ಬುಧವಾರ, ಜನವರಿ 27, 2021
18 °C
ಒಪ್ಪಂದಕ್ಕೆ ಅಕ್ಕಿ ಗಿರಣಿ ಮಾಲೀಕರ ಹಿಂದೇಟು, ರೈತರಿಂದಲೇ ನೇರ ಖರೀದಿಗೆ ಆದ್ಯತೆ

ಆರಂಭವಾದ ಭತ್ತ ಖರೀದಿ: ರೈತರಿಂದ ಖಾಸಗಿಯವರಿಗೆ ಮಾರಾಟ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಸಂತೇಮರಹಳ್ಳಿ: ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ಇನ್ನೂ ಖರೀದಿ ಆರಂಭವಾಗದೇ ಇರುವುದರಿಂದ ರೈತರು ಖಾಸಗಿಯಾಗಿ ಭತ್ತ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. 

ಜಿಲ್ಲೆಯ ಚಾಮರಾಜನಗರ ಮತ್ತು ಸಂತೇಮರಹಳ್ಳಿಯ ಎಪಿಎಂಸಿ ಆವರಣ, ಯಳಂದೂರಿನ ಟಿಎಪಿಸಿಎಂಎಸ್‌ ಆವರಣ, ಕೊಳ್ಳೇಗಾಲ ಹಾಗೂ ಹನೂರಿನ ಎಪಿಎಂಸಿ ಆವರಣ ಸೇರಿದಂತೆ ಐದು ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಡಿಸೆಂಬರ್‌ ಮೊದಲ ವಾರದಿಂದಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, 20ರಿಂದ ಖರೀದಿ ಆರಂಭವಾಗಬೇಕಿತ್ತು. ಆದರೆ, ಅಕ್ಕಿ ಗಿರಣಿಗಳೊಂದಿಗೆ ಒಪ್ಪಂದ ಆಗದೇ ಇರುವುದರಿಂದ ಖರೀದಿ ಆರಂಭವಾಗಿಲ್ಲ ಇದರಿಂದ ರೈತರಿಗೆ ತೊಂದರೆಯಾಗಿದೆ. 

ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ಶೀತ ವಾತಾವರಣದಲ್ಲಿ, ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಲು ಜಾಗವಿಲ್ಲದೆ ಬೆಳೆಗಾರರು ಖಾಸಗಿಯಾಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

‘ಈಗ ಚಾಮರಾಜನಗರದ ಎಸ್‌ಎನ್‌ಪಿ ಅಕ್ಕಿ ಗಿರಣಿಯವರು ಖರೀದಿಗೆ ಮುಂದೆ ಬಂದಿದ್ದು, ಸೋಮವಾರ ಒಪ್ಪಂದ ನಡೆದಿದೆ. ಮಂಗಳವಾರದಿಂದ ಖರೀದಿ ಆರಂಭವಾಗಲಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಸಿ.ಎನ್‌.ರುದ್ರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಭತ್ತ ಕಟಾವು ಹಂತ ಮುಗಿಯುತ್ತಾ ಬಂದಿದೆ. ಪ್ರತಿ ವರ್ಷದ ಈ ಸಮಯದಲ್ಲಿ ಭತ್ತ ಖರೀದಿ ಪ್ರಕ್ರಿಯೆ ಮುಗಿಯುವ ಹಂತದಲ್ಲಿರುತ್ತದೆ. ಪ್ರತಿವರ್ಷ ನೂರಾರು ರೈತರು ಭತ್ತ ಖರೀದಿ ಕೇಂದ್ರದಲ್ಲಿ ನೇರವಾಗಿ ಭತ್ತ ಮಾರಾಟ ಮಾಡಿದ್ದರು. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ 22 ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ಬೆಂಬಲ ಬೆಲೆ ಅಡಿಯಲ್ಲಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹1,868 ಹಾಗೂ ‘ಎ’ ಗ್ರೇಡ್‌ ಭತ್ತಕ್ಕೆ ₹1,888 ಬೆಲೆ ನಿಗದಿ ‍ಪಡಿಸಲಾಗಿದೆ.  

ಮಳೆಯಿಂದ ರೈತರು ಕಂಗಾಲು

ಭತ್ತ ಖರೀದಿ ವಿಳಂಬ ಹಾಗೂ ಬೀಳುತ್ತಿರುವ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಇದರಿಂದ ಅಕ್ಕಿ ಗಿರಣಿ ಮಾಲೀಕರು ಖಾಸಗಿಯಾಗಿ ಗದ್ದೆಯ ಬಳಿ ಬಂದು ನೇರವಾಗಿ ಭತ್ತ ಖರೀದಿಸುತ್ತಿದ್ದಾರೆ.

‘ಭತ್ತ ಖರೀದಿ ಕೇಂದ್ರದಲ್ಲಿ ಜ್ಯೋತಿ ಭತ್ತದ ತಳಿಯನ್ನು ಗುಣಮಟ್ಟ ಇಲ್ಲ ಎಂಬ ಕಾರಣಕ್ಕೆ ನಿರಾಕರಿಸಲಾಗುತ್ತಿದ್ದು, ಖಾಸಗಿಯವರು ಇದಕ್ಕೆ ಕ್ವಿಂಟಲ್‍ಗೆ ₹1,500 ನೀಡಿ ಖರೀದಿಸುತ್ತಿದ್ದಾರೆ. ಪೆನ್ನಾ ಸೂಪರ್ ತಳಿ ಭತ್ತವನ್ನು ಪ್ರತಿ ಕ್ವಿಂಟಲ್‍ಗೆ ₹1,900 ರಂತೆ ಖರೀದಿಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವುದಾದರೆ ಭತ್ತವನ್ನು ವಾರ ಕಾಲ ಒಣಗಿಸಬೇಕು ಹಾಗೂ ಗುಣಮಟ್ಟವನ್ನೂ ಕೇಳುತ್ತಾರೆ’ ಎಂದು ಬಾಣಹಳ್ಳಿ ಗ್ರಾಮದ ರೈತ ಮರಿಮಾದಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ರೈತರು ತಮ್ಮ ಸ್ವಂತ ಖರ್ಚಿನಲ್ಲಿ ನಿಗದಿ ಪಡಿಸಿದ ಅಕ್ಕಿ ಗಿರಣಿಗೆ ಭತ್ತ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ಭತ್ತದ ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರಿಂದ ಪರಿಶೀಲಿಸಿ ದೃಢೀಕರಿಸಿದ ನಂತರ ಖರೀದಿಸಲಾಗುತ್ತದೆ. ಈ ನಿಯಮಗಳು ಗೊಂದಲಮಯವಾಗಿದ್ದು, ಈ ಕಾರಣದಿಂದಲೂ ಬೆಳೆಗಾರರು ಖಾಸಗಿ ಮಾರಾಟಕ್ಕೆ ಒಲವು ತೋರುತ್ತಿದ್ದಾರೆ ಎಂಬುದು ರೈತರ ಹೇಳಿಕೆ. 

‘ಸತತವಾಗಿ ಬೀಳುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆದ ಭತ್ತ ನಷ್ಟ ಉಂಟಾಗಬಾರದು. ಮನೆ ಬಾಗಿಲಿಗೆ ಬಂದು ಅಕ್ಕಿ ಗಿರಣಿ ಮಾಲೀಕರು ಬರುತ್ತಿದ್ದಾರೆ. ಈ ಸಮಯದಲ್ಲಿ ಲಾಭ ನಷ್ಟ ಎಣಿಸಲಾಗುವುದಿಲ್ಲ. ಇಲ್ಲಿಯೇ ಭತ್ತ ಮಾರಾಟ ಮಾಡಲು ನಿರ್ಧರಿಸಿದ್ದೇನೆ’ ಎಂದು ರೈತ ಪುಟ್ಟಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದೆ ಬರದ ಗಿರಣಿಗಳು 

ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ಖರೀದಿಸುವ ಭತ್ತವನ್ನು ನೇರವಾಗಿ ಅಕ್ಕಿ ಗಿರಣಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಅಕ್ಕಿ ಗಿರಣಿ ಮಾಲೀಕರ ನಡುವೆ ಒಪ್ಪಂದ ಆಗಬೇಕು. ಜಿಲ್ಲೆಯಲ್ಲಿ ಯಾವ ಗಿರಣಿಗಳೂ ಇದಕ್ಕೆ ಮುಂದೆ ಬಂದಿಲ್ಲ. ಇದರಿಂದಾಗಿ ಖರೀದಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. 

‘ಚಾಮರಾಜನಗರದಲ್ಲಿರುವ ಎಸ್‌ಎನ್‌ಪಿ ಅಕ್ಕಿ ಗಿರಣಿ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದ್ದು, ಅದರ ಮೂಲಕ ಖರೀದಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮಂಗಳವಾರದಿಂದ ಖರೀದಿ ಮಾಡಲಾಗುವುದು’ ಎಂದು ನಾಗರಿಕ ಆಹಾರ ಪೂರೈಕೆ ಇಲಾಖೆಯ ಉಪನಿರ್ದೇಶಕ ಸಿ.ಎನ್‌.ರುದ್ರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು