ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬರೀ ಕಾನೂನುಗಳ ಸಂಗ್ರಹ ಅಲ್ಲ: ಶ್ರೀನಿವಾಸ ಪ್ರಸಾದ್‌

ಚಾಮರಾಜನಗರ: ಅಂಬೇಡ್ಕರ್ ಭವನದಲ್ಲಿ ಸಮಾರಂಭ, 30 ಸಾವಿರ ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ವಿತರಣೆ
Last Updated 13 ಮಾರ್ಚ್ 2021, 13:32 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾರತದ ಸಂವಿಧಾನ ಎಂದರೆ ಅದು ಕಾನೂನುಗಳ ಸಂಗ್ರಹ ಅಲ್ಲ. ಕೋಟ್ಯಂತರ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಶ್ರೇಷ್ಠ ಗ್ರಂಥ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಶನಿವಾರ ಪ್ರತಿಪಾದಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ತಮ್ಮತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಿಯುಸಿಯ 30 ಸಾವಿರ ವಿದ್ಯಾರ್ಥಿಗಳಿಗೆ, ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನ್‌ ದಾಸ್ ಅವರು ಬರೆದಿರುವ ‘ಸಂವಿಧಾನ ಓದು’ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಜನರ ಜೀವನ ವ್ಯವಸ್ಥೆಯನ್ನು ರೂಪಿಸಿರುವ ಗ್ರಂಥ ಇದು. ಜನರಿಗೆ ಇದು ಅರ್ಥವಾಗಬೇಕು. ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳಿಸಬೇಕು ಎಂಬ ಉದ್ದೇಶದಿಂದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹15 ಲಕ್ಷ ವೆಚ್ಚದಲ್ಲಿ ಸಂವಿಧಾನ ಓದು ಎಂಬ ಕೃತಿಯನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ದೇಶದಲ್ಲೇ ಇದು ಮೊದಲ ಪ್ರಯತ್ನ’ ಎಂದರು.

‘ನನ್ನ ಉದ್ದೇಶಕ್ಕೆ ಪ್ರೇರಣೆಯಾಗಿದ್ದು, ಹೊಂಡರಬಾಳುವಿನ ನವೋದಯ ಶಾಲೆಯ ವಿದ್ಯಾರ್ಥಿಗಳು. ಎರಡು ವರ್ಷಗಳ ಹಿಂದೆ ನನ್ನ ಮುಂದೆ ಅವರು ಅಣಕು ಸಂಸತ್‌ ನಡೆಸಿದ್ದರು. ಮಕ್ಕಳು ತುಂಬಾ ಚೆನ್ನಾಗಿ ಸಂಸತ್ತಿನ ಕಾರ್ಯವೈಖರಿಯನ್ನು ಪ್ರದರ್ಶಿಸಿದ್ದರು’ ಎಂದರು.

ಸಮಾನತೆಯ ಪ್ರತಿಪಾದಕ: ‘ಭಾರತಕ್ಕೆ ಗಣರಾಜ್ಯದ ಪರಿಕಲ್ಪನೆ ಕೊಟ್ಟವರು ಅಂಬೇಡ್ಕರ್‌. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್‌ ಅವರನ್ನು ಬಿಟ್ಟರೆ, ಜಗತ್ತಿನಲ್ಲಿ ಸಮಾನತೆಯ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದವರು ನಮ್ಮ ಅಂಬೇಡ್ಕರ್‌ ಅವರು’ ಎಂದು ಹೇಳಿದರು.

ಸಂವಿಧಾನ ಬಹಳ ಗಟ್ಟಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಉತ್ಕೃಷ್ಟ ಸಂಗತಿಗಳಿಂದ ಕೂಡಿದ ಸಂವಿಧಾನದ ರಚನೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪಾತ್ರ ಮಹತ್ವದ್ದು. ನಮ್ಮ ಸಂವಿಧಾನ ಬಹಳ ಗಟ್ಟಿಯಾಗಿದೆ. ಇಂತಹ ಸಂವಿಧಾನ ಇಡೀ ಜಗತ್ತಿನಲ್ಲಿ ಇಲ್ಲ’ ಎಂದು ಹೇಳಿದರು.

‘ಶ್ರೀನಿವಾಸ ಪ್ರಸಾದ್‌ ಅವರು ಸಂಸದರ ನಿಧಿಯಿಂದ ಮಕ್ಕಳಿಗೆ ಸಂವಿಧಾನ ಓದು ಪುಸ್ತಕವನ್ನು ಖರೀದಿಸಿ ಉಚಿತವಾಗಿ ನೀಡುತ್ತಿದ್ದಾರೆ. ಪಿಯು ವಿದ್ಯಾರ್ಥಿಗಳು ಪ್ರೌಢರು. ಎಲ್ಲ ಅಂಶಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎಲ್ಲರೂ ಪೂರೈಸಬೇಕು. ಸಂವಿಧಾನದ ಬಗ್ಗೆ ಯಾವುದೇ ರೀತಿಯಲ್ಲಿ ಅಪ್ರಚಾರ ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಎಲ್ಲರೂ ಮಾಡಬೇಕು’ ಎಂದು ಅವರು ತಿಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ನಾನು ರಾಜಕೀಯದಲ್ಲಿ ಸಾಧನೆ ವಿ.ಶ್ರೀನಿವಾಸ ಪ್ರಸಾದ್‌ ಅವರು ಕಾರಣ. ಅವರು ಪಕ್ಷ ಬಿಟ್ಟ ಮೇಲೆ ಅವರೊಂದಿಗೆ ಹೋಗುವುದನ್ನು ಬಿಟ್ಟೆ. ಆದರೆ, ಅವರನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ಅವರ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ’ ಎಂದರು.

‘ಸಂವಿಧಾನದ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ₹15 ಲಕ್ಷ ವೆಚ್ಚಮಾಡಿ 30 ಸಾವಿರ ಪುಸ್ತಕಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ’ ಎಂದರು.

ಭಾವುಕರಾದ ಶ್ರೀನಿವಾಸ ಪ್ರಸಾದ್‌

ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾವಿದ ನರಸಿಂಹಮೂರ್ತಿ ಅವರು ಡಾ.ಸಿದ್ದಲಿಂಗಯ್ಯ ಅವರು ಬರೆದಿರುವ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ’ ಎಂಬ ಹಾಡನ್ನು ಹಾಡುತ್ತಿದ್ದಾಗ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಬಾವುಕರಾದರು. ಕರವಸ್ತ್ರದಲ್ಲಿ ಪದೇ ಪದೇ ಕಣ್ಣುಗಳನ್ನು ಒರೆಸಿಕೊಂಡರು.

ಕುತಂತ್ರದಿಂದ ಕೆಳಗಿಳಿಸಿದರು: ಸೋಮಶೇಖರ್‌

ಸಹಕಾರ ಹಾಗೂ ಮೈ‌ಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಮಾತನಾಡಿ, ‘ಶ್ರೀನಿವಾಸ ಪ್ರಸಾದ್‌ ಅವರು45 ವರ್ಷ ರಾಜಕಾರಣ ಮಾಡಿದ್ದಾರೆ. ಅವರಿಗೆ ಇವತ್ತು ಅನಾರೋಗ್ಯ ಇರಬಹದು. ಕಂದಾಯ ಸಚಿವರಾಗಿದ್ದ ಅವರನ್ನು ಕೆಲವರು ಹುದ್ದೆಯಿಂದ ತೆಗೆದರು. ಒಳ್ಳೆಯದಕ್ಕೆ ತೆಗೆದಿಲ್ಲ. ಅವರ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಂಡರು. ಶ್ರೀನಿವಾಸ ಪ್ರಸಾದ್‌ ಹೆಸರು ಹೇಳಿಕೊಂಡು ರಾಜಕೀಯವಾಗಿ ಬೆಳೆದರು’ ಎಂದರು.

ಆರು ಬಾರಿ ಲೋಕಸಭಾ ಸದಸ್ಯರಾಗುವುದು ಸುಲಭ ಅಲ್ಲ. ಒಮ್ಮೆ ಗೆದ್ದರೆ ಮತ್ತೊಮ್ಮೆ ಗೆಲ್ಲುತ್ತೇವೆಯೋ ಎಂಬುದು ಗೊತ್ತಿಲ್ಲ.ಕೆಲವೇ ಕೆಲವು ಕುತಂತ್ರಿಗಳು ಅವರನ್ನು ಕಂದಾಯ ಮಂತ್ರಿ ಸ್ಥಾನದಿಂದ ಇಳಿಯುವಂತೆ ಮಾಡಿದರು. ಆದರೆ, ಅವರು ರಾಜಕೀಯದಲ್ಲಿ ಮುಂದುವರಿಯುವುದನ್ನು ತಡೆಯಲು ಯಾವ ಶಕ್ತಿಗೂ ಆಗಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT