ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಹತ್ಯೆ: ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಇಲ್ಲ –ಸಚಿವ ಅಶೋಕ

Last Updated 5 ಆಗಸ್ಟ್ 2022, 16:06 IST
ಅಕ್ಷರ ಗಾತ್ರ

ಕೊಳ್ಳೇಗಾಲ:ದಕ್ಷಿಣ ಕನ್ನಡದಲ್ಲಿ ಹತ್ಯೆಯಾದ ಯುವಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಶುಕ್ರವಾರ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರವೀಣ್‌ ನೆಟ್ಟಾರು ಹತ್ಯೆ ಕೋಮು ಗಲಭೆಯಿಂದ ನಡೆದಿದೆ. ಅದಕ್ಕಾಗಿ ಪರಿಹಾರ ನೀಡಲಾಗಿದೆ. ಮಂಗಳೂರಿನಲ್ಲಿ ಮುಸ್ಲಿಂ ಯುವಕ ಫಾಝಿಲ್‌ ಹತ್ಯೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.ರೌಡಿಗಳಿಂದ ಹತ್ಯೆ ಆಗಿದೆ ಎಂದು ತಿಳಿದು ಬಂದಿದೆ. ಹಿಂದೆ ಕೂಡ ಇವರ ನಡುವೆ ಗಲಾಟೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದ ಮೇಲೆ ಸರ್ಕಾರ ಪರಿಹಾರ ಕೊಡುವ ಬಗ್ಗೆ ಗಮನಹರಿಸಲಿದೆ. ನಮ್ಮದು ಸಂವಿಧಾನ ನಂಬಿ ನಡೆಯುವ ಸರ್ಕಾರ’ ಎಂದು ಹೇಳಿದರು.

‘ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ಅನೇಕ ಸಂಘಟನೆಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಿವೆ. ನಾನು ಗೃಹ ಸಚಿವನಾಗಿದ್ದಾಗಲೂ ಇವುಗಳನ್ನು ನಿಷೇದಿಸಲು ಕ್ರಮ ವಹಿಸಿದ್ದೆ. ಈ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಮೀನ ಮೇಷ ಎಣಿಸುವ ಪ್ರಶ್ನೆ ಇಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರ ಸರ್ಕಾರವೂ ಇದೇ ನಿಲುವು ಹೊಂದಿದೆ. ಆದರೆ, ಒಂದು ಸಂಘಟನೆಯನ್ನು ನಿಷೇಧಿಸಿದರೆ, ಅದರಲ್ಲಿರುವವರು ಮತ್ತೊಂದು ಹೆಸರಲ್ಲಿ ಬರುತ್ತಾರೆ. ಆದ್ದರಿಂದ ಸಂಘಟನೆಗಳ ಮುಖಂಡರ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಷೇಧ ಹೇರಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆ ಸಂಘಟನೆ ಕಾರ್ಯಕರ್ತರ ವಿರುದ್ಧ 200ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆದಿತ್ತು. ಈಗ ಪ್ರತಿಫಲ ಅನುಭವಿಸುತ್ತಿದ್ದೇವೆ’ ಎಂದರು.

ಸೂತಕದ ವೇಳೆ ಸಂಭ್ರಮಾಚರಣೆ ಏಕೆ: ಸಿದ್ದರಾಮಯ್ಯ ಅಮೃತಮಹೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, ‘ಈಗಾಗಲೇ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಎದುರಿಸುತ್ತಿದ್ದೇವೆ. ಹಲವರು ಜೀವ ಕಳೆದುಕೊಂಡಿದ್ದಾರೆ. ಈ ಸೂತಕದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮೈಸೂರು ಪಾಕ್ ತಿನ್ನಬೇಕಿತ್ತಾ? ಒಬ್ಬ ಕಾಂಗ್ರೆಸ್ ಮುಖಂಡನೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರೇ ತಮಗೆ ಹುಟ್ಟಿದ ದಿನಾಂಕ ಗೊತ್ತಿಲ್ಲ ಎನ್ನುವಾಗ ಬೇರೊಂದು ದಿನ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬಹುದಿತ್ತು’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಕಳೆದಿದೆ. ನಾವು ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ರದ್ದು ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT