ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಿಬ್ಬಂದಿ ಕೊರತೆಯಿಂದ ಬಳಲಿದ ಪಶು‌‍‍ಪಾಲನೆ ಇಲಾಖೆ

ಚರ್ಮಗಂಟು ರೋಗ; ಚಿಕಿತ್ಸೆಗೆ ಪರದಾಟ, ಅಧಿಕಾರಿಗಳು, ವೈದ್ಯರ ಮೇಲೆ ಒತ್ತಡ
Last Updated 27 ನವೆಂಬರ್ 2022, 22:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲೂ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿರುವುದರಿಂದ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತಿದೆ.

ಜಿಲ್ಲೆಯ ಐದೂ ತಾಲ್ಲೂಕುಗಳಲ್ಲೂ ಚರ್ಮಗಂಟು ರೋಗ ವರದಿಯಾಗಿದೆ. ಹನೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ 1,071 ಜಾನುವಾರುಗಳಲ್ಲಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿದೆ. 856 ರಾಸುಗಳು ಗುಣಮುಖವಾಗಿವೆ. ಸದ್ಯ 44 ಹಸುಗಳಿಗೆ ಚಿಕಿತ್ಸೆ ಪಡೆಯುತ್ತಿವೆ. ರೋಗ ಪೀಡಿತ 24 ಜಾನುವಾರುಗಳು ಮೃತಪಟ್ಟಿವೆ. ಈ ಪೈಕಿ 16 ಹಸುಗಳು ಮತ್ತು ಎಂಟು ಎತ್ತುಗಳು. ಒಂದು ಹಸುವಿಗೆ ₹20 ಸಾವಿರ ಮತ್ತು ಎತ್ತಿಗೆ ₹30 ಸಾವಿರ ಪರಿಹಾರ ಮೊತ್ತ ನಿಗದಿ ಮಾಡಲಾಗಿದ್ದು, ಒಟ್ಟು ₹5.60 ಲಕ್ಷ ಪರಿಹಾರಕ್ಕಾಗಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 62,295 ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ನೀಡಲಾಗಿದೆ. ಇನ್ನೂ 22 ಸಾವಿರದಷ್ಟು ಲಸಿಕೆ ದಾಸ್ತಾನು ಇದೆ. ಲಸಿಕೆ, ಔಷಧಿಯ ಕೊರತೆ ಇಲ್ಲ. ಬೇಡಿಕೆ ಸಲ್ಲಿಸಿದಾಗಲೆಲ್ಲ ಇಲಾಖೆ ಪೂರೈಸುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ವೈದ್ಯರ ಮೇಲೆ ಒತ್ತಡ: ಜಿಲ್ಲೆಯಲ್ಲಿ ಈಗ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ ನಡೆಯುತ್ತಿದೆ. ಇದರೊಂದಿಗೆ ಚರ್ಮಗಂಟು ಕಾಯಿಲೆಯೂ ವೇಗವಾಗಿ ಹರಡುತ್ತಿದೆ. ಇದರ ನಿಯಂತ್ರಣಕ್ಕೆ ಸೋಂಕು ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಲಸಿಕೆ ನೀಡುವುದು, ಚಿಕಿತ್ಸೆ ನೀಡುವುದು, ಔಷಧಿಗಳನ್ನು ತ್ವರಿತವಾಗಿ ನೀಡುವ ಕೆಲಸ ಆಗಬೇಕಾಗಿದೆ. ಜಿಲ್ಲೆಯಲ್ಲಿ ಪಶು ವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಇರುವ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ತೀವ್ರ ಒತ್ತಡ ಬಿದ್ದಿದೆ.

ಜಿಲ್ಲೆಯಲ್ಲಿ 85 ಪಶುವೈದ್ಯಕೀಯ ಆಸ್ಪತ್ರೆಗಳಿವೆ. ಒಟ್ಟು 358 ಹುದ್ದೆಗಳು ಮಂಜೂರಾಗಿವೆ. 66 ವೈದ್ಯರ ಹುದ್ದೆಗಳಿದ್ದು, ಕೇವಲ 16 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 135 ಇನ್‌ಸ್ಪೆಕ್ಟರ್‌ಗಳು ಇರಬೇಕಾದ ಜಾಗದಲ್ಲಿ 71 ಮಂದಿ ಇದ್ದಾರೆ. ಮಂಜೂರಾಗಿರುವ 138 ಡಿ. ಗ್ರೂಪ್‌ ಹುದ್ದೆಗಳ ಪೈಕಿ 49 ಮಂದಿ ಕಾಯಂ ಸಿಬ್ಬಂದಿ ಇದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ 41 ಮಂದಿ ಕರ್ತವ್ಯನಿರ್ವಹಿಸುತ್ತಿದ್ದಾರೆ.

ಹಲವು ಆಸ್ಪತ್ರೆಗಳು ವೈದ್ಯರು, ಸಿಬ್ಬಂದಿ ಇಲ್ಲದೆ ಬಾಗಿಲು ಹಾಕುವ ಸ್ಥಿತಿಗೆ ಬಂದಿವೆ. ಒಬ್ಬ ವೈದ್ಯರಿಗೆ ಆರೇಳು ಪಶು ಆಸ್ಪತ್ರೆಗಳ ಉಸ್ತುವಾರಿ ನೀಡಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರಿದ್ದಾರೆ. ವೈದ್ಯರ ಕೊರತೆ ಇರುವುದರಿಂದ ಉನ್ನತ ಅಧಿಕಾರಿಗಳು ಕೂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ನಮ್ಮಲ್ಲಿ ಪಶು ಆಸ್ಪತ್ರೆಗಳಿಗೆ ಮೂಲಸೌಕರ್ಯಗಳಿವೆ. ಬಹುತೇಕ ಎಲ್ಲ ಆಸ್ಪತ್ರೆಗಳೂ ಹೊಸ ಕಟ್ಟಡ ಹೊಂದಿವೆ. ನಮ್ಮ ಪ್ರಮುಖ ಸಮಸ್ಯೆ ಸಿಬ್ಬಂದಿಗಳು ಇಲ್ಲದಿರುವುದು. ಸಹಾಯಕ ನಿರ್ದೇಶಕರು ಕೂಡ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆಡಳಿತಾತ್ಮಕ ಕೆಲಸಗಳ ಜೊತೆಗೆ ಇದನ್ನೂ ಮಾಡಬೇಕಾಗಿದೆ’ ಎಂದು ಹೇಳುತ್ತಾರೆ ಇಲಾಖೆಯ ಅಧಿಕಾರಿಗಳು.

ಚರ್ಮಗಂಟು ಕಾಯಿಲೆ ಅತ್ಯಂತ ವೇಗವಾಗಿ ಹರಡುತ್ತದೆ. ಹಾಗಾಗಿ, ತುರ್ತಾಗಿ ಚಿಕಿತ್ಸೆ ನೀಡುವುದು ಅತ್ಯಂತ ಅವಶ್ಯಕ. ಜಿಲ್ಲೆಯ ಹಲವು ಭಾಗಗಳಲ್ಲಿ ನೂರಾರು ಸಂಖ್ಯೆಯ ಜಾನುವಾರುಗಳನ್ನು ಒಂದೇ ಕಡೆ ಕೂಡಿ ಹಾಕಲಾಗಿರುತ್ತದೆ. ಒಂದು ರಾಸಿಗೆ ಸೋಂಕು ತಗುಲಿದರೆ ಉಳಿದವುಗಳಿಗೂ ಸೋಂಕು ತಗಲುವುದು ಖಚಿತ. ಪಶು ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಆದರೆ, ಸಿಬ್ಬಂದಿ ಕೊರತೆಯಿಂದ ತಕ್ಷಣಕ್ಕೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಜಾನುವಾರುಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿ, ಅವು ಸಾಯುತ್ತಿವೆ ಎಂದು ಆರೋಪಿಸುತ್ತಾರೆ ಹೈನುಗಾರರು.

ಒಬ್ಬರೇ ವೈದ್ಯ!: ಹನೂರು ತಾಲ್ಲೂಕಿನ 12 ಪಶು ಆಸ್ಪತ್ರೆಗಳಿವೆ. ಇವೆಲ್ಲದಕ್ಕೂ ಒಬ್ಬರೇ ವೈದ್ಯರಿದ್ದಾರೆ. ಲೊಕ್ಕನಹಳ್ಳಿ, ಕೌದಳ್ಳಿ ಹಾಗೂ ಹನೂರು ಆಸ್ಪತ್ರೆಗಳಲ್ಲಿ ಸಿಬ್ಬಂದಿಯೇ ಇಲ್ಲ. ಹನೂರು ಆಸ್ಪತ್ರೆ ವ್ಯಾಪ್ತಿಗೆ 13 ಗ್ರಾಮಗಳು ಒಳಪಟ್ಟಿದ್ದು, ಹೆಚ್ಚುವರಿಯಾಗಿ ಅಜ್ಜೀಪುರ ಹಾಗೂ ಎಲ್ಲೇಮಾಳ ಗ್ರಾಮದಲ್ಲಿ ಪಶು ಆಸ್ಪತ್ರೆ ತೆರೆಯುವಂತೆ ರೈತರು ಒತ್ತಾಯಿಸಿದ್ದಾರೆ.

28 ಮಂದಿ ಕೆಲಸ: ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 10 ರಾಸುಗಳು ಮೃತಪಟ್ಟಿವೆ. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಿಬ್ಬಂದಿ ಕೊರತೆ ಕಾಡುತ್ತಿದೆ. ಮಂಜೂರಾಗಿರುವ 98 ಸಿಬ್ಬಂದಿ ಪೈಕಿ ಕೇವಲ 28 ಮಾತ್ರ ಕೆಲಸ ಮಾಡುತ್ತಿದ್ದಾರೆ.

ಜನರು ಏನಂತಾರೆ?

ಆಸ್ಪತ್ರೆ ಇದ್ದರೂ ಪ್ರಯೋಜನ ಇಲ್ಲ

ಸಂತೇಮರಹಳ್ಳಿಯಲ್ಲಿ ಪಶು ಆಸ್ಪತ್ರೆ ಇದ್ದರೂ ಪ್ರಯೋಜನವಿಲ್ಲ. ಪಶು ವೈದ್ಯರನ್ನು ನೇಮಿಸಿಲ್ಲ. ಇರುವ ಒಬ್ಬ ಜಾನುವಾರು ಅಧಿಕಾರಿ ಗ್ರಾಮಗಳಿಗೆ ಹೋಗುತ್ತಾರೆ. ಆಸ್ಪತ್ರೆಗೆ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಹೋದಾಗ ವೈದ್ಯರು ಇರುವುದಿಲ್ಲ. ಇದರಿಂದ ಜಾನುವಾರುಗಳಿಗೆ ಚಿಕಿತ್ಸೆ ಇಲ್ಲದೇ ತೊಂದರೆ ಅನುಭವಿಸಬೇಕಾಗಿದೆ.

–ಚಂದ್ರಪ್ಪ, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

ನೇಮಕಾತಿ ಮಾಡಿ

ತಾಲ್ಲೂಕಿನಲ್ಲಿ ಪಶು ವೈದ್ಯರ ಕೊರತೆಯಿಂದಾಗಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದಾಗಿ ರಾಸುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಬೇಕು.

–ಕರಿಯಪ್ಪ, ಚಂಗಡಿ, ಹನೂರು ತಾಲ್ಲೂಕು

ಆಸ್ಪತ್ರೆಯಲ್ಲಿ ವೈದ್ಯರಿಲ್ಲ

ನಮ್ಮ ಭಾಗದಲ್ಲಿ ಹಸುಗಳಿಗೆ ಚರ್ಮ ರೋಗ ಕಾಣಿಸಿಕೊಂಡಿದೆ. ತುರ್ತು ಚಿಕಿತ್ಸೆಯ ಅಗತ್ಯವಿದೆ. ಪಶು ಆಸ್ಪತ್ರೆಗೆ ಜಾನುವಾರುಗಳನ್ನು ತೆಗೆದುಕೊಂಡು ಹೋದರೆ ಅಲ್ಲಿ ವೈದ್ಯರೇ ಇರುವುದಿಲ್ಲ.

–ಶಾಂತರಾಜು, ಚೆನ್ನೂರು, ಹನೂರು ತಾಲ್ಲೂಕು

ಸ್ಪಂದಿಸದ ವೈದ್ಯರು

ಪಶು ಇಲಾಖೆಯವರು ನಮಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹಸು ಅನಾರೋಗ್ಯದಿಂದ ಬಳಲುತ್ತಿದ್ದು, ಬಂದು ನೋಡಿ ಎಂದು ಹೇಳಿದರೂ ಇದುವರೆಗೂ ಬಂದಿಲ್ಲ. ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕಾಟಾಚಾರಕ್ಕೆ ನೋಡುತ್ತಾರೆ.

–ಲಿಲ್ಲಿ ಪುಷ್ಪ ಮೇರಿ,ಜಕ್ಕಳಿ, ಕೊಳ್ಳೇಗಾಲ ತಾಲ್ಲೂಕು

ವೈದ್ಯರ ಕೊರತೆ

ತಾಲೂಕಿನಲ್ಲಿ ಪಶು ವೈದ್ಯರ ಕೊರತೆ ವಿಪರೀತವಾಗಿದೆ. ಚರ್ಮಗಂಟು ರೋಗಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ಎಲ್ಲ ರಾಸುಗಳಿಗೂ ಚುಚ್ಚುಮದ್ದು ನೀಡಲು ಪಶು ಇಲಾಖೆ ಗಮನ ಹರಿಸಬೇಕು

–ವೆಂಕಟೇಶ್,ಯಳಂದೂರು ತಾಲ್ಲೂಕು

ಚುಚ್ಚುಮದ್ದು ನೀಡಿ

ವಿವಿಧ ಗ್ರಾಮಗಳಲ್ಲಿ ಚರ್ಮಗಂಟು ರೋಗದ ಸೋಂಕು ಕಂಡುಬಂದಿದೆ.
ಕಾಲು ಬಾಯಿ ಜ್ವರದ ಬಾಧೆಯು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಂಜಾನೆ ಮತ್ತು ಸಂಜೆ ರಾಸುಗಳಿಗೆ ಚುಚ್ಚುಮದ್ದು ನೀಡುವ ಕೆಲಸಕ್ಕೆ ಪಶು ಇಲಾಖೆ ವೇಗ ನೀಡಬೇಕು.

–ರಂಗಸ್ವಾಮಿ, ಗಣಿಗನೂರು, ಯಳಂದೂರು ತಾಲ್ಲೂಕು

ಲಸಿಕೆ ನೀಡಿ

ಚರ್ಮ ಗಂಟು ಹತೋಟಿಗೆ ಶೀಘ್ರವಾಗಿ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಹಂಗಳ ಹೋಬಳಿಯಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿಲ್ಲ. ಕೆಲ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಅದು ಹೆಚ್ಚಾಗುವ ಮುನ್ನ ಲಸಿಕೆ ನೀಡಬೇಕು

–ವಾಸು, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

‘ಹಗಲಿರುಳು ದುಡಿಮೆ’

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಇತ್ತೀಚೆಗೆ ಸಚಿವರೊಂದಿಗೆ ನಡೆದ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪವಾಗಿದೆ. ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಕೊರತೆ ಇದ್ದರೂ, ಚರ್ಮಗಂಟು ರೋಗ ನಿಯಂತ್ರಣಕ್ಕೆ ಶಕ್ತಿ ಮೀರಿ, ಹಗಲಿರುಳು ಶ್ರಮಿಸಲಾಗುತ್ತಿದೆ. ರೋಗ ವರದಿಯಾದ ಪ್ರದೇಶದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಸಿಬ್ಬಂದಿ ರೈತರ ಮನೆಗಳಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರೊಂದಿಗೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನವನ್ನೂ ನಡೆಸಲಾಗುತ್ತಿದೆ’ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಶಿವಣ್ಣ ಹೇಳಿದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ., ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT