ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಿಗ ಮಹಿಳೆಯರ ಸಬಲೀಕರಣ: ರೈತ ಉತ್ಪಾದಕ ಸಂಸ್ಥೆ ಅಗತ್ಯ’

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಜೀವನೋಪಾಯ ತರಬೇತಿ
Last Updated 8 ಮಾರ್ಚ್ 2021, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ‘ಎಲ್ಲ ಕೌಶಲಗಳನ್ನು ನಿರ್ವಹಿಸಲು ಸಾಮರ್ಥ್ಯ ಹೊಂದಿರುವ ಆದಿವಾಸಿ ಮಹಿಳೆಯರಿಗೆ ತರಬೇತಿ ನೀಡುವುದರ ಜೊತೆಗೆ ಅವರಿಗಾಗಿಯೇ ರೈತ ಉತ್ಪಾದಕ ಸಂಘ ರಚಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ನೆರವಾಗಬೇಕಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೋಮವಾರ ಹೇಳಿದರು.

ಸಮೀಪದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉನ್ನತ ಭಾರತ ಅಭಿಯಾನ ಯೋಜನಾ ಕೇಂದ್ರ, ಜಿಲ್ಲಾಡಳಿತ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಹನೂರಿನ ಸೋಲಿಗ ಅಭಿವೃದ್ದಿ ಸಂಘದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜೀವನೋಪಾಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಫಿ ಹಾಗೂ ಇತರ ಬೆಳೆಗಳನ್ನು ಬೆಳೆಯುತ್ತಿರುವ ಸೋಲಿಗರು, ಉತ್ಪನ್ನಗಳ ಮೌಲ್ಯವರ್ಧನೆ ಚಟುವಟಿಕೆಗಳಿಗೂ ತೊಡಗಿಕೊಂಡರೆ ಸುಸ್ಥಿರ ಅಭಿವೃದ್ಧಿ ಸಾಧ್ಯ. ಹೀಗಾಗಿ ಆದಿವಾಸಿ ಮಹಿಳೆಯರನ್ನೇ ಒಳಗೊಂಡ ರೈತ ಉತ್ಪಾದಕ ಸಂಘ ರಚನೆಯಾದರೆ ಇನ್ನಷ್ಟು ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ. ಆದಿವಾಸಿ ಹೆಣ್ಣು ಮಕ್ಕಳು ಕರಕುಶಲ ಮತ್ತು ಕಸೂತಿ ಕಲೆಗಳಲ್ಲಿ ಪರಿಣತಿ ಹೊಂದುವ ಸಾಮರ್ಥ್ಯ ಹೊಂದಿದ್ದಾರೆ. ಆಧುನಿಕ ಕಸೂತಿ ಕೌಶಲ ತರಬೇತಿ ನೀಡಿ ಅವರಿಗೆ ಉದ್ಯಮದ ಸಂಪರ್ಕ ಕಲ್ಪಿಸಿದರೆ ಆರ್ಥಿಕವಾಗಿ ಸಬಲರನ್ನಾಗಿಸಬಹುದು. ಈಗಾಗಲೇ ಕಸೂತಿ ಕೌಶಲ ಸಂಬಂಧ ಯೋಜನಾ ವರದಿ ಲಭ್ಯವಿದ್ದು, ಇದರ ಅನುಷ್ಠಾನ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅವರು ಮಾತನಾಡಿ, ‘ಒಂದು ಕುಟುಂಬ, ಸಮುದಾಯ ಮತ್ತು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರದೇ ಪ್ರತಿ ದಿನ ಆಚರಿಸುವಂತಾಗಬೇಕು. ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಪುರುಷರಷ್ಟೇ ಮಹಿಳೆಯರು ಕೂಡ ಶ್ರಮಿಸಿದ್ದಾರೆ. ಮಹಿಳೆಯರ ಸ್ಥಿತಿಗತಿ ಹಾಗೂ ಮಾನವ ಅಭಿವೃದ್ಧಿ ವರದಿಯ ಅಂಶಗಳನ್ನು ಗಮನಿಸಿದಾಗ ಪ್ರತಿ ವಿಷಯಕ್ಕೂ ಮಹಿಳೆ ತನಗೆ ಬೇಕಾದ್ದನ್ನು ಪಡೆಯಲು ಹೋರಾಟವನ್ನೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದರು.

ಸಿಂಡಿಕೇಟ್ ಸದಸ್ಯರಾದ ಚೈತ್ರ ನಾರಾಯಣ್ ಅವರು ಮಾತನಾಡಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಹೊನ್ನೇಗೌಡ, ಕೃಷಿ ಕಾಲೇಜಿನ ವಿಶೇಷಾಧಿಕಾರಿ ಡಾ.ರಾಜಣ್ಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಚಂದ್ರಕಲಾ ಹಣಗಿ, ಹನೂರು ಸೋಲಿಗ ಅಭಿವೃದ್ದಿ ಸಂಘದ ಅಧ್ಯಕ್ಷೆ ಮುನಿಮಾದಮ್ಮ, ಉನ್ನತ ಭಾರತ ಅಭಿಯಾನ ಯೋಜನಾ ಕೇಂದ್ರದ ಸಂಯೋಜಕಿ ಡಾ.ಎಚ್.ಪಿ.ಜ್ಯೋತಿ ಇದ್ದರು.

ವಿ.ವಿಯಿಂದ ಆರು ಗ್ರಾಮಗಳ ದತ್ತು

‘ವಿಶ್ವವಿದ್ಯಾನಿಲಯವು ಕೇಂದ್ರ ಸರ್ಕಾರದ ಉನ್ನತ ಭಾರತ ಅಭಿಯಾನ ಯೋಜನೆ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆಯಲ್ಲಿ ಜಿಲ್ಲೆಯ ಆರು ಗ್ರಾಮಗಳನ್ನು ದತ್ತು ತೆಗೆದುಕೊಂಡಿದೆ. ಈ ಗ್ರಾಮಗಳಲ್ಲಿ ಸೋಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಬುಡಕಟ್ಟು ಜನರ ಅಭಿವೃದ್ದಿಗಾಗಿ ಎರಡು ವರ್ಷಗಳಿಂದ ವಿವಿಯ ಉನ್ನತ ಭಾರತ ಅಭಿಯಾನ ಕೇಂದ್ರದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಮೀಕ್ಷೆ ಕೈಗೊಂಡಿದ್ದು, ಗ್ರಾಮಾಭಿವೃದ್ದಿ ಯೋಜನೆಗಳನ್ನು ತಯಾರಿಸುತ್ತಿದ್ದಾರೆ’ ಎಂದು ಹೇಮಂತ್‌ಕುಮಾರ್‌ ಅವರು ಹೇಳಿದರು.

‘ದತ್ತು ಗ್ರಾಮಗಳಲ್ಲಿ ಬೆಳೆಯುವ ಆಹಾರ ಧಾನ್ಯ ಮತ್ತು ಅರಣ್ಯ ಕಿರು ಉತ್ಪನ್ನಗಳನ್ನು ನೇರ ಮಾರಾಟ ಮಾಡಲು ಉಚಿತ ಮಳಿಗೆಯೊಂದನ್ನು ಹನೂರಿನ ಸೋಲಿಗ ಅಭಿವೃದ್ದಿ ಕೇಂದ್ರಕ್ಕೆ ನೀಡಲಾಗುವುದು. ಎರಡು ಗ್ರಾಮಗಳಲ್ಲಿ ಡಿಜಿಟಲ್ ಸೇವೆಗಳಾದ ಸಿ.ಎಸ್.ಸಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಹೊಲಿಗೆ ತರಬೇತಿ ಕೇಂದ್ರ ಪ್ರಾರಂಭಿಸಿ, ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಗುವುದು ಹಾಗೂ ಬುಡಕಟ್ಟು ಜನರ ರೈತ ಸೇವಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಅವರು ವಿವರಿಸಿದರು.

‘ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಈ ಶಾಲೆಗಳ ಶೈಕ್ಷಣಿಕ ಹಾಗೂ ಅಭಿವೃದ್ದಿಗೆ ಜಿಲ್ಲಾಡಳಿತ ಸಹಕಾರ ಅಗತ್ಯ’ ಎಂದು ಕುಲಪತಿಗಳಾದ ಹೇಮಂತ್‌ ಕುಮಾರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT