ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಮುಂಗಾರು ಪೂರ್ವ ಮಳೆ ಕೊರತೆ: ಬಿತ್ತನೆ ಕುಸಿತ

Published 1 ಜುಲೈ 2024, 7:37 IST
Last Updated 1 ಜುಲೈ 2024, 7:37 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಕೊರತೆಯಾದ ಪರಿಣಾಮ ಬಿತ್ತನೆ ಪ್ರಮಾಣ ಇಳಿಮುಖವಾಗಿದೆ. ಬಿತ್ತನೆ ಕಾರ್ಯ ಆರಂಭವಾಗಿ 2 ತಿಂಗಳು ಕಳೆಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣದ ಬಿತ್ತನೆ ನಡೆದಿಲ್ಲ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ 1,09,369 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ ಇದುವರೆಗೂ 38,679 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇನ್ನೂ ಬಿತ್ತನೆಗೆ ಬಾಕಿ ಇರುವ ಪ್ರದೇಶ ಬರೋಬ್ಬರಿ 70,690 ಹೆಕ್ಟೇರ್‌.

ಬಿತ್ತನೆ ಹಿನ್ನಡೆಗೆ ಕಾರಣ: ಜಿಲ್ಲೆಯಲ್ಲಿ ನೀರಾವರಿ ಆಶ್ರಿತ ಕೃಷಿಗಿಂತ ಮಳೆ ಅವಲಂಬಿತ ಕೃಷಿ ಪ್ರಮಾಣ ಹೆಚ್ಚು. ಸಾಮಾನ್ಯವಾಗಿ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಬೀಳುವ ಮಳೆಗೆ ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುತ್ತವೆ. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಕ್ಷೇತ್ರ ತೀವ್ರ ಕುಸಿತವಾಗಿದೆ.

ಮಾರ್ಚ್‌ನಲ್ಲಿ ವಾಡಿಕೆಯಂತೆ 15.3 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, ಬಿದ್ದಿದ್ದು ಕೇವಲ 0.1 ಮಿ.ಮೀ ಮಾತ್ರ. ಅಂದರೆ, ಶೇ -99.3ರಷ್ಟು ಮಳೆ ಕೊರತೆ. ಏಪ್ರಿಲ್‌ನಲ್ಲಿ 63.8 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 3.1 ಮಿ.ಮೀ ಮಳೆ ಮಾತ್ರ ಸುರಿದಿದ್ದು ಶೇ -95.1ರಷ್ಟು ಮಳೆ ಕೊರತೆಯಾಗಿದೆ.

ವರುಣನ ಅವಕೃಪೆಯಿಂದಾಗಿ ಹತ್ತಿ, ಸೂರ್ಯಕಾಂತಿ ಸೇರಿದಂತೆ ಮುಂಗಾರು ಪೂರ್ವ ಅವಧಿಯ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗದಿರುವುದು ಕೃಷಿ ಚಟುವಟಿಕೆಗಳು ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಸುಮಾರು 8 ರಿಂದ 10 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಕ್ಷೇತ್ರ ಕುಸಿತವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಗುಂಡ್ಲುಪೇಟೆ ತಾಲ್ಲೂಕು ಒಂದರಲ್ಲೇ ಪ್ರತಿವರ್ಷ 6 ಸಾವಿರ ಹೆಕ್ಟೇರ್‌ನಷ್ಟು ಹತ್ತಿ ಬಿತ್ತನೆಯಾಗುತ್ತಿತ್ತು. ಮಳೆ ಕೊರತೆಯಿಂದ ಈ ವರ್ಷ ಕೇವಲ 2,700 ಹೆಕ್ಟೇರ್‌ನಷ್ಟು ಹತ್ತಿ ಬಿತ್ತನೆ ಮಾಡಲಾಗಿದೆ. ಮುಂಗಾರು ಪೂರ್ವ ಅವಧಿಯ ಬಿತ್ತನೆ ಕಾಲವೂ ಮುಗಿದಿರುವುದರಿಂದ ರೈತರು ಅನಿವಾರ್ಯವಾಗಿ ಪರ್ಯಾಯ ಬೆಳೆ ಬೆಳೆಯುವತ್ತ ಚಿತ್ತ ಹರಿಸಬೇಕಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಚಾಮರಾಜ ನಗರ ತಾಲ್ಲೂಕಿನಲ್ಲಿ ಶೇ 28.18, ಗುಂಡ್ಲುಪೇಟೆಯಲ್ಲಿ ಶೇ 79.77, ಕೊಳ್ಳೇಗಾಲದಲ್ಲಿ ಶೇ 12.81, ಹನೂರಿನಲ್ಲಿ ಶೇ 7.70, ಯಳಂದೂರಿನಲ್ಲಿ ಶೇ 15.21ರಷ್ಟು ಬಿತ್ತನೆ ನಡೆದಿದೆ.

ಗುಂಡ್ಲುಪೇಟೆ ವರದಿ:

ಜಿಲ್ಲೆಯಲ್ಲೇ ಅತಿ ಹೆಚ್ಚು ಬಿತ್ತನೆ ನಡೆದಿರುವುದು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ. ಜುಲೈ ಅಂತ್ಯದವರೆಗೆ ಇಲ್ಲಿ ರೈತರು ಬಿತ್ತನೆ ಮಾಡುವುದರಿಂದ ಶೇ 100ರಷ್ಟು ಗುರಿ ತಲುಪುವ ವಿಶ್ವಾಸವಿದೆ. ತಾಲ್ಲೂಕಿನ ಹತ್ತಿ ಬದಲಾಗಿ ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ, ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ.

ಈ ವರ್ಷ ಬಿತ್ತನೆ ಬೀಜ ಕೊರತೆ ಕಾಡಿಲ್ಲ. ಮಳೆಗಾಲದ ಪೂರ್ವದಲ್ಲೇ ಸರ್ಕಾರಕ್ಕೆ ಮನವಿ ಮಾಡಿದ್ದರಿಂದ ಸಮಸ್ಯೆ ಇಲ್ಲ. ತಾಲ್ಲೂಕಿನಲ್ಲಿ ರಾಗಿ ಮತ್ತು ಜೋಳದ ಬಿತ್ತನೆ ನಡೆಯುತ್ತಿದ್ದು ಇಲಾಖೆಯ ಬಳಿ ಅಗತ್ಯ ಬಿತ್ತನೆ ಬೀಜ ದಾಸ್ತಾನು ಇದೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್.

ಮಳೆ ನಿರೀಕ್ಷೆ: ಯಳಂದೂರು ತಾಲ್ಲೂಕಿನಲ್ಲಿ ಮಳೆ ಕೊರತೆ ತೀವ್ರವಾಗಿದ್ದು ಬಿತ್ತನೆ ತಡವಾಗಿದೆ. ಮುಸುಕಿನ ಜೋಳ, ತೊಗರಿ, ರಾಗಿ ನಾಟಿಗೆ ತಾಕು ಸಿದ್ಧಪಡಿಸುವ ಕೆಲಸ ನಡೆಯುತ್ತಿವೆ. ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ, ಮಳೆ ಕೊರತೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ತಂದಿದೆ. ಈ ವಾರ ಮಳೆ ಸುರಿಯುವ ನಿರೀಕ್ಷೆ ಇರುವುದರಿಂದ ಭೂಮಿ ಹಸನುಗೊಳಿಸುವ ಕೆಲಸ ಭರದಿಂದ ಸಾಗಿದೆ.

ಜೂನ್ ಆರಂಭದಿಂದಲೇ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು ಪ್ರಾತ್ಯಕ್ಷಿಕೆ ಹಂತದಲ್ಲಿ ರಾಗಿ ಕೆಜಿಗೆ ₹ 1, ತೊಗರಿ ₹ 39 ಹಾಗೂ ಅಲಸಂದೆ ₹ 39 ದರದಲ್ಲಿ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಮಾಹಿತಿ ನೀಡಿದರು.

ಕೊಳ್ಳೇಗಾಲ ವರದಿ:

ಉತ್ತಮ ಮಳೆಯಾಗುತ್ತಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಆರಂಭದಲ್ಲಿ ನಿರುತ್ಸಾಹ ತೋರಿದ್ದ ರೈತರು ಉತ್ಸಾಹದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ನೆಲಗಡಲೆ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡುತ್ತಿರುವುದು ಕಂಡುಬಂದಿದೆ.

ನೀರಾವರಿ ಸೌಲಭ್ಯ ಇದ್ದವರು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆದರೆ, ಅರೆ ನೀರಾವರಿ ಸೌಲಭ್ಯ ಹೊಂದಿರುವವರು ಮುಸುಕಿನ ಜೋಳ, ನೆಲಗಡಲೆ ಸಹಿತ ಹಲವು ಬೆಳೆ ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಜೂನ್, ಜುಲೈನಲ್ಲಿ ಬಿತ್ತನೆ ಆರಂಭವಾಗುತ್ತದೆ. ಬಿತ್ತನೆ ಬೀಜ ಕೊರತೆ ಈ ಬಾರಿ ಕಂಡುಬಂದಿಲ್ಲ. ಕೃಷಿ ಕೇಂದ್ರ ಸಹಿತ ಖಾಸಗಿ ಮಳಿಗೆಗಳಲ್ಲೂ ಬಿತ್ತನೆ ಬೀಜ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ ಎನ್ನುತ್ತಾರೆ ರೈತ ಸ್ಟೀವನ್.

ಪೂರಕ ಮಾಹಿತಿ: ಅವಿನ್ ಪ್ರಕಾಶ್‌, ನಾ.ಮಂಜುನಾಥ ಸ್ವಾಮಿ, ಬಸವರಾಜ್‌, ಮಹದೇವ್‌, ಮಲ್ಲೇಶ್‌

ಯಳಂದೂರಿನಲ್ಲಿ ರೈತರೊಬ್ಬರು ಉಳುಮೆಯಲ್ಲಿ ತೊಡಗಿರುವುದು
ಯಳಂದೂರಿನಲ್ಲಿ ರೈತರೊಬ್ಬರು ಉಳುಮೆಯಲ್ಲಿ ತೊಡಗಿರುವುದು

ಬಿತ್ತನೆ ಬೀಜ ಮತ್ತು ಗೊಬ್ಬರಗಳಿಗೆ ತೊಂದರೆ ಇಲ್ಲ. ಡಿಎಪಿ ಗೊಬ್ಬರ ಕೊಂಚಮಟ್ಟಿಗೆ ಸಮಸ್ಯೆ ಆಗಿದೆ.

-ಮಾಧು ಹಂಗಳ ರೈತ ಮುಖಂಡ

ಮಳೆ ಕೈಕೊಟ್ಟರೆ ಕಾಲುವೆಯಲ್ಲಿ ನೀರು ಹರಿಸುವ ಬಗ್ಗೆ ಅಧಿಕಾರಿಗಳು ರೈತರಿಗೆ ಗ್ಯಾರಂಟಿ ನೀಡಿದರೆ ಬಿತ್ತನೆಗೆ ಸಿದ್ಧತೆ ನಡೆಸಬಹದು.

–ಅಮೃತೇಶ್ವರ ರೈತ

ಈ ವರ್ಷ ಉತ್ತಮ ಮಳೆ ಸುರಿದಿಲ್ಲ. ಆಗಾಗ ಬಂದರೂ ಭೂಮಿ ತಂಪುಗೂಡುವಷ್ಟು ಸುರಿದಿಲ್ಲ. ಹಾಗಾಗಿ ಹಿಡುವಳಿ ಸಿದ್ಧತೆ ನಿಧಾನವಾಗಿದೆ. ಈ ವಾರ ಮಳೆ ಬರುವ ನಿರೀಕ್ಷೆ ಇದ್ದು ಭೂಮಿ ಹಸನುಗೊಳಿಸುವ ಕೆಲಸ ನಡೆಯುತ್ತಿದೆ.

–ಬಸವಣ್ಣ ರೈತ

ರಾಗಿ ಮುಸುಕಿನ ಜೋಳ ಸೆಣಬು ದಾಸ್ತಾನು ಇದೆ. ಚಂಬೆ ಮುಗಿದಿದ್ದು ಇಲಾಖೆಗೆ ಇಂಡೆಂಟ್ ಹಾಕಲಾಗಿದ್ದು ಜುಲೈ 1 ರಿಂದ ಬಿತ್ತನೆ ಭತ್ತ ಪೂರೈಕೆಯಾಗಲಿದೆ.

–ಪಾಪಣ್ಣ ಕೃಷಿ ಅಧಿಕಾರಿ ಸಂತೇಮರಹಳ್ಳಿ

ಮುಂಗಾರು ಪೂರ್ವ ಮಳೆ ಕೊರತೆಯಿಂದ ಬಿತ್ತನೆ ಸ್ವಲ್ಪ ಕಡಿಮೆಯಾಗಿದೆ. ಉತ್ತಮ ಮಳೆ ನಿರೀಕ್ಷೆ ಇರುವುದರಿಂದ ಶೇ 90ರಷ್ಟು ಹೆಕ್ಟೇರ್ ಬಿತ್ತನೆ ನಿರೀಕ್ಷೆ ಇದೆ. ಬಿತ್ತನೆ ಬೀಜ ರಸಗೊಬ್ಬರ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ. ಬಿತ್ತನೆಗೆ ಇನ್ನೂ ಸಮಯ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ.
– ಎಸ್‌.ಎಸ್‌.ಅಬಿದ್‌ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT