ಶನಿವಾರ, ಜುಲೈ 24, 2021
28 °C
ಅಧಿಕಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ

ಪರೀಕ್ಷೆಯೊಂದಿಗೆ ಮಕ್ಕಳ ಹಿತ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸುವುದರ ಜೊತೆಗೆ ಮಕ್ಕಳ ಹಿತವನ್ನೂ ಕಾಪಾಡಬೇಕಾಗಿದೆ. ಕೋವಿಡ್‌–19 ಕಾರಣದಿಂದಾಗಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬುಧವಾರ ತಿಳಿಸಿದರು.

ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಇಂದು ಪರೀಕ್ಷೆಗಳು ಭಯದ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತಿವೆ. ಜಿಲ್ಲಾಡಳಿತ ಅತ್ಯಂತ ಎಚ್ಚರಿಕೆಯಿಂದ ಪರೀಕ್ಷೆ ನಡೆಸಬೇಕು. ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು’ ಎಂದರು. 

‘ನನ್ನ ಪ್ರಕಾರ, ಈ ಸಂದರ್ಭದಲ್ಲಿ ಪರೀಕ್ಷೆ ಬೇಕಾಗಿ ಇರಲಿಲ್ಲ. ಆನ್‌ಲೈನ್‌ ಪಾಠ ಮಾಡಿದ್ದಾರೆ. ಮಕ್ಕಳು ಪರೀಕ್ಷೆಯಲ್ಲಿ ಏನು ಬರೆಯುತ್ತಾರೋ ಗೊತ್ತಿಲ್ಲ. ಪರೀಕ್ಷೆ ನಡೆದರೂ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ರಾಜ್ಯದ ಬಹುತೇಕ ಪೋಷಕರಿಗೆ ಪರೀಕ್ಷೆ ನಡೆಯುವುದು ಇಷ್ಟವಿಲ್ಲ. ಹಾಗಿದ್ದರೂ ಪರೀಕ್ಷೆ ನಡೆಯುತ್ತಿದೆ. ಮಕ್ಕಳ ಹಿತವನ್ನು ಕಾಪಾಡುವುದಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಮಾತನಾಡಿ, ‘ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 13 ಪರೀಕ್ಷಾ ಕೇಂದ್ರಗಳು ಇದ್ದು, ನಗರದಲ್ಲಿ 6, ಕೊಳ್ಳೇಗಾಲ ತಾಲ್ಲೂಕಿನಲ್ಲಿ 3, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರಗಳು ಇವೆ. ಚಾಮರಾಜನಗರ ವಿಧಾನಸಭಾ ವ್ಯಾಪ್ತಿಯಲ್ಲಿ 4,249 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. 39 ಮಕ್ಕಳು ನಮ್ಮಲ್ಲಿ ಹೊರಗಡೆಯಿಂದ ಬಂದು ಬರೆಯುತ್ತಿದ್ದಾರೆ. ನಮ್ಮ ತಾಲ್ಲೂಕಿನ ಒಬ್ಬ ವಿದ್ಯಾರ್ಥಿ ಕೇರಳದ ವೈನಾಡಿನಲ್ಲಿ ಇದ್ದು, ಕರೆಸುವ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದರು.

‘ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಸ್ಯಾನಿಟೈಸರ್‌ ಬಂದಿದೆ. ಸ್ಕೌಟ್ಸ್ ಮತ್ತು ಗೌಡ್ಸ್ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಗಿದೆ. ಪರೀಕ್ಷೆ ಪ್ರಾರಂಭ ಆಗುವ ಮೂರು ದಿನಗಳ ಮುಂಚೆ ಪರೀಕ್ಷಾ ಕೇಂದ್ರಗಳು ಹಾಗೂ ಕೊಠಡಿಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುವುದು’ ಎಂದು ಅವರು ಹೇಳಿದರು. 

ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಡಯಟ್‌ನ ಹಿರಿಯ ಉಪನ್ಯಾಸಕ ಕೆಂಪಲಿಂಗಪ್ಪ, ನಗರಸಭೆಯ ಪರಿಸರ ಎಂಜಿನಿಯರ್‌ ಗಿರಿಜಮ್ಮ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಯಸ್ವಾಮಿ, ಕುಮಾರ್, ಸಿದ್ದಮಲ್ಲಪ್ಪ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.