ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಿಗಂಡದ ಸಿದ್ದರಾಜಮ್ಮನ ಕಣ್ಣೀರ ಕಥೆ: ಕುಟುಂಬಕ್ಕೆ ಇನ್ಯಾರು ದಿಕ್ಕು...

Last Updated 12 ಜೂನ್ 2021, 2:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಆಮ್ಲಜನಕ ಸಿಗದೆ ನರಳಾಡುತ್ತಿದ್ದ ಪತಿಗೆ ದಿನಪತ್ರಿಕೆ ಹಿಡಿದು ಗಾಳಿ ಬೀಸಿದೆ. ಬೆನ್ನು ತಟ್ಟಿದೆ. ಕೈ ಉಜ್ಜಿದೆ. ಏನೂ ಮಾಡಿದರೂ ಪ್ರಯೋಜನವಾಗಲಿಲ್ಲ. ಕಣ್ಣೆದುರೇ ಗಂಡ ಕೊನೆಯುಸಿರೆಳೆದರು’ ಎಂದು ಹೇಳುತ್ತಾ ಕೊಳ್ಳೇಗಾಲದ ಮುಡಿಗುಂಡದ ಸಿದ್ದರಾಜಮ್ಮ ಕಣ್ಣೀರಾದರು.

ಮೇ 2ರ ರಾತ್ರಿ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಅವರ ಪತಿ ಜಯ ಶಂಕರ್‌ ಮೃತಪಟ್ಟಿದ್ದರು. ಸರ್ಕಾರ ತಲಾ ₹ ಲಕ್ಷ ಪರಿಹಾರ ಘೋಷಿಸಿರುವ 24 ಮಂದಿಯಲ್ಲಿ ಜಯಶಂಕರ‌ ಅವರ ಹೆಸರು ಇಲ್ಲ. ಜಯಶಂಕರ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಜ್ವರವೂ ಕಾಡಿತ್ತು. ಆದರೆ, ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿತ್ತು. ಹಾಗಾಗಿ ಅವರು ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಮ್ಲಜನಕವನ್ನೂ ಪೂರೈಸಲಾಗುತ್ತಿತ್ತು. ಕೋವಿಡ್‌ಯೇತರ ಕಾರಣಕ್ಕೆ ಅವರು ಮೃತಪಟ್ಟಿರುವುದರಿಂದ ಪರಿಹಾರ ಸಿಕ್ಕಿಲ್ಲ ಎಂದು ಹೇಳುತ್ತವೆ ಮೂಲಗಳು.

‘ಆಮ್ಲಜನಕ ಮುಗಿದಿದೆ ಎಂದು ನಮಗೆ ಆಸ್ಪತ್ರೆ ಸಿಬ್ಬಂದಿ ಹೇಳಿರಲಿಲ್ಲ. ಆ ಮೇಲೆ ಗೊತ್ತಾಯಿತು. ಅದರ ಕೊರತೆಯಿಂದಲೇ ನನ್ನ ಗಂಡ ಮೃತಪಟ್ಟಿದ್ದಾರೆ. ಮೇ 2ರ ರಾತ್ರಿ 10.30ರವರೆಗೂ ಅವರು ಚೆನ್ನಾಗಿದ್ದರು, ಆ ಬಳಿಕವೇ ಅವರಿಗೆ ಸಮಸ್ಯೆಯಾಯಿತು. ರಾತ್ರಿ 12.25ಕ್ಕೆ ಅವರು ಕೊನೆಯುಸಿರೆಳೆದರು’ ಎಂದು ಸಿದ್ದರಾಜಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಐಟಿಐ ಮಾಡಿದ್ದ, 37 ವರ್ಷದ ಜಯಶಂಕರ್‌ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಎಂದುಕೊಂಡು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಮುಡಿಗುಂಡದ ಮನೆಗೆ ಬಂದಿದ್ದರು. ಜ್ವರದ ಕಾರಣಕ್ಕೆ ಏ.27ಕ್ಕೆ ಕೊಳ್ಳೇಗಾಲದ ಆಸ್ಪತ್ರೆಗೆ ಹೋಗಿದ್ದರು. ಆಮ್ಲಜನಕದ ಮಟ್ಟ ಕಡಿಮೆ ಇದ್ದುದರಿಂದ ತಕ್ಷಣ ಜಿಲ್ಲಾಸ್ಪತ್ರೆಗೆ ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದರು. ಅದರಂತೆ ನಗರದ ಕೋವಿಡ್‌ ಆಸ್ಪತ್ರೆಗೆ ಬಂದಿದ್ದಾರೆ.

‘ಆರಂಭದಲ್ಲಿ ವೈದ್ಯರು ಹಾಸಿಗೆ ಇಲ್ಲ ಎಂದು ಹೇಳಿದರು. ನಾವು ಮೈಸೂರಿನಲ್ಲಿ ವಿಚಾರಿಸಿದೆವು. ಎಲ್ಲೂ ಹಾಸಿಗೆ ಖಾಲಿ ಇರಲಿಲ್ಲ. ವೈದ್ಯರಿಗೆ ಮನವಿ ಮಾಡಿದ ನಂತರ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಸ್ಟ್ರೆಚರ್‌ನಲ್ಲೇ ಮಲಗಿಸಿ ಆಮ್ಲಜನಕ ನೀಡಿ ಚಿಕಿತ್ಸೆ ನೀಡಿದರು. ಎರಡು ಮೂರು ದಿನಗಳಲ್ಲಿ ಸ್ವಲ್ಪ‍ ಚೇತರಿಕೆ ಕಂಡಿದ್ದರು. ಮೇ 2ರಂದು ಕೂಡ ಚೆನ್ನಾಗಿಯೇ ಇದ್ದರು. ಮಧ್ಯಾಹ್ನ ಊಟ ಮಾಡಿದ್ದರು. ರಾತ್ರಿಯೂ ಅವರಿಗೆ ಊಟ ಕೊಟ್ಟ ನಂತರ, ಅವರ ಬಳಿ ತಂದೆಯನ್ನು ಬಿಟ್ಟು, ನಾನು ಮತ್ತು ಚಿಕ್ಕಮ್ಮ ಊಟಕ್ಕೆ ಹೋಗಿದ್ದೆವು. ಊಟ ಮಾಡಿ ಬಂದಾಗ ಪತಿ ನರಳುತ್ತಿದ್ದರು. ನಮಗೆ ಏನಾಗಿದೆ ಎಂದು ಗೊತ್ತಾಗಲಿಲ್ಲ. ನರ್ಸ್‌ಗಳನ್ನು ಕೇಳಿದಾಗ ‘ಸುಸ್ತಾಗಿರುವುದರಿಂದ ಹೀಗಾಗಿದೆ’ ಎಂದರು. ಆಮ್ಲಜನಕ ಮುಗಿದಿದೆ ಎಂದು ಅವರು ಹೇಳಲಿಲ್ಲ. ಉಸಿರಾಡಲು ಕಷ್ಟ‍ಪಡುತ್ತಿದ್ದುದರಿಂದ ಮತ್ತೆ ವಿಚಾರಿಸಿದಾಗ ‘ಆಮ್ಲಜನಕ ಮುಗಿದಿದೆ. ಬರಬೇಕಷ್ಟೆ’ ಎಂದರು. ನಾನು ತಂದೆಯನ್ನು ಆಮ್ಲಜನಕ ಸಿಲಿಂಡರ್‌ ಇರುವ ಕೊಠಡಿಗೆ ಹೋಗಿ ಬರುವಂತೆ ಹೇಳಿದೆ. ಅವರು ಅಲ್ಲಿ ಹೋದಾಗ ಯಾರೂ ಇರಲಿಲ್ಲ. ಬೀಗ ಹಾಕಿದ್ದರು. 12.25ಕ್ಕೆ ಅವರು ತೀರಿಕೊಂಡರು’ ಎಂದು ಸಿದ್ದರಾಜಮ್ಮ ದುಃಖಿಸಿದರು.

ರಾತ್ರಿಯೇ ಶವ ನೀಡಿದರು: ‘ಮೃತಪಟ್ಟ ನಂತರ ಶವವನ್ನು ಇಲ್ಲೇ ಇಟ್ಟು ಏನು ಮಾಡುತ್ತೀರಾ? ಮನೆಗೆ ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು. ರಾತ್ರಿ ಒಂದು ಗಂಟೆಗೇ ಶವ ನೀಡಿದರು. ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಬಂದೆವು. ಇದಕ್ಕೆ ₹2,500 ತೆಗೆದುಕೊಂಡರು’ ಎಂದು ಹೇಳಿದರು.

‘ಮಗಳ ಪ್ರಶ್ನೆಗೆ ಏನೆಂದು ಉತ್ತರಿಸಲಿ?’

‘ನನ್ನಂತಹ ಹಲವು ಹೆಣ್ಣುಮಕ್ಕಳು ಅಂದು ಗಂಡನನ್ನು ಕಳೆದುಕೊಂಡಿದ್ದಾರೆ. ನಮಗೆಲ್ಲ ಯಾರು ದಿಕ್ಕು ಇನ್ನು’ ಎಂದು ಸಿದ್ದರಾಜಮ್ಮ ದುಃಖಿಸಿದರು.

‘ನಮ್ಮ ಕುಟುಂಬಕ್ಕೆ ಪತಿಯೇ ಆಧಾರವಾಗಿದ್ದರು. ಮಾವ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಅತ್ತೆಗೆ ವಯಸ್ಸಾಗಿದೆ. ಇಬ್ಬರು ಪುಟ್ಟ ಹೆಣ್ಣುಮಕ್ಕಳು ಇದ್ದಾರೆ. ಕುಟುಂಬದ ಎಲ್ಲ ಖರ್ಚುಗಳನ್ನು ನನ್ನ ಗಂಡನೇ ನೋಡುತ್ತಿದ್ದರು. ಅವರು ಇಲ್ಲದೇ ಇರುವುದರಿಂದ ಇನ್ನು ಜೀವನ ಕಷ್ಟವಾಗಲಿದೆ. ನನ್ನ ಇಬ್ಬರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೇಗೆ ಎಂಬುದು ಯೋಚನೆಯಾಗಿದೆ. ಒಂದನೇ ತರಗತಿಯ ಮಗಳು ‘ಅಮ್ಮ ಶಾಲಾ ಶುಲ್ಕ ಹೇಗೆ ಕಟ್ಟುತ್ತಿಯಾ? ಸಮವಸ್ತ್ರ ತೆಗೆಸಿಕೊಡುವವರು ಯಾರು? ನಮಗೆ ಬೇಕಾದ್ದನ್ನು ಯಾರು ತಂದು ಕೊಡುತ್ತಾರೆ’ ಎಂದೆಲ್ಲ ಕೇಳುತ್ತಾಳೆ. ಉತ್ತರ ಹೇಳುವುದಕ್ಕೆ ಆಗುತ್ತಿಲ್ಲ’ ಎಂದು ಕಣ್ಣೀರು ಹಾಕಿದರು.

‘40 ದಿನಗಳಿಂದ ಸಂಪಾದನೆ ಇಲ್ಲ. ಆದಾಯ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟಿದ್ದರೂ ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ. ಪರಿಹಾರವನ್ನು ನೀಡುವುದರ ಜೊತೆಗೆ, ನನಗೆ ಕೆಲಸವನ್ನೂ ಕೊಡಿಸಬೇಕು. ಇದರಿಂದ ನಮಗೆ ಜೀವನ ನಡೆಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT