ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ ₹ 50 ಲಕ್ಷ ಪರಿಹಾರಕ್ಕೆ ಆಗ್ರಹ

ಆಮ್ಲಜನಕ ದುರಂತಕ್ಕೆ ಎರಡು ತಿಂಗಳು; ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ
Last Updated 3 ಜುಲೈ 2021, 2:07 IST
ಅಕ್ಷರ ಗಾತ್ರ

ಚಾಮರಾಜನಗರ: ಆಮ್ಲಜನಕ ಕೊರತೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ₹ 50 ಲಕ್ಷ ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರಿಗೆ ಮೃತರ ಕುಟುಂಬದ ಸದಸ್ಯರು ಸಾಥ್‌ ನೀಡಿದರು.

ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಸೇರಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ಅಬ್ರಾರ್ ಅಹಮದ್, ಜಿಲ್ಲಾ ಘಟಕದ ಅಧ್ಯಕ್ಷ ಕಲೀಲ್ ಉಲ್ಲಾ, ಪ್ರಧಾನ‌ ಕಾರ್ಯದರ್ಶಿ ಎಂ.ಮಹೇಶ್, ಪಿಯುಸಿಎಲ್ ಮುಖಂಡ ಕೆ.ವೆಂಕಟರಾಜು ಅವರು ಸರ್ಕಾರ, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ದುರಂತ ನಡೆದು ಎರಡು ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಎಲ್ಲ ಸಂತ್ರಸ್ತರಿಗೆ ಪರಿಹಾರ‌ ನೀಡಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ನಿವೃತ್ತಿನ್ಯಾಯಮೂರ್ತಿವೇಣುಗೋಪಾಲ್ ನೇತೃತ್ವದ ಸಮಿತಿ ನೀಡಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವರದಿಯು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಒತ್ತಿ ಹೇಳಿದೆ. ಇಷ್ಟಾದರೂ ಜಿಲ್ಲಾಧಿಕಾರಿ ಸೇರಿದಂತೆ ಯಾವೊಬ್ಬ ವೈದ್ಯಾಧಿಕಾರಿಯ ವಿರುದ್ಧವೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ' ಎಂದು ಪ್ರತಿಭಟನಕಾರರು ಆರೋಪಿಸಿದರು.

'ಸರ್ಕಾರ ನೇಮಕ ಮಾಡಿರುವ ಏಕಸದಸ್ಯ ಆಯೋಗದ ಕಚೇರಿ ಕೂಡ ಮೈಸೂರಿನಲ್ಲಿದ್ದು, ಸಂತ್ರಸ್ತರು ಮೈಸೂರಿಗೆ ಹೋಗಿ ದೂರು ನೀಡುವುದು, ಅಗತ್ಯಕ್ಕೆ ಅನುಸಾರವಾಗಿ ಪದೇಪದೇ ಆಯೋಗದ ಕಚೇರಿಗೆ ಹೋಗಿ ಬರಲು ಕಷ್ಠ ಆಗುತ್ತಿದೆ. ಇದು ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂತ್ರಸ್ತರಿಗೆ ಇದರಿಂದ ತೊಂದರೆಯಾಗಿದೆ. ಈ ದುರ್ಘಟನೆಯಲ್ಲಿ ಬಲಿಯಾದವರಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಎಸ್‌ಸಿ, ಎಸ್‌ಟಿ ಸಮುದಾಯದವರು, ಕೂಲಿಕಾರ್ಮಿಕರು ಇದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನ ಇಲ್ಲದೆ ಬಡಕುಟುಂಬಗಳ ಬದುಕು ತೊಂದರೆಯಲ್ಲಿ ಸಿಲುಕಿವೆ. ಆದ್ದರಿಂದ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಂತ್ರಸ್ತರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಹಾಗೂ ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಪ್ರತಿಭಟನಕಾರರು ರಾಜ್ಯಪಾಲರಿಗೆ ಮನವಿ ಮಾಡಿದರು.

ರಾಜ್ಯಪಾಲರಿಗೆ ನೀಡಬೇಕಾದ ಮನವಿ ಪತ್ರವನ್ನು ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ಅವರಿಗೆ ಸಲ್ಲಿಸಿದರು.

ಸಮತ ಸೈನಿಕ ದಳದ ಸಂಘಸೇನಾ, ಸಮಾಜವಾದಿ ಜಿ.ಎಂ.ಗಾಡ್ಕರ್, ಪಿಎಫ್ಐ ಜಿಲ್ಲಾಧ್ಯಕ್ಷ ಕಫೀಲ್ ಅಹಮದ್, ನಗರಸಭಾ ಸದಸ್ಯರಾದ ಸಮೀಉಲ್ಲಾ , ಮೊಹಮ್ಮದ್ ಅಮೀಕ್, ಸಂತ್ರಸ್ತರ ಕುಟುಂಬದ ಸದಸ್ಯರಾದ ನಂಜಮ್ಮ, ಸಿದ್ದರಾಜಮ್ಮ, ಜ್ಯೋತಿ ಇತರರು ಇದ್ದರು.

‘ಅಲೆದಾಡಿದರೂ ನ್ಯಾಯ ಸಿಕ್ಕಿಲ್ಲ'

ದುರಂತದಲ್ಲಿ ಮೃತಪಟ್ಟ ಬಿಸಿಲವಾಡಿಯ ಸಿದ್ದನಾಯಕ ಅವರ ಪತ್ನಿ ಜ್ಯೋತಿ ಮಾತನಾಡಿ, 'ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ವೈದ್ಯರು... ಹೀಗೆ ಎಲ್ಲರಿಗೂ ಮನವಿ ಮಾಡಿದ್ದೇನೆ. ಆದರೆ, ಇದುವರೆಗೆ ನನಗೆ ನ್ಯಾಯ ದೊರಕಿಲ್ಲ. ಸಂತ್ರಸ್ತರ ಪಟ್ಟಿಯಲ್ಲಿ ನನ್ನ ಪತಿಯ ಹೆಸರಿಲ್ಲ. ನನಗೆ ಹೊರಗಡೆ ಓಡಾಡಿ ಗೊತ್ತಿಲ್ಲ. ಹಾಗಿದ್ದರೂ ಎರಡು ತಿಂಗಳಲ್ಲಿ ಎಲ್ಲ ಕಡೆ ಅಲೆದಾಡಿದೆ. ಏನೂ ಪ್ರಯೋಜನವಾಗಿಲ್ಲ' ಎಂದು ದುಃಖಿಸಿದರು.

‘ಮೈಸೂರಿನಲ್ಲಿರುವ, ಸರ್ಕಾರ‌ ನೇಮಿಸಿರುವ ತನಿಖಾ ಆಯೋಗದ ಕಚೇರಿಗೆ ಎರಡು ಬಾರಿ ಹೋದೆ. ವಿಚಾರಣೆಗೂ ಹಾಜರಾಗಿದ್ದೇನೆ. ನಮ್ಮ ಬಳಿ ಇರುವ ದಾಖಲೆಗಳನ್ನೆಲ್ಲ ಕೊಟ್ಟಿದ್ದೇನೆ. ಆಸ್ಪತ್ರೆಯಲ್ಲಿ ಇನ್ನೂ ಮರಣ ದೃಢೀಕರಣ ಪತ್ರ ಕೊಟ್ಟಿಲ್ಲ. ಇದರಿಂದಾಗಿ ತೊಂದರೆಯಾಗಿದೆ. ಕೇಳಿದರೆ ದಾಖಲೆಗಳನ್ನೆಲ್ಲ ಹೈಕೋರ್ಟ್ ಜಪ್ತಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಮಕ್ಕಳ ಶಾಲೆಯಲ್ಲೂ ಮರಣ ದೃಢೀಕರಣ ಪತ್ರ ಕೇಳುತ್ತಿದ್ದಾರೆ' ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT