ಭಾನುವಾರ, ಜೂಲೈ 12, 2020
22 °C
ಜಿಲ್ಲೆಯ ಅತ್ಯಾಧುನಿಕ ಪ್ರಯೋಗಾಲಯ ತಾತ್ಕಾಲಿಕ ಬಂದ್‌

ಚಾಮರಾಜನಗರ: ಸಿಬ್ಬಂದಿಗೆ ಕೋವಿಡ್‌–19, ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಒಂದೂವರೆ ತಿಂಗಳ ಹಿಂದೆ ತಾಲ್ಲೂಕಿನ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಕೋವಿಡ್‌–19 ಪರೀಕ್ಷಾ ಪ್ರಯೋಗಾಲಯ ತಾತ್ಕಾಲಿಕವಾಗಿ ಮುಚ್ಚಿರುವುದರಿಂದಾಗಿ ಕೋವಿಡ್‌ ವಿರುದ್ಧ ಜಿಲ್ಲಾಡಳಿತ ನಡೆಸುತ್ತಿರುವ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. 

ಪ್ರಯೋಗಾಲಯದ ತಂತ್ರಜ್ಞೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಪ್ರಯೋಗಾಲಯವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿರುವುದರಿಂದ ಮೂರು ದಿನಗಳಿಂದ ಪರೀಕ್ಷೆ ನಡೆಯುತ್ತಿಲ್ಲ. ಸಂಗ್ರಹಿಸಲಾಗುತ್ತಿರುವ ಗಂಟಲ ದ್ರವ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನಗಳಿಂದ ವರದಿ ಬಂದಿಲ್ಲ.

 ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಸಂಜೆಯವರೆಗೆ 978 ಮಾದರಿಗಳ ವರದಿ ಬರಬೇಕಿದೆ. 

ಸಿಬ್ಬಂದಿ ಇಲ್ಲ: ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡರೂ ಒಂದೆರಡು ದಿನಗಳ ಕಾಲ ಪ್ರಯೋಗಾಲಯವನ್ನು ಸೀಲ್‌ ಡೌನ್‌ ಮಾಡಿ ನಂತರ ಪರೀಕ್ಷಾ ಕಾರ್ಯ ಆರಂಭಿಸಬಹುದು. ಆದರೆ, ಇಲ್ಲಿ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಉಳಿದ ಆರು ಮಂದಿ ಕೂಡ ಆರು ದಿನಗಳ ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 

ಪರೀಕ್ಷೆ ನಡೆಸುವ ಅನುಭವ ಹೊಂದಿರುವ ಬೇರೆ ಸಿಬ್ಬಂದಿ ವೈದ್ಯಕೀಯ ಕಾಲೇಜಿನಲ್ಲಿ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣದ ಕಲ್ಪನೆಯೇ ಇಲ್ಲದೇ ಇದ್ದುದರಿಂದ ಪರ್ಯಾಯ ತಂಡವನ್ನು ಸಿದ್ಧಪಡಿಸುವ ಕೆಲಸ ನಡೆದಿಲ್ಲ. ಹಾಗಾಗಿ, ಮತ್ತಷ್ಟು ತೊಂದರೆಯಾಗಿದೆ. 

ಹೆಚ್ಚಿದ್ದ ಪರೀಕ್ಷೆಗಳು: ಕೋವಿಡ್‌–19 ನಿಯಂತ್ರಣದಲ್ಲಿ ಪರೀಕ್ಷೆ ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಒತ್ತು ನೀಡಿತ್ತು. 

ವಾರದಿಂದೀಚೆಗೆ ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಗಳ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿತ್ತು. ದಿನಕ್ಕೆ 300ರವರೆಗೆ ಪರೀಕ್ಷೆಗಳು ನಡೆಯುತ್ತಿದ್ದವು. ಒಂದೇ ದಿನದಲ್ಲಿ ವರದಿಯೂ ಬರುತ್ತಿತ್ತು.

ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಪ್ರಯೋಗಾಲಯವನ್ನು ಮುಚ್ಚಬೇಕಾಗಿ ಬಂದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

‘ಜಿಲ್ಲೆಯಲ್ಲಿ ಸದ್ಯ 12 ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದ್ದು, ದಿನವೊಂದಕ್ಕೆ 350ರವೆಗೂ ಗಂಟಲ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಬೇರೆ ಪ್ರಯೋಗಾಲಯಗಳ ಮೇಲೆ ಈಗಾಗಲೇ ಒತ್ತಡ ಹೆಚ್ಚಿರುವುದರಿಂದ ನಮ್ಮ ವರದಿಗಳು ಬರುವುದಕ್ಕೆ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. 

ವರದಿ ಬೇಗ ಬರಬೇಕು: ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಪರೀಕ್ಷಾ ವರದಿ ಶೀಘ್ರವಾಗಿ ಲಭ್ಯವಾಗುವುದು ಮುಖ್ಯ. ಬೇಗ ಬಂದಷ್ಟೂ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗುತ್ತದೆ. ಜೊತೆಗೆ ರೋಗಿಯ ಸಂಪರ್ಕಿತರನ್ನು ವೇಗವಾಗಿ ಪತ್ತೆ ಹಚ್ಚುವುದಕ್ಕೂ ಸಾಧ್ಯವಾಗುತ್ತದೆ. 

ಎರಡು ದಿನಗಳಿಂದ ವರದಿಗಳು ಬರದೇ ಇರುವುದರಿಂದ, ಈಗ ಒಂದೇ ಬಾರಿ ವರದಿ ಬಂದರೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಜೊತೆಗೆ, ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವುದೂ ಕಷ್ಟವಾಗುತ್ತದೆ. ಇದರಿಂದಾಗಿ ಸೋಂಕು ಇನ್ನಷ್ಟು ಹರಡುವ ಸಂಭವವೂ ಇರುತ್ತದೆ. 

ಇಂದು ಅಥವಾ ನಾಳೆ ಆರಂಭ ಸಾಧ್ಯತೆ

ಈ ಮಧ್ಯೆ, ಜಿಲ್ಲಾಡಳಿತ ಹಾಗೂ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಪ್ರಯೋಗಾಲಯವನ್ನು ಮತ್ತೆ ತೆರೆಯಲು ಪ್ರಯತ್ನ ಪಡುತ್ತಿದ್ದಾರೆ. 

ಕ್ವಾರಂಟೈನ್‌ನಲ್ಲಿರುವ ಸಿಬ್ಬಂದಿ ಕನಿಷ್ಠ ಆರು ದಿನಗಳ ಕಾಲ ಮನೆಯಲ್ಲಿ ಇರಬೇಕಾಗುತ್ತದೆ. ಮನೆಯಿಂದಲೇ ಅವರ ನೆರವನ್ನು ಪಡೆದು, ಲಭ್ಯವಿರುವ ಸಿಬ್ಬಂದಿ ಮೂಲಕ ಪರೀಕ್ಷೆ ಮಾಡಿಸುವ ಯೋಚನೆಯೂ ಅಧಿಕಾರಿಗಳಲ್ಲಿದೆ. 

‘ಪ್ರಯೋಗಾಲಯ ಆದಷ್ಟು ಬೇಗ ಕಾರ್ಯಾರಂಭ ಮಾಡಿದರೆ ನಮಗೆ ಅನುಕೂಲವಾಗುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಮಂಗಳವಾರ ಅಥವಾ ಬುಧವಾರ ಆರಂಭವಾಗಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಹುತೇಕ ಬುಧವಾರ ಮತ್ತೆ ಪರೀಕ್ಷೆ ಆರಂಭವಾಗಲಿದೆ’ ಎಂಬ ಅಭಿಪ್ರಾಯವನ್ನು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಅವರು ವ್ಯಕ್ತಪಡಿಸಿದರು.

ಬುಧವಾರದ ಹೊತ್ತಿಗೆ, ಪ್ರಯೋಗಾಲಯದ ಸಿಬ್ಬಂದಿ ಐದು ದಿನಗಳ ಕಾಲ ಮನೆ ಕ್ವಾರಂಟೈನ್‌ನಲ್ಲಿ ಇದ್ದ ಹಾಗೆ ಆಗುತ್ತದೆ. ನಂತರ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿ, ಅದರಲ್ಲಿ ನೆಗೆಟಿವ್‌ ಬಂದರೆ ಅವರು ಮತ್ತೆ ಕರ್ತವ್ಯ ಆರಂಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು