ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ರಜತ ವರ್ಷದಲ್ಲಿ ಪ್ರತ್ಯೇಕ ವಿ.ವಿ ಕನಸು ನನಸು

ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಶೀಘ್ರದಲ್ಲಿ ಜಿಲ್ಲೆಯ ವಿಶ್ವವಿದ್ಯಾಲಯ, ಸಚಿವ ಸಂಪುಟ ಒಪ್ಪಿಗೆ
Last Updated 27 ಆಗಸ್ಟ್ 2022, 1:00 IST
ಅಕ್ಷರ ಗಾತ್ರ

ಚಾಮರಾಜನರ: ಜಿಲ್ಲೆಯು ರಜತ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ.

ನಗರದ ಹೊರ ವಲಯದ ಬೇಡರಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರವು ಮೈಸೂರು ವಿವಿಯಿಂದ ಬೇರ್ಪಟ್ಟು ಶೀಘ್ರ ಪ್ರತ್ಯೇಕ ವಿವಿಯಾಗಲಿದೆ.

ಚಾಮರಾಜನಗರ ಸೇರಿದಂತೆ ರಾಜ್ಯದಲ್ಲಿ ಹೊಸ ಎಂಟು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ (2001ರ ಕರ್ನಾಟಕ ಅಧಿನಿಯಮ 29) ತಿದ್ದುಪಡಿ ತರಲು ಸಮ್ಮತಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್‌ ಮಂಡಿಸುವಾಗ ಚಾಮರಾಜನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ವಿನೂತನ ಮಾದರಿಯ ವಿವಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಇದಕ್ಕಾಗಿ ತಲಾ ₹2 ಕೋಟಿ ಹಣ ಮೀಸಲಿಟ್ಟಿದ್ದರು.

ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿರುವುದರಿಂದ ಉನ್ನತ ಶಿಕ್ಷಣ ಇಲಾಖೆಯು ತಕ್ಷಣದಿಂದಲೇ ಪ್ರತ್ಯೇಕ ವಿವಿ ರಚನೆ ಪ್ರಕ್ರಿಯೆ ಆರಂಭಿಸಲಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಸದನದ ಒಪ್ಪಿಗೆ ಪಡೆಯಬೇಕು. ಇಲ್ಲವೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕು.

‘ಆ ಬಳಿಕ ವಿವಿಗೆ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಲಿದೆ. ಅವರು ವಿವಿ ಪ್ರತ್ಯೇಕಿಸುವ ಪ್ರಕ್ರಿಯೆಯನ್ನು ಮಾಡಲಿದ್ದಾರೆ. ಕೊನೆಗೆ ಅವರನ್ನೇ ಹೊಸ ವಿವಿಗೆ ಕುಲಪತಿಗಳನ್ನಾಗಿ ನೇಮಕ ಮಾಡಲಿದೆ. ತಕ್ಷಣದಿಂದಲೇ ಈ ಕೆಲಸ ನಡೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಚಾಮರಾಜನಗರ ವಿವಿಯ ಅಡಿಯಲ್ಲೇ ನಡೆಯಲಿದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರತ್ಯೇಕ ವಿವಿಗೆ ಹೊಸ ಕಟ್ಟಡ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸುವುದಿಲ್ಲ. ಹಾಗಾಗಿ, ಈಗಿರುವ ಮೂಲಸೌಕರ್ಯಗಳನ್ನೇ ಬಳಸಿಕೊಂಡು ವಿವಿ ಕಾರ್ಯನಿರ್ವಹಿಸಬೇಕಾಗಿದೆ.

‘ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಯಾವುದೇ ಜಮೀನು, ನೂತನ ವಾಹನಗಳನ್ನು ಖರೀದಿಸುವಂತಿಲ್ಲ. ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿವಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯವಿರುವ ಹುದ್ದೆಗಳನ್ನು ನಿಯೋಜನೆ ಮೇಲೆ ಬಳಸಿಕೊಳ್ಳಬೇಕು. ಯಾವುದೇ ಹೊಸ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವಂತಿಲ್ಲ’ ಎಂದು ಹಣಕಾಸು ಇಲಾಖೆ ಹೇಳಿದೆ.

ಈಗಾಗಲೇ ಮೈಸೂರು ವಿವಿಯು ಸ್ನಾತಕೋತ್ತರ ಕೇಂದ್ರಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಯೋಜನೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜ್ಞಾನ ಬ್ಲಾಕ್‌ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕೆಲಸವೂ ಆರಂಭವಾಗಲಿದೆ.

12 ವರ್ಷಗಳಲ್ಲಿ ಹೊಸ ವಿ.ವಿ: 2010–11ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಸ್ನಾತಕೋತ್ತರ ಕೇಂದ್ರ ಆರಂಭವಾಗಿತ್ತು. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗಿತ್ತು.

2016ರಲ್ಲಿ ಈ ಕೇಂದ್ರಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಎಂದು ನಾಮಕರಣ ಮಾಡಲಾಗಿತ್ತು. ಸದ್ಯ ಇಲ್ಲಿ 12 ಸ್ನಾತಕೋತ್ತರ ಕೋರ್ಸ್‌ಗಳಿದ್ದು, 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಫಲಿತಾಂಶವೂ ಚೆನ್ನಾಗಿದೆ. ಪ್ರತಿ ವರ್ಷ ಎಂ.ಎ ಕನ್ನಡ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿಗಳೇ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿ ವಿವಿಗೆ ಮೊದಲ ರ‍್ಯಾಂಕ್‌ ಗಳಿಸುತ್ತಾ ಬಂದಿದ್ದಾರೆ.ಇತ್ತೀಚೆಗೆಮಂಟೇಸ್ವಾಮಿ ಅಧ್ಯಯನ ‍ಪೀಠವೂ ಇಲ್ಲಿ ಸ್ಥಾಪನೆಯಾಗಿದೆ.

ಪ್ರತ್ಯೇಕ ವಿವಿ ಸ್ಥಾಪನೆಯಿಂದಾಗಿ ಇನ್ನಷ್ಟು ಕೋರ್ಸ್‌ಗಳು ಲಭ್ಯವಾಗಲಿದ್ದು, ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ನೆಲ ಮೂಲದ ಸಂಸ್ಕೃತಿಗೆ ಒತ್ತು ನೀಡಲಿ...
ಹೊಸ ವಿವಿ ಸ್ಥಾಪನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ, ‘ಹೊಸ ವಿಶ್ವವಿದ್ಯಾಲಯ ಬಂದರೆ ಸಂತೋಷ. ಅದು ಯಾವುದಕ್ಕೆ ಪ್ರಾಮುಖ್ಯ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. ನೆಲಮೂಲದ ಸಂಸ್ಕೃತಿ, ಇಲ್ಲಿನ ಪರಂಪರೆಗೆ ಒತ್ತು ನೀಡಬೇಕು. ಜನರ ಬದುಕು ಹಸನು ಮಾಡುವ ಶಿಕ್ಷಣ ಇಲ್ಲಿ ಸಿಗಬೇಕು. ವಿವಿಗೆ ಹೆಚ್ಚು ಸ್ವಾಯತ್ತತೆ ಇರಬೇಕು. ಮುಕ್ತ ಹಾಗೂ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ವಾತಾವರಣ ಇರಬೇಕು’ ಎಂದರು.

ಗ್ರಾಮೀಣ ಹೆಣ್ಣುಮಕ್ಕಳಿಗೆ ಅನುಕೂಲ...
‘ನಮ್ಮಲ್ಲಿ 600 ಮಕ್ಕಳು ಓದುತ್ತಿದ್ದಾರೆ. ಬಹುತೇಕ ಮಕ್ಕಳು ಗ್ರಾಮೀಣ ಭಾಗದವರು. ಅದರಲ್ಲೂ ಶೇ 60ರಷ್ಟು ಹೆಣ್ಣುಮಕ್ಕಳಿದ್ದಾರೆ. ಇವರು ಮೈಸೂರಿಗೆ ಹೋಗಿ ಸ್ನಾತಕೋತ್ತರ ಕೋರ್ಸ್‌ ಮಾಡುವ ಸ್ಥಿತಿಯಲ್ಲಿಲ್ಲ. ಪೋಷಕರು ಕೂಡ ಕಳುಹಿಸಲು ಹಿಂಜರಿಯುತ್ತಾರೆ. ಜಿಲ್ಲೆಯಲ್ಲೇ ಇದ್ದ ಕಾರಣಕ್ಕೆ ಈ ಕೇಂದ್ರಕ್ಕೆ ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ವಿವಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯಲ್ಲಿ ಎಲ್ಲೂ ಇಂಗ್ಲಿಷ್‌ ಪ್ರಧಾನ ವಿಷಯದ ಕೋರ್ಸ್‌ಗಳಿಲ್ಲ. ವಿವಿಯಾದರೆ ಹೊಸ ಹೊಸ ಕೋರ್ಸ್‌ಗಳು ಬರಲಿವೆ. ಜಿಲ್ಲೆಯ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ’ ಎಂದು ಸ್ನಾತಕೋತ್ತರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು ‘ಪ್ರಜಾವಾಣಿ’ಗೆ ತಿಳಿಸಿದರು.

*

ಜಿಲ್ಲೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಇದು ಸಂತಸದ ಸುದ್ದಿ. ವಿವಿಯ ರೂಪುರೇಷೆಯ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕಿಲ್ಲ. ಸರ್ಕಾರದ ಆದೇಶದ ಬಳಿಕವೇ ತಿಳಿಯಲಿದೆ.
–ಪ್ರೊ. ಆರ್‌.ಮಹೇಶ್‌, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ

*

ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಇದು ಮಹತ್ತರ ಮೈಲಿಗಲ್ಲು. ಕೌಶಲ ಆಧಾರಿತ ವಿವಿ ಸ್ಥಾಪಿಸಬೇಕು ಎಂಬುದು ಸರ್ಕಾರದ ನಿಲುವು. ಶೀಘ್ರವಾಗಿ ಆರಂಭವಾಗಬೇಕು.
–ಪ್ರದೀಪ್‌ಕುಮಾರ್‌ ದೀಕ್ಷಿತ್‌, ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT