ಸೋಮವಾರ, ನವೆಂಬರ್ 30, 2020
20 °C
ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ: ಸಿದ್ಧತೆಗೆ ಸೂಚನೆ

ಕನಿಷ್ಠ ಬೆಂಬಲ ಬೆಲೆ ಅಡಿ ಭತ್ತ ಖರೀದಿ:.ನ.30ರಿಂದ ನೋಂದಣಿ ಪ್ರಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೊಜನೆಯಡಿ ರೈತರಿಂದ ಭತ್ತ ಖರೀದಿಸುವ ಸಲುವಾಗಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು. 

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿಸುವ ಸಂಬಂಧ ಶನಿವಾರ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘2020–21ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತವನ್ನು ಕ್ವಿಂಟಲ್‌ಗೆ ₹1,868 ಹಾಗೂ ಗ್ರೇಡ್-ಎ ಭತ್ತವನ್ನು ಕ್ವಿಂಟಲ್‌ಗೆ ₹1,888ಕ್ಕೆ ಖರೀದಿಸಲು ಸರ್ಕಾರ ಆದೇಶಿಸಿದೆ. ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ’ ಎಂದರು.

30ರಿಂದ ನೋಂದಣಿ: ‘ಭತ್ತ ಖರೀದಿಗಾಗಿ ಇದೇ 30ರಿಂದ ಡಿ.30ರವರೆಗೆ ರೈತರ ನೋಂದಣಿ ಕಾರ್ಯ ನಡೆಯಲಿದೆ. ಡಿ. 1ರಿಂದ 10ರವರೆಗೆ ಅಕ್ಕಿ ಗಿರಣಿಗಳಲ್ಲಿ ಸಂಗ್ರಹಣೆ ಮತ್ತು ಇತರೆ ವ್ಯವಸ್ಥೆಗಳನ್ನು ಮಾಡಬೇಕು. ಇದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರಿಶೀಲನೆಗಾಗಿ ಪರೀಕ್ಷಕರ ನೇಮಕಾತಿ, ತರಬೇತಿ, ಅಕ್ಕಿ ಗಿರಣಿಗಳ ಹಲ್ಲಿಂಗ್, ಭತ್ತ ಸಂಗ್ರಹಣೆ ಸಾಮರ್ಥ್ಯ ವಿವರಗಳನ್ನು ಪಡೆದು ನೋಂದಾಯಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

‘ಖರೀದಿ ಕೇಂದ್ರಗಳನ್ನು ಆಯಾ ತಾಲ್ಲೂಕು ವ್ಯಾಪ್ತಿಯ ಎಪಿಎಂಸಿ ಆವರಣದಲ್ಲಿ ಹಾಗೂ ಎಪಿಎಂಸಿ ಇಲ್ಲದ ಕಡೆ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ತೆರೆಯಬೇಕು. ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯ ಅಧಿಕಾರಿಗಳು ಖರೀದಿ ಕೇಂದ್ರ ಆರಂಭಿಸಲು ಬೇಕಿರುವ ಸಿದ್ಧತೆ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.

40 ಕ್ವಿಂಟಲ್‌ ಮಿತಿ: ಪ್ರತೀ ರೈತರಿಂದ ಗರಿಷ್ಠ 40 ಕ್ವಿಂಟಲ್ ಭತ್ತ ಖರೀದಿಸುವುದಕ್ಕೆ ಅವಕಾಶ ಇದೆ. ಭತ್ತದ ಮಾದರಿಯನ್ನು ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರ ಖರೀದಿಸಿ ಸಂಗ್ರಹಣೆ ಮಾಡಬೇಕು. ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ವಿವರ ಲಭ್ಯವಾದ ತಕ್ಷಣ ಖರೀದಿ ಏಜೆನ್ಸಿಗಳು ಭತ್ತವನ್ನು ಸರಬರಾಜು ಮಾಡಿದ ರೈತರಿಗೆ ಮೂರು ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಿ.ಎನ್. ರುದ್ರಸ್ವಾಮಿ, ಕನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಯ ಜಿಲ್ಲಾ ವ್ಯವಸ್ಥಾಪಕ ಸಿ.ಎಸ್.ಜಯಶಂಕರ್, ರಾಜ್ಯ ಉಗ್ರಾಣ ನಿಗಮದ ಸಹಾಯಕ ವ್ಯವಸ್ಥಾಪಕ ಎ.ಸಿ.ಪ್ರದೀಪ್, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಎಪಿಎಂಸಿಯ ಕಾರ್ಯದರ್ಶಿಗಳು, ಅಕ್ಕಿ ಗಿರಣಿ ಮಾಲೀಕರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.