ಮಹದೇಶ್ವರಬೆಟ್ಟ: ಶ್ರಾವಣ ಮಾಸದ ಪ್ರಯುಕ್ತ ಮಹದೇಶ್ವರಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮೀಜಿ ನೇತೃತ್ವದಲ್ಲಿ ಮಹದೇಶ್ವರಸ್ವಾಮಿಗೆ 108 ಕುಂಬಾಭಿಷೇಕವನ್ನು ಭಕ್ತರು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರೆವೇರಿಸಿದರು.
ದೇವಾಲಯದಲ್ಲಿ ಮೊದಲಪೂಜೆ ಆರಂಭವಾಗಿದ್ದು, ಇದರ ಜೊತೆಗೆ ದೇವಾಲಯದ ರಾಜಗೋಪುರದ ಮುಂದೆ ಮಜ್ಜನ ಬಾವಿಗೆ ತೆರಳಿ ಗಂಗೆ ಪೂಜೆ ಸೇರಿ ವಿಶೇಷ ಪೂಜೆ ಕೈಗೊಂಡರು. ಬಳಿಕ ವಾದ್ಯಮೇಳ, ಛತ್ರಿ, ಚಾಮರಗಳೊಂದಿಗೆ 108 ಅರ್ಚಕರು ಕುಂಬ ಹೊತ್ತು ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಮೆರವಣಿಗೆ ಮಾಡಿ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದರು.
ಪೂಜೆ ನಡೆದ ನಂತರ ಕುಂಬಾಭಿಷೇಕ ನೆರವೇರಿಸಿದರು. ಶನಿವಾರದಿಂದ ಪ್ರತಿದಿನ ದೇವರಿಗೆ 12 ಕುಂಬಾಭಿಷೇಕ, ಲಕ್ಷಬಿಲ್ವಾರ್ಚನೆ ಪೂಜೆ ಸಲ್ಲಿಕೆಯಾಗಲಿದೆ. ಶ್ರಾವಣ ಮಾಸದ ಕೊನೆಯ ದಿನ ಮತ್ತೆ 108 ಕುಂಬಾಭಿಷೇಕ ಜರುಗಲಿದೆ.
ದೇವಾಲಯದಲ್ಲಿ ತ್ರಿಕಾಲ ಪೂಜೆ ಪ್ರಾರಂಭವಾಗಿದ್ದು, ಬೆಳಿಗ್ಗೆ 4ರಿಂದ ಬೆಳಿಗ್ಗೆ 6ರವರೆಗೆ ಮೊದಲ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ಆರತಿ, 10.30ಕ್ಕೆ ಎರಡನೇ ಪೂಜೆ, ಸಂಜೆ 6.30ರಿಂದ ರಾತ್ರಿ 8.30ರವರೆಗೆ ಮೂರನೇ ಪೂಜೆ ಜರುಗಿದವು. ಅಲ್ಲದೆ ರಾತ್ರಿ 7ಕ್ಕೆ ಚಿನ್ನದ ತೇರಿನ ಉತ್ಸವ ವಿಭೃಂಜಣೆಯಿಂದ ಜರುಗಿತು. ಮೆರವಣಿಗೆಯಲ್ಲಿ ಆನೆ(ಉಮಾಮಹೇಶ್ವರಿ), ನಂದಿಕಂಬ, ವೀರಗಾಸೆ ಕುಣಿತ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ನೆರೆದಿದ್ದ ಭಕ್ತರು ಉಘೇ ಮಾದಪ್ಪ, ಉಘೇ ಮಾಯ್ಕಾರ ಎಂಬ ಜಯಘೋಷ ಹಾಕಿದರು.
ಮಹದೇಶ್ವರಬೆಟ್ಟ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಬಂದೋಬಸ್ತ್ ಕಲ್ಪಿಸಿದರು. ಮಹದೇಶ್ವರಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.