ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಸೋಲಿಗರ ಈ ಊರಿಗೆ ಕಾಲಿಟ್ಟಿಲ್ಲ ಕೊರೊನಾ ವೈರಸ್‌

ಎರೆಕಟ್ಟೆ, ಕರಳಕಟ್ಟೆ, ಮೊಳಗನ ಕಟ್ಟೆ ಗ್ರಾಮಗಳಲ್ಲಿ ಇಲ್ಲ ಸೋಂಕಿನ ಭೀತಿ
Last Updated 3 ಜೂನ್ 2021, 0:29 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ 2ನೇ ಅಲೆ ಅಬ್ಬರಿಸುತ್ತಿದೆ. ಆದರೆ, ಸೋಲಿಗರು ಇರುವ ಈ ಮೂರು ಗ್ರಾಮಗಳಲ್ಲಿ ಕೊರೊನಾ ವೈರಸ್‌ನ ಸುಳಿವಿಲ್ಲ.

ಎರೆಕಟ್ಟೆ ಗ್ರಾಮ, ಕರಳಕಟ್ಟೆ ಗ್ರಾಮ ಹಾಗೂ ಮೊಳಗನ ಕಟ್ಟೆ ಗ್ರಾಮಗಳು ಕೋವಿಡ್‌ನಿಂದ ಮುಕ್ತವಾಗಿವೆ.ಆ ಮೂಲಕ ಕೋವಿಡ್‌ ನಿಯಂತ್ರಣದ ವಿಚಾರದಲ್ಲಿಈ ಗ್ರಾಮಗಳು ತಾಲ್ಲೂಕಿಗೇ ಮಾದರಿಯಾಗಿವೆ.

ಇಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದವರ ಜೀವನಶೈಲಿ ಹಾಗೂ ಗ್ರಾಮ ಪಂಚಾಯಿತಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಇದಕ್ಕೆ ಪ್ರಮುಖ ಕಾರಣ.

ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮಗಳಲ್ಲಿ ಗಿರಿಜನರು ಸೋಂಕಿನ ಭಯವಿಲ್ಲದೇ ನೆಮ್ಮದಿಯಿಂದ ಇದ್ದಾರೆ. ಕರಳಕಟ್ಟೆ ಗ್ರಾಮದಲ್ಲಿ 71 ಕುಟುಂಬಗಳು, ಎರೆಕಟ್ಟೆ ಗ್ರಾಮದಲ್ಲಿ 47 ಕುಟುಂಬಗಳು, ಮೊಳಗನ ಕಟ್ಟೆ ಗ್ರಾಮದಲ್ಲಿ 49 ಕುಟುಂಬಗಳು ಇವೆ.

ಈ ಕುಟುಂಬಗಳು ಜೀವನೋಪಾಯಕ್ಕೆ ಪಾರಂಪರಿಕವಾಗಿ ಬಂದ ಪಶುಪಾಲನೆ, ಜೇನು ಸಾಕಾಣೆ, ಹಾಗೂ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿವೆ. ಹಾಗಾಗಿ ದುಡಿಯಲು ಹೊರಗಡೆ ಹೋಗುವುದಿಲ್ಲ. ಇದು ಸೋಂಕಿನಿಂದ ಇಲ್ಲಿನ ಜನರನ್ನು ದೂರ ಇಟ್ಟಿದೆ.

‘ಅವಶ್ಯಕತೆ ಇದ್ದಾಗ ಮಾತ್ರ ನಗರ ಪ್ರದೇಶಕ್ಕೆ ಬಂದು ದಿನಸಿ ಸೇರಿದಂತೆ ಇತರ ವಸ್ತುಗಳನ್ನು ಖರೀದಿ ಮಾಡಿ ಹೋಗುತ್ತೇವೆ’ ಎಂದು ಸೋಮಣ್ಣ ಹೇಳುತ್ತಾರೆ.

ಅನ್ಯರಿಗೆ ಪ್ರವೇಶವಿಲ್ಲ: ಕೋವಿಡ್‌ ಎರಡನೇ ಅಲೆ ಕಾರಣಕ್ಕೆ ಗ್ರಾಮದ ಮುಖ್ಯ ರಸ್ತೆಗಳನ್ನು ಗ್ರಾಮಸ್ಥರೇ ಬಂದ್ ಮಾಡಿದ್ದಾರೆ. ಗ್ರಾಮಸ್ಥರನ್ನು ಬಿಟ್ಟು ಇನ್ಯಾರಾದರೂ ಹೊಸಬರು ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ ಅವರ ಮೇಲೆ ನಿಗಾ ಇಡುತ್ತಾರೆ. ಒಂದು ವೇಳೆ ಯಾರಾದರೂ ಹೊಸಬರು ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ ಅವರನ್ನು ವಿಚಾರಣೆ ಮಾಡಿ ವಾಪಸ್ ಕಳುಹಿಸುತ್ತಾರೆ. ತಮ್ಮ ಜಮೀನುಗಳಲ್ಲಿ ಬೆಳೆದ ಸೊಪ್ಪು, ತರಕಾರಿಯನ್ನೇ ಇವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅವರ ಆಹಾರ ಪದ್ಧತಿ ಹಾಗೂ ಶ್ರಮಿಕ ಜೀವನದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಬಾಧೆಯಿಂದ ಎಲ್ಲೆಡೆ ಜನರು ತತ್ತರಿಸಿ ಹೋಗಿದ್ದರೂ ಸೋಂಕಿನ ಭಯ ಭೀತಿಯಾಗಲಿ ಇದುವರೆಗೆ ಈ ಗ್ರಾಮಗಳಲ್ಲಿ ಕಂಡು ಬಂದಿಲ್ಲ.

ಗ್ರಾಮ ಪಂಚಾಯಿತಿ ಶ್ರಮ
‘ಮುಂಜಾಗ್ರತಾ ಕ್ರಮವಾಗಿ ಪ್ರತಿ ಗ್ರಾಮಗಳಲ್ಲೂ ಸ್ಯಾನಿಟೈಸ್ ಮಾಡಿದ್ದಾರೆ. ರಸ್ತೆ, ಚರಂಡಿ ಸ್ವಚ್ಛತೆಯ ಜೊತೆಗೆ ಬ್ಲೀಚಿಂಗ್ ಪೌಡರ್, ಫಿನಾಯಿಲ್ ಸಿಂಪಡಣೆ ಮಾಡಲಾಗಿದೆ. ಅಲ್ಲಿಯ ಜನರಿಗೆ ಸ್ವಯಂ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲಾಗಿದೆ. ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಕೂಲಿ ಕೆಲಸವನ್ನು ಒದಗಿಸುವ ಮೂಲಕ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲಾಗಿದೆ. ಮೊದಲಿನಿಂದಲೂ ಹೊರಗಿನವರ ಸಂಪರ್ಕವಿಲ್ಲ ಯಾರೊಂದಿಗೂ ಬೆರೆಯುವುದು ಇಲ್ಲ. ಹೆಚ್ಚು ವಾಹನಗಳ ಓಡಾಟವಿಲ್ಲ. ಹೀಗಾಗಿ ಜನರಿಗೆ ಯಾವುದೇ ಸೋಂಕಿನ ಭಯಭೀತಿ ಇಲ್ಲ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*
ಈ ಗ್ರಾಮಗಳ ಜನರು ಕೋವಿಡ್ ಬಗ್ಗೆ ಎಚ್ಚರ ವಹಿಸಿದ್ದಾರೆ. ಆ ಕಾರಣದಿಂದ ಇವು ಕೋವಿಡ್ ಮುಕ್ತಗ್ರಾಮವಾಗಿವೆ.
-ಲಕ್ಷ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ

*
ಗ್ರಾಮದವರು ಯಾರೂ ಹೊರಗೆ ಹೋಗದಂತೆ ಸೂಚನೆ ನೀಡಿದ್ದೇವೆ. ಆ ಕಾರಣದಿಂದ ಕೋವಿಡ್‌ ನಮ್ಮ ಹಳ್ಳಿಗೆ ಬಂದಿಲ್ಲ
-ರಂಗಮ್ಮ, ಗ್ರಾಮಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT