ಶನಿವಾರ, ಜುಲೈ 2, 2022
25 °C
ಸಿಬಿಐ, ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆಗ್ರಹ

ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ರೈತ ಸಂಘದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ಸಂಘ ಹಾಗೂ ಹಸಿರು ಸೇನೆಯ ಒಂದು ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ವ್ಯವಹಾರ ಹಾಗೂ ಅಕ್ರಮ ವ್ಯವಹಾರದ ತನಿಖೆಯನ್ನು ಸಿಬಿಐ ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ರೈತ ಸಂಘ ಹಾಗೂ ಹಸಿರು ಸೇನೆಯ ಮತ್ತೊಂದು ಬಣದ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪದಾಧಿಕಾರಿಗಳು, ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಸುದ್ದಿವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಚಂದ್ರಶೇಖರ್‌ ಅವರ ಅವ್ಯವಹಾರ ಬೆಳಕಿಗೆ ಬಂದಿದ್ದು, ಕೋಡಿಹಳ್ಳಿ ಚಂದ್ರಶೇಖರ್‌ ಮತ್ತು ಹಗರಣದಲ್ಲಿ ಸರ್ಕಾರದ ಪರ ಅಥವಾ ಯಾವುದೇ ಪಕ್ಷದ ಪರ ಕುಮ್ಮಕ್ಕು ನೀಡಿರುವವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು’ ಎಂದು ಆಗ್ರಹಿಸಿದರು. 

ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. 

‘ಕರ್ನಾಟಕ ರೈತ ಚಳವಳಿ ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಹುಟ್ಟಿರುವ ಚಳವಳಿ. ಕರ್ನಾಟಕ ರಾಜ್ಯ ರೈತ ಸಂಘವನ್ನು ರೈತ ಚೇತನ ದಿವಂಗತ ಎಂ.ಡಿ.ನಂಜುಂಡಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎನ್.ರುದ್ರಪ್ಪ, ಸಮಾಜವಾದಿ ಚಿಂತಕ  ದಿವಂಗತ ಎಂ.ಡಿ.ಸುಂದರೇಶ್, ರೈತ ಕಣ್ಮಣಿ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ, ಕಡಿದಾಳು ಶಾಮಣ್ಣ, ಸುರೇಶ್ ಬಾಬು, ಗಜಪತಿ ಪಾಟೀಲ, ದಿವಂಗತ ರುದ್ರಪ್ಪ ಮೊಕಾಶಿ, ದಿವಂಗತ ಚೆನ್ನಬಸಪ್ಪ ಅವರು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಟ್ಟಿ ಬೆಳಸಿರುವ ರೈತ ಚಳವಳಿ ಹಳ್ಳಿಯಿಂದ ದೆಹಲಿಯವರೆಗೆ ಹಾಗೂ ದೆಹಲಿಯಿಂದ ಪ್ರಪಂಚದ ನಾನಾ ಮೂಲೆಗಳಿಗೆ ವಿಸ್ತರಿಸಿಕೊಂಡು ರೈತ ಸಮುದಾಯದ ಘನತೆಯನ್ನು ಎತ್ತಿ ಹಿಡಿದಿದೆ. ಇಂತಹ ಪಾವಿತ್ರ್ಯವುಳ್ಳ ಚಳವಳಿಯಲ್ಲಿ ಕೆಲವು ವ್ಯಕ್ತಿಗಳು ನುಸುಳಿಕೊಂಡು ರೈತ ಸ್ವಾಭಿಮಾನದ ಸಂಕೇತವಾದ ಹಸಿರು ಶಾಲು ಧರಿಸಿ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು, ಅಂತಹವರನ್ನು ಚಳವಳಿಯು ಹೊರಹಾಕುತ್ತ ಬಂದಿದೆ. ಅಧಿಕಾರ ನಡೆಸಿರುವ ಮತ್ತು ನಡೆಸುತ್ತಿರುವ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಇಂತಹ ಕೆಲವು ವ್ಯಕ್ತಿಗಳನ್ನು ಬಳಸಿಕೊಂಡಿವೆ. ಚಳವಳಿಯಲ್ಲಿ ಒಡಕು ತರಲು ಪ್ರಯತ್ನಪಟ್ಟಿವೆ’ ಎಂದು ದೂರಿದರು. 

‘ಹಸಿರು ಶಾಲು ಹಾಕಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಭ್ರಷ್ಟಾಚಾರದ ಕಾರಣಕ್ಕೆ ಚಳುವಳಿ ದೂರ ಇಟ್ಟಿದೆ. ಆದರೆ ಅವರು ಸ್ವಯಂ ಘೋಷಿತರಾಗಿ ಅಧ್ಯಕ್ಷ ರಂದು ಘೋಷಿಸಿಕೊಂಡು ಚಳವಳಿ ಮತ್ತು ಹಸಿರು ಶಾಲನ್ನು ದುರುಪಯೋಗಪಡಿಸಿಕೊಂಡಿರುವುದು ಈಗ ಜಗಜ್ಜಾಹೀರಾಗಿದೆ. ರೈತ ಚಳವಳಿಯ ಹೆಸರಿನಲ್ಲಿ ಇಂತಹ ದಳ್ಳಾಳಿ ವ್ಯವಹಾರ ನಡೆಸಿರುವುದು ಖಂಡನೀಯ. ರೈತ ಸಮೂಹ ಇಂತಹ ವ್ಯವಹಾರವನ್ನು ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಗೌಡೇಗೌಡ, ಶಿವಕುಮಾರ್‌, ದೊಡ್ಡಯ್ಯ, ಮಹದೇವ, ಭಾಸ್ಕರ್‌ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.