ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಕಟ್ಟಲೂ ಪರದಾಟ; ತಪ್ಪದ ಸಂಕಟ

38 ಬುದ್ಧಿಮಾಂದ್ಯ ಮಕ್ಕಳಿರುವ ಶಾಲೆಗೆ ಅನುದಾನದ ಕಂಟಕ; ನೆರವಿಗೆ ಮೊರೆ
Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಮೂರ್ನಾಲ್ಕು ತಿಂಗಳಿಂದ ಭಾರಿ ಕಷ್ಟವಾಗಿದೆ. ಭವಿಷ್ಯ ಮಸುಕಾಗಿದೆ. ಆರು ವರ್ಷದವರಿಂದ 30 ವರ್ಷದವರೆಗಿನ 38 ಬುದ್ಧಿಮಾಂದ್ಯರು ನಮ್ಮಲ್ಲಿದ್ದಾರೆ. ಮುಂದೇನು ಮಾಡಬೇಕು ಎಂಬುದೇ ತೋಚದಂತಾಗಿದೆ...’

ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯ ಕಾರ್ಯದರ್ಶಿ ವಿರೂಪಾಕ್ಷಿ ಅವರ ಅಳಲು ಇದು.

‘ಹಳೆಯ ಎರಡು ಮನೆಗಳಿಗೆ ತಲಾ ₹ 5,000 ಬಾಡಿಗೆ. ವಿಶೇಷ ಶಿಕ್ಷಕರು, ಸ್ವಚ್ಛತಾ ಕೆಲಸ ನಿಭಾಯಿಸುವ ಆಯಾಗಳಿಗೆ ₹ 36,000 ಸಂಬಳ. ಊಟ–ಉಪಾಹಾರ, ಇನ್ನಿತರೆ ವೆಚ್ಚ ಸೇರಿ ₹ 20,000. ಪ್ರತಿ ತಿಂಗಳು ವಸತಿಯುತ ಶಾಲೆಯ ನಿರ್ವಹಣೆಗೆಂದೇ ಕನಿಷ್ಠ ₹ 65,000 ಬೇಕಿದೆ. ಕಷ್ಟಪಟ್ಟು 11 ವರ್ಷಗಳಿಂದ ನಿಭಾಯಿಸುತ್ತಿರುವೆ. ಇದೀಗ ಸಾಧ್ಯವಾಗುತ್ತಿಲ್ಲ...’ ಎಂದು ಗದ್ಗದಿತರಾದರು.

‘ನಾನೊಬ್ಬ ರೈತ. ಹೊಲದಲ್ಲಿನ ದುಡಿಮೆಯನ್ನು ಬುದ್ಧಿಮಾಂದ್ಯರಿಗಾಗಿ ವಿನಿಯೋಗಿಸುತ್ತಿರುವೆ. ನಮ್ಮ ಸಿಬ್ಬಂದಿಯೂ ಹೊಲದ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಆದರೆ, ಈಚೆಗೆ ಶಾಲೆಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಮಾಜಿ ಸಚಿವ ಮಹದೇವಪ್ರಸಾದ್ ನಿಧನದ ಬಳಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ’ ಎಂದು ‘ಪ್ರಜಾವಾಣಿ’ ಬಳಿ ತಮ್ಮ ಸಂಕಷ್ಟ ಹೇಳಿಕೊಂಡರು.

‘ಗುಂಡ್ಲುಪೇಟೆ ಗಡಿ ಭಾಗ. ಇಲ್ಲಿಗೆ ಬುದ್ಧಿಮಾಂದ್ಯ ಮಕ್ಕಳನ್ನು ಎಲ್ಲೆಲ್ಲಿಂದಲೋ ಕರೆತಂದು ಬಿಡುತ್ತಿದ್ದರು. ನೋಡಿದಾಗ ಕರುಳು ಚುರುಕ್ ಅನಿಸುತಿತ್ತು. ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ನಡೆಸುತ್ತಿದ್ದ ನಾನು ಮಾನವೀಯ ನೆಲೆಗಟ್ಟಿನಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ 2009ರಲ್ಲಿ ಶಾಲೆಯೊಂದನ್ನು ಆರಂಭಿಸಿದೆ’ ಎಂದರು.

‘ಐವರಿಂದ ಆರಂಭಗೊಂಡ ಶಾಲೆಯಲ್ಲಿ ಇದೀಗ 38 ಮಕ್ಕಳಿದ್ದಾರೆ. ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅಣ್ಣನ ಮೊಮ್ಮಗ ಕಿರಣ್ (48) ಸೇರಿದಂತೆ ವೈದ್ಯರು, ಎಂಜಿನಿಯರ್‌ಗಳ ಮಕ್ಕಳು ನಮ್ಮಲ್ಲಿದ್ದಾರೆ. ಕಾರವಾರ, ಶಿವಮೊಗ್ಗ, ಮಂಡ್ಯ, ಹಾಸನ, ಕೊಡಗು, ಬೆಂಗಳೂರು ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಬುದ್ಧಿಮಾಂದ್ಯ ಮಕ್ಕಳು ಇದ್ದಾರೆ'

‘ಮಹದೇವಪ್ರಸಾದ್ ಬದುಕಿದ್ದಾಗ ಶಾಲೆಗೆ ಮಹಾಪೋಷಕರಂತಿದ್ದರು. ಸಕಲ ನೆರವನ್ನು ವೈಯಕ್ತಿಕವಾಗಿ ನೀಡಿದ್ದರು. ಗುಂಡ್ಲುಪೇಟೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಿಎ ಸೈಟ್‌ ಸಹ ಗುರುತಿಸಿದ್ದರು. ಅವರ ಸಾವಿನ ಬಳಿಕ ಸಂಕಷ್ಟ ಹೆಚ್ಚಿದೆ. ಪ್ರಸಾದರ ಪುತ್ರ ಗಣೇಶ್‌ ಪ್ರಸಾದ್‌ ಸಹ ಬಾಡಿಗೆ ಕಟ್ಟಲಿಕ್ಕಾಗಿ 2018ರಲ್ಲಿ ₹ 1ಲಕ್ಷ, 2019ರಲ್ಲಿ ₹ 25,000 ನೀಡಿದ್ದರು. ಅಲ್ಲಿಂದ ಈಚೆಗೆ ನಮಗೆ ಬಾಡಿಗೆ ಕಟ್ಟಲಾಗಿಲ್ಲ. ಶಿಕ್ಷಕರ ಸಂಬಳವನ್ನು ಕೊಡಲಾಗಿಲ್ಲ. ಆದರೂ ಎಲ್ಲರೂ ಮಕ್ಕಳಿಗಾಗಿ ತ್ಯಾಗಿಗಳಾಗಿದ್ದಾರೆ. ಈಗಿರುವ ಬಾಡಿಗೆ ಕಟ್ಟಡಗಳು ಸಹ ಶಿಥಿಲಾವಸ್ಥೆಯಲ್ಲಿವೆ’ ಎಂದು ವಿರೂಪಾಕ್ಷಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT