ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಆರೋಗ್ಯ ಸೇವೆ: ಸಂತೇಮರಹಳ್ಳಿ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಮನ್ನಣೆ

ಜೂನ್‌ 26, 28ರಂದು ತಜ್ಞರ ತಂಡ ಪರಿಶೀಲನೆ
Published 25 ಜುಲೈ 2023, 5:52 IST
Last Updated 25 ಜುಲೈ 2023, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ವಿಭಾಗಗಳಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದರಲ್ಲಿ ತಾಲ್ಲೂಕಿನ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.  

ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರವು (ಎನ್‌ಎಚ್‌ಎಸ್‌ಆರ್‌ಸಿ) ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳು (ಎನ್‌ಕ್ಯುಎಎಸ್‌) ಕಾರ್ಯಕ್ರಮದ ಅಡಿಯಲ್ಲಿ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಮೌಲ್ಯಮಾಪ‌ನ ಮಾಡಿದೆ.

ತಜ್ಞರ ತಂಡವು ಜೂನ್‌ 26 ಮತ್ತು 28ರಂದು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕೇಂದ್ರದಲ್ಲಿರುವ ತುರ್ತು ಚಿಕಿತ್ಸಾ ವಿಭಾಗ, ಹೊರರೋಗಿ ವಿಭಾಗ, ರೇಡಿಯಾಲಜಿ, ಔಷಧ ಮಳಿಗೆ ಸೇರಿದಂತೆ ಒಟ್ಟು 12 ವಿಭಾಗಗಳ ಕುರಿತಾಗಿ ಮೌಲ್ಯಮಾಪನ ಮಾಡಲಾಗಿದ್ದು, 87.06 ಅಂಕಗಳು ಸಿಕ್ಕಿವೆ.

ಇಡೀ ರಾಜ್ಯದಲ್ಲಿ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾತ್ರ ಈ ಮನ್ನಣೆ ಸಿಕ್ಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಹೇಳಿದರು. 

ಸೋಮವಾರ ನಡೆದ ಕೆಡಿಪಿ ಸಭೆಯಲ್ಲೂ ಅವರು ಈ ವಿಚಾರವನ್ನು ಸಚಿವರು, ಶಾಸಕರ ಗಮನಕ್ಕೆ ತಂದರು. 

ವಸೂಲಿ ಆರೋಪ: ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಮಾತನಾಡಿದ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ, ‘ಉತ್ತಮ ಅಂಕಗಳು ಬಂದು, ಕೇಂದ್ರಕ್ಕೆ ಹೆಸರು ಬಂದಿರುವುದು ಸಂತೋಷ. ಆದರೆ, ಅಲ್ಲಿ ಬಡ ರೋಗಿಗಳಿಂದ ವೈದ್ಯರು ಹಣ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇದನ್ನು ತಡೆಯಲು ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ, ‘ನಾನು ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಸಾರ್ವಜನಿಕರಿಗೆ ಚಿಕಿತ್ಸೆಗಾಗಿ ಹಣ ನೀಡಬೇಡಿ ಎಂದು ಹೇಳುತ್ತಿರುತ್ತೇನೆ. ನಮ್ಮ ಅಧಿಕಾರಿ, ಸಿಬ್ಬಂದಿಗೂ ಜನರಿಂದ ಹಣ ಪಡೆಯಬೇಡಿ ಎಂದು ಹೇಳಿದ್ದೇನೆ’ ಎಂದರು. 

ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಮಾತನಾಡಿ, ‘ಎಲ್ಲ ಸರ್ಕಾರಿ ಆಸ್ಪತ್ರೆಗಳ ಮುಂಭಾಗ, ಚಿಕಿತ್ಸೆಗೆ ಹಣ ನೀಡುವಂತಿಲ್ಲ ಎಂದು ಫಲಕ ಹಾಕಿ, ಈ ಬಗ್ಗೆ ದೂರುಗಳಿದ್ದರೆ ನೀಡುವುದಕ್ಕೆ ಒಂದು ಸಹಾಯವಾಣಿ ರೀತಿ ಮಾಡೋಣ’ ಎಂದರು.

ಸಚಿವರು ಹಾಗೂ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT