ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಷ್ಟದ ಬಾಬತ್ತಿನಲ್ಲಿ ರೇಷ್ಮೆ ರೀಲರು!

ಮೋಡಕವಿದ ಹವಾಮಾನದಿಂದ ನೂಲು ಬಿಚ್ಚಾಣಿಕೆ ಸಮಸ್ಯೆ
Last Updated 8 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಯಳಂದೂರು:ತೇವಾಂಶದಲ್ಲಿ ಹೆಚ್ಚಳ, ಪ್ರತಿದಿನ ಕಾಡುವ ಮೋಡ ಮುಚ್ಚಿದ ವಾತಾವರಣದಿಂದ ರೇಷ್ಮೆಗೂಡು ಬಿಚ್ಚಾಣಿಕೆ ಸರಿಯಾಗಿ ಆಗುತ್ತಿಲ್ಲ. ಮೋಡ, ಶೀತದ ಹವೆಯಿಂದ ರೇಷ್ಮೆ ನೂಲಿನ ಗುಣಮಟ್ಟವೂ ಕುಸಿದು, ಬಹಳಷ್ಟು ರೇಷ್ಮೆ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿಲ್ಲ. ಇದರಿಂದಾಗಿ ರೀಲರ್‌ಗಳು ನಷ್ಟ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 15 ದಿನಗಳಿಂದ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ ಇದೆ. ಇದರಿಂದ ಗುಣಮಟ್ಟದ ಗೂಡು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಕೊಳ್ಳೇಗಾಲ ಮತ್ತು ಯಳಂದೂರು ಭಾಗಗಳಲ್ಲಿ 400 ರೇಷ್ಮೆ ರೀಲರುಗಳು ಇದ್ದು, 200 ಜನರಿಗಷ್ಟೇ ಗೂಡು ಸಿಗುತ್ತದೆ. ಸಾವಿರಾರು ಜನರು ನೂಲು ಬಿಚ್ಚಾಣಿಕೆ ನಂಬಿ ಬದುಕು ಕಟ್ಟಿಕೊಂಡಿದ್ದು, ಮನೆ ಮಂದಿ ಇದೇ ಉದ್ಯಮದಲ್ಲಿ ತೊಡಗಿದ್ದಾರೆ.

‘ಶ್ರಮಿಕರು ಕೂಲಿ ದರ ಏರಿಸಿದ್ದಾರೆ. ರೇಷ್ಮೆ ಬೆಳೆಗಾರರು ಉತ್ತಮ ಧಾರಣೆ ಪಡೆಯುತ್ತಾರೆ. ಇವರಿಗೆ ಆನ್‌ಲೈನ್ ವ್ಯವಸ್ಥೆ ಮೂಲಕ ಹಣ ಪಾವತಿಯಾಗುತ್ತಿದೆ. ಆದರೆ, ರೀಲರುಗಳಿಗೆ ಮಾತ್ರ ಈ ವ್ಯವಸ್ಥೆ ರೂಪಿಸಿಲ್ಲ. ದಲ್ಲಾಳಿಗಳ ಹಾವಳಿ ಮಿತಿ ಮೀರಿದ್ದು, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ರೀಲರುಗಳು ತತ್ತರಿಸಿದ್ದಾರೆ’ ಎಂದು ಹೊನ್ನೂರಿನ ನೂಲು ಬಿಚ್ಚಾಣಿಕೆದಾರರಾದ ಚಂದ್ರಮ್ಮ ಹೇಳಿದರು.

ರೇಷ್ಮೆ ಮಂಡಳಿ ಸ್ಥಾಪಿಸಿ: ‘ಗ್ರಾಮೀಣ ಪ್ರದೇಶದಲ್ಲಿ ರೇಷ್ಮೆ ಕೆಲಸಗಾರರು ಸಂಘಗಳಲ್ಲಿ ಸಾಲ ಮಾಡಿ ದಿನ ನೂಕುತ್ತಿದ್ದಾರೆ. ರೇಷ್ಮೆ ಉತ್ಪಾದನೆ ಸ್ಥಗಿತಗೊಂಡರೆ ಬಹಳಷ್ಟು ಶ್ರಮಿಕರು ಮತ್ತೆ ಅತಂತ್ರರಾಗಬೇಕಿದೆ. ಆದರೆ, ನೂಲು ಗುಣಮಟ್ಟ ಇಲ್ಲದಿದ್ದರೆ ಮರಾಟ ಮಾಡಲು ಕಷ್ಟವಾಗುತ್ತದೆ. ನೂಲಿಗೆ ಉತ್ತಮ ಧಾರಣೆ ಸಿಗದಿದ್ದರೆ ಗೂಡು ಖರೀದಿಗೆ ಬಂಡವಾಳ ಇರಲ್ಲ. ಸರ್ಕಾರ ನೂಲು ಬಿಚ್ಚಾಣಿಕೆದಾರರಿಗೆ ದುಡಿಮೆ ಬಂಡವಾಳ ನೀಡುವ ಭರವಸೆ ನೀಡಿತ್ತು.

ಇದುವರೆಗೂ ಅದರ ಪ್ರಸ್ತಾಪ ಮಾಡಿಲ್ಲ. ರೀಲರುಗಳಿಗೂ ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಸಬೇಕು. ನೇರವಾಗಿ ಹಣ ಅವರ ಖಾತೆಗಳಿಗೆ ಜಮೆ ಆಗುವಂತೆ ಕ್ರಮವಹಿಸಬೇಕು. ಇಲ್ಲದಿದ್ದರೆ ಪ್ರತಿ ವಾರ ಒಂದೊಂದು ಘಟಕ ಸ್ಥಗಿತವಾಗುತ್ತದೆ. ಇದರಿಂದ ನಾವು ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತೇವೆ. ಹಿಂದೆ ರೂಪಿಸಿದ್ದ ರೇಷ್ಮೆ ಮಂಡಳಿ ಸ್ಥಾಪಿಸಿ ರೀಲರ್‌ಗಳಿಗೆ ನೆರವು ಕಲ್ಪಿಸಬೇಕು’ ಎಂದು ಬಿಚ್ಚಾಣಿಕೆದಾರ ಮಾಂಬಳ್ಳಿ ಶಕೀಲ್ ಹೇಳಿದರು.

ರೇಷ್ಮೆ ಬೆಳೆಗಾರರ ಸಂಖ್ಯೆ ಕುಸಿತ

ರೇಷ್ಮೆ ಕೆ.ಜಿ.ಗೆ ₹600 ರಿಂದ ₹700 ಧಾರಣೆ ಇದೆ. ಆದರೆ, ಹವಾಮಾನ ವೈಪರೀತ್ಯದಿಂದ ರೇಷ್ಮೆ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ರೇಷ್ಮೆ ಗೂಡು ಬೇಕಾಗುತ್ತದೆ. ಇದರಿಂದ ರೀಲರುಗಳಿಗೆ ನಷ್ಟ. ಗಡಿ ಜಿಲ್ಲೆಗಳ ರೇಷ್ಮೆ ಬೆಳೆಗಾರರು ಉತ್ತಮ ಲಾಭ ಗಳಿಸುತ್ತಾರೆ. ಆದರೆ, ನಮ್ಮ ಪ್ರದೇಶದಲ್ಲಿ ರೇಷ್ಮೆ ಗೂಡು ಉತ್ಪಾದಿಸುವವರ ಸಂಖ್ಯೆ ಕುಸಿಯುತ್ತಿದೆ. ಯುವ ರೇಷ್ಮೆ ಬೆಳೆಗಾರರನ್ನು ಸೃಷ್ಟಿಸಬೇಕಿದೆ.

ಕೆಲವೊಮ್ಮೆ ರೈತರಿಗೆ ಉತ್ತಮ ಬೆಲೆ ಸಿಗದಿದ್ದರೆ, ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಮಾರುಕಟ್ಟೆ ನಂಬಿದ ಬಿಚ್ಚಾಣಿಕೆದಾರರು ಮತ್ತು ಸರ್ಕಾರಕ್ಕೆ ತುಂಬಾ ನಷ್ಟವಾಗುತ್ತದೆ. ಆದರೆ, ನಾವು ನಿರಂತರವಾಗಿ ಗೂಡು ಖರೀದಿಸುತ್ತೇವೆ. ಸರ್ಕಾರ ನಮಗೆ ದುಡಿಮೆ ಬಂಡವಾಳ ಪೂರೈಸಬೇಕು. ಹವಾಮಾನ ವ್ಯತ್ಯಾಸದಿಂದ ನಷ್ಟಕ್ಕೆ ಒಳಗಾದಾಗ ನೆರವಿಗೆ ಬರಬೇಕು’ ಎಂದು ಹೊನ್ನೂರು ಉದ್ಯಮಿ ರಂಗಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT