ಗುರುವಾರ , ಫೆಬ್ರವರಿ 25, 2021
30 °C
ಸರ್ಕಾರಿ ಪ್ರೌಢಶಾಲೆಯಲ್ಲಿ ಬೊಂಬೆ ತಯಾರಿ ಕಾರ್ಯಾಗಾರ

ಬೊಂಬೆಗಳ ಸಾನ್ನಿಧ್ಯದಲ್ಲಿ ಪಾಠ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಈ ಬೊಂಬೆಗಳು ಮಾತನಾಡುತ್ತವೆ. ಅತ್ತಿತ್ತ ಶರವೇಗದಲ್ಲಿ ಚಲಿಸುತ್ತವೆ. ರಾಜ–ರಾಣಿ ಬೊಂಬೆಗಳು ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಹೋಗುತ್ತವೆ. ಹಿನ್ನಲೆಯಲ್ಲಿ ರಾಜ ಪ್ರಮುಖರು, ಒಂಟೆಗಳ ಸವಾರರ ಸದ್ದಿನ, ಜೊತೆಗೆ ರಂಗಗೀತೆ, ಸಂಭಾಷಣೆಯೂ ಕೇಳುತ್ತದೆ.

–ಇದು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಇಂಡಿಯನ್ ಫೌಂಡೇಷನ್ ಆಫ್ ಆರ್ಟ್ಸ್ ಆಯೋಜಿಸಿದ್ದ ಮೂರು ದಿನಗಳ ಗೊಂಬೆ ತಯಾರಿ ಕಾರ್ಯಾಗಾರದಲ್ಲಿ ಕಂಡು ಬಂದಿದ್ದು.

ಕ್ಲಿಷ್ಟ ವಿಷಯಗಳನ್ನು ರಂಜನೀಯವಾಗಿ ಹಾಗೂ ಸೃಜನಶಿಲ ಕಲಿಕೆಯ ಮೂಲಕ ಮಕ್ಕಳಿಗೆ ತಿಳಿಹೇಳುವಂತೆ ಮಾಡಲು ವಿಶಿಷ್ಟವಾದ ಕಾರ್ಯಾಗಾರವನ್ನು ಸರ್ಕಾರಿ ಆಯೋಜಿಸಲಾಗಿತ್ತು. 

ಪಾಠವನ್ನು ಮಕ್ಕಳು ಸರಳವಾಗಿ ಅರ್ಥೈಸಿಕೊಳ್ಳಲು ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ತಮಗೆ ಬೇಕಾದ ಬಣ್ಣಬಣ್ಣದ ಬೊಂಬೆ ಕಟ್ಟುವ ಕಲೆಯನ್ನು ವಿದ್ಯಾರ್ಥಿಗಳೇ ಕಲಿಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಬೊಂಬೆಗಳ ಮೂಲಕ ಇತಿಹಾಸ, ವಿಜ್ಞಾನ, ಭಾಷೆ ಮತ್ತು ಪಠ್ಯೇತರ ವಿಷಯಗಳನ್ನು ಲವಲವಿಕೆಯಿಂದ ಕಲಿಯಬಹುದು ಎಂಬ ಲೆಕ್ಕಾಚಾರವೂ ಕಾರ್ಯಾಗಾರದ ಹಿಂದಿದೆ. 

‘ವಿದ್ಯಾರ್ಥಿಗಳೇ ಸೂತ್ರದ ಬೊಂಬೆ, ತೊಗಲು ಗೊಂಬೆ ತಯಾರಿಸುತ್ತಾರೆ. ‘ನೋ ಕಾಸ್ಟ್ ಮತ್ತು ಲೋ ಕಾಸ್ಟ್’ ತತ್ವದಡಿ ಅನುಪಯುಕ್ತ ಚೆಂಡು, ಬಟ್ಟೆ, ಮುರಿದ ಪೈಪ್, ದಾರ, ಕೈಗವಸು ಬಳಸಿ ಅಂದ ಚಂದದ ಬೊಂಬೆಗಳನ್ನು ಪಠ್ಯದ ಅಗತ್ಯಕ್ಕೆ ಅನುಗುಣವಾಗಿ ಮಾಡಿಕೊಳ್ಳುತ್ತಾರೆ. ಸಿದ್ಧಗೊಂಡ ಬೊಂಬೆಗಳನ್ನು ನಾಟಕ, ಪದ್ಯ, ರಂಗಗೀತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ’ ಎಂದು ರಂಗಶಿಕ್ಷಕ ಎಂ.ಎಲ್. ಮಧುಕರ್ ಮಳವಳ್ಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘9ನೇ ತರಗತಿಯ ಕನ್ನಡ ಪಠ್ಯದ ಪ್ರಜಾನಿಷ್ಠೆ ವಿಷಯ ಮತ್ತು ಸರ್ವಪಲ್ಲಿ ರಾಧಾಕೃಷ್ಣರ ಮಾದರಿ ಪಾಠಗಳಿಗೆ ಬೊಂಬೆಗಳನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ. ಬೊಂಬೆಗೆ ಅಲಂಕಾರ ಮಾಡುವುದನ್ನು ಕಲಿತೆವು. ಬೊಂಬೆಗೆ ಧರಿಸುವ ಬಣ್ಣಬಣ್ಣದ ಬಟ್ಟೆಗಳಿಗೆ ಹೊಲಿಗೆ ಹಾಕಿ ಕೈ ಬೆರಳಿಗೆ ತೂರಿಕೊಳ್ಳುವಂತೆ ತಯಾರಿ ಮಾಡಿಕೊಳ್ಳುತ್ತೇವೆ. ಬೆರಳಿಗೆ ತಗುಲಿಸಿಕೊಂಡು ಪ್ರದರ್ಶಿಸುವ ಬಗೆಯನ್ನು ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭ್ಯಾಸಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳಾದ ಕ್ಷಮಾ, ಸತೀಶ್, ಗೀತಾಂಜಲಿ ಮತ್ತು ಕಿರಣ್ ಹೇಳಿದರು. 

ಬೊಂಬೆಗಳಿಗೆ ವೇಷ ಭೂಷಣ ತೊಡಿಸಿ, ಸಂಗೀತ ಸಂಯೋಜಿಸಿ ಮಕ್ಕಳೇ ಪ್ರಸ್ತುತಪಡಿಸುತ್ತಾರೆ. 35 ಮಕ್ಕಳು ತಿಂಗಳಿಗೆ 3 ದಿನ ಬೊಂಬೆ ರಚನೆ ಕಾರ್ಯಗಾರದಲ್ಲಿ ಭಾಗವಹಿಸುತ್ತಾರೆ. ನಂತರ ತರಗತಿ ಬೋಧನೆಯ ಅಗತ್ಯ ಪರಿಗಣಿಸಿ ಶಿಕ್ಷಕರು ಅವುಗಳನ್ನು ಬಳಕೆ ಮಾಡುತ್ತಾರೆ’ ಎಂದು ಮುಖ್ಯ ಶಿಕ್ಷಕ ಎಂ.ಸಿ. ಮಹದೇವಸ್ವಾಮಿ ಹೇಳಿದರು. 

ಆಸಕ್ತ ಮಕ್ಕಳಿಗೆ ತರಬೇತಿ

‘ಭಾರತೀಯ ಸಂಸ್ಕೃತಿಯಲ್ಲಿ ಬೊಂಬೆಗೆ ಮಹತ್ವ ಇದೆ. ಬೊಂಬೆಗಳ ತಯಾರಿ ಮತ್ತು ಬಳಕೆ ಅಳಿವಿನಂಚಿನಲ್ಲಿ ಇದೆ. ಹಾಗಾಗಿ, ಬೊಂಬೆ ತಯಾರಿ ಕಲೆ ಉಳಿಯಬೇಕು, ಬೆಳೆಯಬೇಕು. ಹಾಗಾಗಿ ಶಾಲೆಗಳಿಗೆ ತೆರಳಿ ಆಸಕ್ತ ಮಕ್ಕಳಿಗೆ ಕಾರ್ಯಾಗಾರ ನಡೆಸಿ ತರಬೇತಿ ನೀಡುತ್ತೇವೆ.  ತೊಗಲು ಮತ್ತು ರಂಗಕ್ಕೆ ಬಳಸಲು ವೈವಿಧರ್ಯಮಯ ಬೊಂಬೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಾರೆ’ ಎಂದು ಬೆಂಗಳೂರಿನಿಂದ ಬಂದಿದ್ದ ತರಬೇತುದಾರ ಸಿದ್ದಪ್ಪ ಬಿರದಾರ್ ಮತ್ತು ಗಣೇಶ್ ಹೇಳಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.