾಡಿ, ಆಗ ಆತಂಕ ಕಡಿಮೆಯಾಗುತ್ತದೆ. ಆ ಮೇಲೆ ಪ್ರಶ್ನೆ ಪತ್ರಿಕೆ ಓದಿ. ಸುಲಭದ ಪ್ರಶ್ನೆಗಳನ್ನು ಗುರುತಿಸಿಕೊಳ್ಳಿ. ಅವುಗಳಿಗೆ ಉತ್ತರ ಬರೆಯಿರಿ. ಕಷ್ಟ ಎನಿಸುವಂತಹ ಪ್ರಶ್ನೆಗಳಿಗೆ ಕೊನೆಗೆ ಉತ್ತರಿಸಿ. ಪ್ರಶ್ನೆಗಳು ಅರ್ಥವಾಗದಿದ್ದರೆ ಕೊಠಡಿ ಮೇಲ್ವಿಚಾರಕರನ್ನು ಕೇಳಿ. ಸಾವಧಾನವಾಗಿ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿದಾಗ ಉತ್ತರ ಹೊಳೆಯುತ್ತದೆ. ನಂತರ ಬರೆಯಿರಿ’ ಎಂದು ಸಲಹೆ ನೀಡಿದರು. 

ಯಳಂದೂರಿನ ಕಂದಹಳ್ಳಿಯಿಂದ ಕರೆ ಮಾಡಿದ್ದ ವಿದ್ಯಾರ್ಥಿ ಸತೀಶ್‌, ಸಮಾಜ ವಿಜ್ಞಾನ ಪಠ್ಯ ತುಂಬಾ ಇದೆ. ಪರೀಕ್ಷೆಯಲ್ಲಿ ಪ‍ಠ್ಯ ರಿಯಾಯಿತಿ ಇದೆಯಾ ಎಂದು ಕೇಳಿದನು. ಅಧಿಕಾರಿಗಳು ‘ಇಲ್ಲ’ ಎಂದರು.  

ವಿಷಯ ಪರಿವೀಕ್ಷಕಾರದ ಶಂಕರ್‌, ಪುಷ್ಪರಾಜ್‌, ವಿಷಯ ನಿರ್ವಾಹಕರು ಕುಮಾರಸ್ವಾಮಿ ಕೂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. 

ನಿರ್ವಹಣೆ: ಸೂರ್ಯನಾರಾಯಣ ವಿ., ಫೋಟೊ: ಸಿ.ಆರ್‌.ವೆಂಕಟರಾಮು

‘ಪ್ರಜಾವಾಣಿ’ ಫೋನ್‌ –ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ರಾಮಚಂದ್ರರಾಜೇ ಅರಸ್‌ ಮಾತನಾಡಿದರು
‘ಪ್ರಜಾವಾಣಿ’ ಫೋನ್‌ –ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ರಾಮಚಂದ್ರರಾಜೇ ಅರಸ್‌ ಮಾತನಾಡಿದರು

ಪೋಷಕರಿಗೆ ಸಲಹೆ

* ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಿ * ಉತ್ತಮ ಆಹಾರ ಕೊಡಿ * ಒತ್ತಡ ಹಾಕಬೇಡಿ ಆತ್ಮವಿಶ್ವಾಸ ತುಂಬಿ.   * ಶಿಕ್ಷಕರ ಜೊತೆ ಸಂಪರ್ಕದಲ್ಲಿರಿಸಿ ಸಮಾಲೋಚಿಸಿ * ಬೇರೆ ಮಕ್ಕಳೊಂದಿಗೆ ನಿಮ್ಮ ಮಗ/ಮಗಳನ್ನು ಹೋಲಿಕೆ ಮಾಡಬೇಡಿ * ಓದು ಅಭ್ಯಾಸಕ್ಕೆ ಪ್ರೋತ್ಸಾಹ ನೀಡಿ

5ನೇ ಸ್ಥಾನದ ಒಳಗೆ ಗುರಿ

ಗುಂಡ್ಲುಪೇಟೆಯಿಂದ ಕರೆಮಾಡಿದ್ದ ಮನುರಾಜ್‌ ಅವರು ‘ಸರ್ಕಾರಿ ಶಾಲೆಗಳ ಫಲಿತಾಂಶಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಅಲ್ಲಿ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಕಲಿಸುತ್ತಾರೆ. ಹೆಚ್ಚು ಅಭ್ಯಾಸವನ್ನೂ ಮಾಡಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಇದು ಯಾಕೆ ನಡೆಯುವುದಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ರಾಮಚಂದ್ರ ರಾಜೇ ಅರಸ್‌ ‘ಹಿಂದಿನ ವರ್ಷದ ಫಲಿತಾಂಶ ನೋಡಿದರೆ ಜಿಲ್ಲೆಯ ಖಾಸಗಿ ಶಾಲೆಗಳ ಫಲಿತಾಂಶ ಶೇ 97ರಷ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಶೇ 93.50ರಷ್ಟಿದೆ. ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಈ ವರ್ಷ ಉತ್ತಮ ಫಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಕರು ಕೂಡ ನಿರಂತರವಾಗಿ ಶ್ರಮ ಹಾಕಿದ್ದಾರೆ. ಶಿಕ್ಷಕರ ಕೊರತೆ ಇದ್ದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ. ಬಾಲಕರನ್ನು ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಇರುವಂತೆ ಮಾಡಿ ಓದಿಸಲಾಗುತ್ತಿದೆ. ಮಕ್ಕಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಐದಕ್ಕಿಂತ ಒಳಗಿನ ಸ್ಥಾನ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಮೂರು ಪರೀಕ್ಷೆ: ಗೊಂದಲ ಬೇಡ

ಚಾಮರಾಜನಗರ ತಾಲ್ಲೂಕಿನ ಮಾದಾಪುರ ಸಂತ ತೆರೆಸಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ನವಿತಾ ಮತ್ತು ತಾಲ್ಲೂಕಿನ ಹಳ್ಳಿಕೆರೆ ಹುಂಡಿಯಿಂದ ಕರೆ ಮಾಡಿದ್ದ ಮಾನ್ಯಶ್ರೀ ಅವರು ಮೂರು ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರು. ‘ಮೊದಲ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬಾರದೇ ಇದ್ದರೆ ಎರಡು ಮೂರನೇ ಪರೀಕ್ಷೆ ಬರೆಯಬಹುದೇ? ಎರಡನೇ ಪರೀಕ್ಷೆಯಲ್ಲಿ ನಿರ್ದಿಷ್ಟ ವಿಷಯದ ಪರೀಕ್ಷೆ ಬರೆಯಬಹುದೇ’ ಎಂದು ಕೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ‘ಈ ಮೊದಲು ವಾರ್ಷಿಕ ಪರೀಕ್ಷೆಯ ನಂತರ ಪೂರಕ ಪರೀಕ್ಷೆ ಎಂದು ಮಾಡಲಾಗುತ್ತಿತ್ತು. ಪೂರಕ ಪರೀಕ್ಷೆಯ ಪರಿಕಲ್ಪನೆಯನ್ನು ತೆಗೆದು ಹಾಕಲಾಗಿದೆ. ಅನಿವಾರ್ಯ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಹೆಚ್ಚು ಎರಡನೇ ಅವಕಾಶ ನೀಡಬೇಕು. ಅಂಕಗಳ ಉನ್ನತೀಕರಣಕ್ಕೆ ಹೆಚ್ಚು ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಮೂರು ಪರೀಕ್ಷೆಗಳನ್ನು ಮಾಡುತ್ತಿದೆ. ಉನ್ನತೀಕರಣದ ಪರೀಕ್ಷೆ ಬರೆಯಲು ಎಲ್ಲ ವಿಷಯಗಳಲ್ಲಿ ತೇರ್ಗಡೆಯಾಗಬೇಕು. ಮೊದಲ ಪರೀಕ್ಷೆಯಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಅವಕಾಶದಲ್ಲಿ ಆ ವಿಷಯದ ಪರೀಕ್ಷೆ ಬರೆಸಬಹುದು. ಆದರೆ ವಿದ್ಯಾರ್ಥಿಗಳು ಎರಡನೇ ಮೂರನೇ ಅವಕಾಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮೊದಲ ಪ್ರಯತ್ನದಲ್ಲೇ ಗರಿಷ್ಠ ಪ್ರಯತ್ನ ಮಾಡಿ ಉತ್ತಮ ಅಂ‌ಕಗಳಲ್ಲಿ ಗಳಿಸಿ’ ಎಂದು ಸಲಹೆ ನೀಡಿದರು.

ಪರೀಕ್ಷೆಗೆ ಸಕಲ ಸಿದ್ಧತೆ

ಇದೇ 25ರಿಂದ ಪರೀಕ್ಷೆ ಆರಂಭವಾಗಲಿದ್ದು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ‘45 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸ್‌ ಸಿಬ್ಬಂದಿ ನಿಯೋಜನೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ರಾಮಚಂದ್ರ ರಾಜೇ ಅರಸ್‌ ಹೇಳಿದರು.  ‘ಅಂಗವಿಕಲರು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಮೂರು ವಿನಾಯಿತಿಗಳನ್ನು ನೀಡಲಾಗಿದೆ. ಅವರಿಗೆ ಒಂದು ಗಂಟೆ ಹೆಚ್ಚುವರಿ ಸಮಯ ತೀವ್ರ ಅಂಗವೈಕಲ್ಯ ಹೊಂದಿರುವವರಿಗೆ ಸಹಾಯಕನ್ನು ಇಟ್ಟುಕೊಳ್ಳುವ ಅವಕಾಶ (9ನೇ ತರಗತಿವರೆಗಿನ ಮಕ್ಕಳು) ನೀಡಲಾಗಿದೆ. ಭಾಷಾ ವಿನಾಯಿತಿಯೂ ಇದೆ. ಪ್ರಥಮ ಭಾಷೆ ಮಾತ್ರ ಬರೆದರೆ ಸಾಕು. ದೃಷ್ಟಿ ದೋಷ ಉಳ್ಳ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯದ ಬದಲು ಸಮಾಜ ವಿಜ್ಞಾನ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ ಅಥವಾ ಹಿಂದೂಸ್ತಾನಿ ಸಂಗೀತ ವಿಷಯಗಳ ಪರೀಕ್ಷೆ ಬರೆಯಬಹುದು’ ಎಂದು ಮಾಹಿತಿ ನೀಡಿದರು.  ‘ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ ಕೆಎಸ್‌ಆರ್‌ಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಕ್ಕಳು ಕೈ ಹಿಡಿದರೆ ಬಸ್‌ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಿದ್ಯುತ್‌ ಕಡಿತ ಮಾಡದಂತೆಯೂ ಸೂಚಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT