ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ, ಕೂಲಿ, ವಲಸೆ ಕಾರ್ಮಿಕರಿಗೆ ಆಶ್ರಯ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಟ್ಟುನಿಟ್ಟಿನ ಸೂಚನೆ
Last Updated 29 ಮಾರ್ಚ್ 2020, 15:37 IST
ಅಕ್ಷರ ಗಾತ್ರ

ಚಾಮರಾಜನಗರ:ದಿಗ್ಬಂಧನದಿಂದಾಗಿ ಜಿಲ್ಲೆಯಲ್ಲೇ ಉಳಿದುಕೊಂಡಿರುವ ಹೊರಜಿಲ್ಲೆ, ಹೊರರಾಜ್ಯದ ಕೃಷಿ, ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಗೆ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಪರಾಮರ್ಶೆ ನಡೆಸಿದ ಅವರು, ‘ದಿಗ್ಬಂಧನದಿಂದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದು, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೃಷಿ ಇನ್ನಿತರೆ ಉದ್ಯಮ ವಲಯಗಳಲ್ಲಿ ಕೂಲಿಗಾಗಿ ಬಂದಿದ್ದ ಕಾರ್ಮಿಕರು ಜಿಲ್ಲೆಯಲ್ಲಿಯೇ ಉಳಿಯುವಂತಾಗಿದೆ. ವಲಸೆ ಕಾರ್ಮಿಕರಿಗೂ ನೆರವಾಗಬೇಕಿದೆ. ಈ ಎಲ್ಲ ಜನರಿಗೆ ಆಹಾರ, ಆಶ್ರಯ ನೀಡುವುದು ತುರ್ತು ಅಗತ್ಯ. ಇಂತಹ ಜನರು ಎಲ್ಲಿಯೇ ಕಂಡುಬಂದರೂ ತಕ್ಷಣ ಅವರ ನೆರವಿಗೆ ತಹಶೀಲ್ದಾರ್ ಸೇರಿದಂತೆ ಆಯಾ ಭಾಗದ ಅಧಿಕಾರಿಗಳು ಮುಂದಾಗಬೇಕು’ ಎಂದು ಹೇಳಿದ್ದಾರೆ.

‘ಇವರಿಗೆ ಆಯಾ ವ್ಯಾಪ್ತಿಯಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಬೇಕು. ಆರೋಗ್ಯ ತಪಾಸಣೆ ಮಾಡಿಸಬೇಕು. ನೀರು, ಶೌಚಾಲಯ ಇರುವ ಕಡೆ ಉಳಿಯಲು ವ್ಯವಸ್ಥೆ ಮಾಡಬೇಕು. ಆಹಾರ ವಿತರಣೆ ನಡೆಯಬೇಕು. ಅವರೇ ಆಹಾರ ತಯಾರಿಸಿಕೊಳ್ಳಲು ಸಾಧ್ಯವಿದ್ದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಬೇಕು’ ಎಂದು ಸೂಚಿಸಿದ್ದಾರೆ.

‘ಆಹಾರ ಸಾಮಗ್ರಿಗಳು, ತರಕಾರಿ, ಹಣ್ಣು, ಔಷಧ, ಹಾಲು ಮತ್ತಿತರ ಅವಶ್ಯಕ ವಸ್ತುಗಳ ಸಾಗಣೆಗೆ ಚೆಕ್‌ಪೋಸ್ಟ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಯಾವ ವಾಹನಗಳಿಗೂ ಚೆಕ್‌ಪೋಸ್ಟ್‌ನಲ್ಲಿ ಹಾದುಹೋಗಲು ಅವಕಾಶ ನೀಡುವಂತಿಲ್ಲ. ತುರ್ತು ಸಂದರ್ಭಗಳಲ್ಲಿಯೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕರ್ತವ್ಯ ನಿರ್ಲಕ್ಷ ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಎಪಿಎಂಸಿಗಳಲ್ಲಿ ವಹಿವಾಟು ನಡೆಯುವ ವೇಳೆ ಸುರಕ್ಷತಾ ಕ್ರಮಗಳನ್ನು ಖಾತರಿ ಪಡಿಸಬೇಕು. ಸಾಮಗ್ರಿ ಸಾಗಿಸುವ ವಾಹನಗಳಿಗೆ ಸ್ಯಾನಿಟೈಜೇಷನ್ ಮಾಡಬೇಕು. ವ್ಯಾಪಾರ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಚತೆಗೆ ತಿಳಿವಳಿಕೆ ನೀಡಬೇಕು. ಸಾಬೂನು, ಸ್ಯಾನಿಟೈಸರ್, ನೀರು ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ.

‘ಕೃಷಿ ಇಲಾಖೆಯು ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಇತರೆ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಯಾವುದಾದರೂ ಕೊರತೆ ಇದ್ದಲ್ಲಿ ಮೊದಲೇ ಪಟ್ಟಿ ಮಾಡಿಕೊಂಡು ತರಿಸಿಕೊಳ್ಳುವ ಸಿದ್ಧತೆ ಪ್ರಕ್ರಿಯೆ ಮಾಡಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಿರುವ ತರಕಾರಿ, ಹಣ್ಣು ಮಾರಾಟ ಸೇವೆ ವ್ಯಾಪಕವಾಗಿ ಎಲ್ಲೆಡೆ ಲಭ್ಯವಾಗಲು ಮತ್ತಷ್ಟು ಕ್ರಮಗಳಿಗೆ ಸಿದ್ಧರಾಗಬೇಕು’ ಎಂದು ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ತಾಲ್ಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಉಚಿತ ಸಹಾಯವಾಣಿ

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ನಾಗರಿಕರು ಕೊರೊನಾ ಕುರಿತು ಯಾವುದೇ ದೂರು, ಸಂದೇಹ, ಮನವಿ, ನೆರವು, ಸಮಸ್ಯೆ, ಮಾಹಿತಿ ನೀಡಬೇಕಿದ್ದಲ್ಲಿ ಅಥವಾ ಪಡೆಯಬೇಕಿದ್ದಲ್ಲಿ, ಇಲ್ಲವೇ ಯಾವುದೇ ವಿಷಯಗಳನ್ನು ಗಮನಕ್ಕೆ ತರಬೇಕಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗಿರುವ 24X7 ಅವಧಿಯ ಕಂಟ್ರೋಲ್ ರೂಂ ಕರೆ ಮಾಡಬಹುದು.

ಕಂಟ್ರೋಲ್ ರೂಂನ ಸಹಾಯವಾಣಿ ಸಂಖ್ಯೆ: 1077 ಹಾಗೂ 08226–223160.

ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಬರುವ ದೂರವಾಣಿ ಕರೆಗಳ ಮಾಹಿತಿ ಪಡೆದು ಸಂಬಂಧಪಟ್ಟವರಿಗೆ ತಿಳಿಸುವ ಕಾರ್ಯಗಳ ಮೇಲುಸ್ತುವಾರಿಗಾಗಿ ರೇಷ್ಮೆ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರಕುಮಾರ್ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ (ಮೊ. 9740787418) ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT