ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಮರಗಳು ಧರೆಗೆ, ಹಾರಿ ಹೋದ ಶೀಟು

ಗಾಳಿ, ಮಿಂಚು–ಗುಡುಗು ಸಹಿತ ವರ್ಷಧಾರೆ; ಹನೂರಿನಲ್ಲಿ ಆಲಿಕಲ್ಲು ಮಳೆ
Published 21 ಮೇ 2023, 16:07 IST
Last Updated 21 ಮೇ 2023, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗಿದೆ. ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿವೆ. ಬೆಳೆ ಹಾನಿ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ. 

ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ಹಲವು ಕಡೆಗಳಲ್ಲಿ ಮಳೆಯಾಗಲಿಲ್ಲ. ಗುಡುಗು–ಮಿಂಚು–ತುಂತುರು ಹನಿಗಷ್ಟೇ ಮಳೆ ಸೀಮಿತವಾಯಿತು. 

ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಒಂದು ಗಂಟೆ ಭರ್ಜರಿಯಾಗಿ ಮಳೆ ಸುರಿದಿದೆ. ಹನೂರಿನಲ್ಲಿ ಹತ್ತು ನಿಮಿಷ ಆಲಿಕಲ್ಲು ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅರ್ಧ ಗಂಟೆ ಕಾಲ ಜೋರಾಗಿ ವರ್ಷಧಾರೆಯಾಗಿದೆ. 

ಮಳೆಯಿಂದಾಗಿ ವಾರದಿಂದೀಚೆಗೆ ತಾಪಮಾನ ಹೆಚ್ಚಾಗಿ ಬಿಸಿಯಾಗಿದ್ದ ವಾತಾವರಣ ತಂಪಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಕೊಂಚ ನಿರಾಳರಾಗಿದ್ದಾರೆ. 

ಚಾಮರಾಜನಗರ ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ರಾತ್ರಿ ಸ್ವಲ್ಪ ಮಳೆಯಾಗಿತ್ತು. ಉಳಿದ ಕಡೆಗಳಲ್ಲಿ ಗುಡುಗು–ಮಿಂಚಿನ ಅಬ್ಬರ ಇದ್ದರೂ ಮಳೆಯಾಗಿರಲಿಲ್ಲ. 

ಭಾನುವಾರ ಬೆಳಿಗ್ಗೆಯಿಂದಲೇ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇತ್ತು. ಬಿಳಿಗಿರಿರಂಗನಬೆಟ್ಟದಲ್ಲಿ ಸಂಜೆ 5.30ರ ಸುಮಾರಿಗೆ ಮಳೆ ಆರಂಭವಾಯಿತು. 

ಗಾಳಿಗೆ ಮುರಿದ ಮರ: ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ತೀವ್ರವಾಗಿ ಬೀಸಿದೆ. ಮಳೆ ಹೆಚ್ಚು ಬಂದಿಲ್ಲ. 

ಜೋರಾಗಿ ಬೀಸಿದ ಗಾಳಿಗೆ ಹೆಗ್ಗವಾಡಿಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿದೆ. ಇದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿ ಪ್ರಯಾಣಿಸುವವರು ದೇಶವಳ್ಳಿ ರಸ್ತೆ ಅವಲಂಬಿಸಬೇಕಾಯಿತು.

ಜಮೀನುಗಳಲ್ಲಿ ತೆಂಗಿನ ಮರಗಳು ಬುಡ ಸಮೇತ ಉರುಳಿವೆ. ಗ್ರಾಮದಲ್ಲಿ ಮರಗಳು ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಮೇಲೆ ಬಿದ್ದು ಅವು ತುಂಡಾಗಿದ್ದರಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. 

ಗುಂಡ್ಲುಪೇಟೆ ವರದಿ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಸಮಯದಲ್ಲಿ ಅರ್ಧ ಗಂಟೆ ಜೋರು ಮಳೆಯಾಗಿದೆ. ಹತ್ತು ದಿನ ಮಳೆ ಇಲ್ಲದೆ ಬೆಳೆಗಳು ಒಣಗುವ ಸ್ಥಿತಿಗೆ ಬಂದಿತ್ತು. ಇದೀಗ ಮಳೆಯಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. 

ಬಂಡೀಪುರದ ಭಾಗದಲ್ಲಿ, ಬೇಗೂರು, ರಾಘವಾಪುರ, ಗುಂಡ್ಲುಪೇಟೆ, ಬಸವಪುರ, ಪುತ್ತನಪುರ, ಹಂಗಳ ಸೇರಿದಂತೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಮಳೆಯಾಗಿದೆ.

ಸಂತೇಮರಹಳ್ಳಿಯಿಂದ ಹೆಗ್ಗವಾಡಿಪುರಕ್ಕೆ ಹೋಗುವ ರಸ್ತೆಯ ಮೇಲೆ ಮರ ಬಿದ್ದಿದೆ
ಸಂತೇಮರಹಳ್ಳಿಯಿಂದ ಹೆಗ್ಗವಾಡಿಪುರಕ್ಕೆ ಹೋಗುವ ರಸ್ತೆಯ ಮೇಲೆ ಮರ ಬಿದ್ದಿದೆ
ಹನೂರಿನಲ್ಲಿ ಭಾನುವಾರ ಸಂಜೆ ಬೀಸಿದ ಗಾಳಿಯ ರಭಸಕ್ಕೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ
ಹನೂರಿನಲ್ಲಿ ಭಾನುವಾರ ಸಂಜೆ ಬೀಸಿದ ಗಾಳಿಯ ರಭಸಕ್ಕೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ
ಹನೂರಿನ ಲೊಕ್ಕನಹಳ್ಳಿ ರಸ್ತೆಯಲ್ಲಿರುವ ನಟರಾಜ್ ನಾಯ್ಡು ಎಂಬುವರ ಕೊಟ್ಟಿಗೆ ಮೇಲಿನ ಶೀಟು ಹಾರಿ ಹೋಗಿದೆ
ಹನೂರಿನ ಲೊಕ್ಕನಹಳ್ಳಿ ರಸ್ತೆಯಲ್ಲಿರುವ ನಟರಾಜ್ ನಾಯ್ಡು ಎಂಬುವರ ಕೊಟ್ಟಿಗೆ ಮೇಲಿನ ಶೀಟು ಹಾರಿ ಹೋಗಿದೆ

ಮನೆ ಮೇಲೆ ಬಿದ್ದ ಮರದ ಕೊಂಬೆ ಹನೂರು: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಗಾಳಿಯ ರಭಸಕ್ಕೆ ಪಟ್ಟಣದಲ್ಲಿ ಮನೆಯೊಂದರ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ.  ಲೋಕನಹಳ್ಳಿ ರಸ್ತೆಯಲ್ಲಿರುವ ನಟರಾಜ್ ನಾಯ್ಡು ಎಂಬುವರ ಜಾನುವಾರು ಕೊಟ್ಟಿಗೆ‌‌ ಮೇಲಿದ್ದ ಶೀಟುಗಳು ಹಾರಿ ಹೋಗಿವೆ. ಸತತ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜ‌ನತೆಗೆ ಮಳೆ ತಂಪೆರೆಯಿತು. ಗುಡುಗು ಮಿಂಚಿನೊಂದಿಗೆ ಮಳೆ ಆರಂಭವಾಯಿತು. ಐದು ನಿಮಿಷ ಆಲಿಕಲ್ಲುಗಳೂ ಬಿದ್ದವು.  ಬಿತ್ತನೆ ಕಾಲ ಆರಂಭವಾದರೂ‌ ಮಳೆಯಿಲ್ಲದೇ ಕಂಗಾಲಾಗಿದ್ದ ಕೃಷಿಕರಿಗೆ ಭಾನುವಾರ ಬಿದ್ದ ಮಳೆ ಸಂತಸ ತಂದಿದೆ. ಕಣ್ಣೂರು ಚೆನ್ನಾಲಿಂಗನಹಳ್ಳಿ ಹೊಸೂರು ಉದ್ದನೂರು ಹಾಗೂ ಬೆಳತ್ತೂರು ಗ್ರಾಮಗಳ ಜಮೀನುಗಳಲ್ಲಿ ನೀರು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT