ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಯ ಸಾಧನೆ ಏರುಮುಖ, ಈ ವರ್ಷ 11ನೇ ಸ್ಥಾನಕ್ಕೆ ಜಿಗಿತ

ಎರಡು ವರ್ಷಗಳ ಹಿಂದೆ 24ನೇ ಸ್ಥಾನದಲ್ಲಿದ್ದ ಜಿಲ್ಲೆ
Last Updated 12 ಆಗಸ್ಟ್ 2020, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವರ್ಷಗಳಿಂದೀಚೆಗೆ ಗಡಿ ಜಿಲ್ಲೆಯ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ (2017–18) ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ಬಾರಿ 11ನೇ ಸ್ಥಾನಗಳಿಸಿದೆ. ‘ಬಿ’ ಶ್ರೇಣಿ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಕಳೆದ ವರ್ಷ, ಅಂದರೆ, 2018–19ನೇ ಸಾಲಿನಲ್ಲಿ 15ನೇ ಸ್ಥಾನಗಳಿಸಿ ಉತ್ತಮ ಸ್ಥಾನ ಗಳಿಸಿತ್ತು.

ಮೂರು ವರ್ಷಗಳ ಶೇಕಡವಾರು ಫಲಿತಾಂಶದಲ್ಲೂ ಗಮನಾರ್ಹ ಏರಿಕೆಯಾಗಿದೆ. 2017–18ರಲ್ಲಿ ಶೇ74.46, ಕಳೆದ ವರ್ಷ, ಶೇ 80.58 ಹಾಗೂ ಈ ವರ್ಷ ಶೇ 87.10 ಫಲಿತಾಂಶ ದಾಖಲಾಗಿದೆ.

‘ಫಲಿತಾಂಶ ವೃದ್ಧಿಗಾಗಿ2018–19ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಆರಂಭಿಸಲಾಗಿದ್ದ ಕಾರ್ಯಕ್ರಮಗಳನ್ನು ಈ ವರ್ಷವೂ ಮುಂದುವರೆಸುವುದರ ಜೊತೆಗೆ ಕೆಲವು ಹೊಸ ಯೋಜನೆಗಳನ್ನೂ ರೂಪಿಸಲಾಗಿತ್ತು. ಇವೆಲ್ಲದರ ಪರಿಣಾಮ ಉತ್ತಮ ಫಲಿತಾಂಶ ಬಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಕು ನೀಡುತ್ತಿರುವ ‘ಲ್ಯಾಂಪ್‌‌’: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಮನೆಗಳಲ್ಲಿ ಕಲಿಕಾ ವಾತಾವರಣ ಸೃಷ್ಟಿಸುವ ಉದ್ದೇಶದಿಂದ 2018–19ನೇ ಸಾಲಿನಲ್ಲಿ ‘ಲ್ಯಾಂಪ್‌‌’ (LAMP-ಲರ್ನಿಂಗ್‌ ಅಚೀವ್‌ಮೆಂಟ್ಸ್‌ ಅಂಡ್‌ ಮೋಟಿವೇಷನಲ್‌ ಪ್ರೋಗ್ರಾಮ್) ರೂಪಿಸಿತ್ತು. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ರೂಪಿಸಲಾಗಿತ್ತು.

‘ಲ್ಯಾಂಪ್‌’ ಅಡಿಯಲ್ಲಿ ಸಂಜೆ ಹೊತ್ತು ಶಿಕ್ಷಕರು ಮಕ್ಕಳ ಮನೆ ಮನೆಗೆ ಭೇಟಿ ನೀಡಿ, ಮಕ್ಕಳು ಏನು ಮಾಡುತ್ತಾರೆ? ಮನೆಯಲ್ಲಿ ಕಲಿಕಾ ವಾತಾವರಣ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಶಿಕ್ಷಣದ ಮಹತ್ವದ ವಿವರಿಸಲಾಗುತ್ತದೆ. ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವಂತೆಯೂ ಅವರನ್ನು ಹುರಿದುಂಬಿಸಲಾಗುತ್ತಿದೆ.

ಹೊಸ ಕಾರ್ಯಕ್ರಮಗಳು: ‘ಲ್ಯಾಂಪ್‌ ಕಾರ್ಯಕ್ರಮವನ್ನು ಮುಂದುವರೆಸಿರುವುದರ ಜೊತೆಗೆ, ಈ ವರ್ಷ ಫಲಿತಾಂಶ ವೃದ್ಧಿಗೆಂದೇ ಹೊಸ ಕಾರ್ಯಯೋಜನೆ ರೂಪಿಸಲಾಗಿತ್ತು. ಇದರ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು’ ಎಂದು ಜವರೇಗೌಡ ಅವರು ಮಾಹಿತಿ ನೀಡಿದರು.

ಕಲಿಕೆಯಲ್ಲಿ ಹಿಂದುಳಿದವರಿಗೆ ಒತ್ತು:ವರ್ಷಾರಂಭದಲ್ಲೇ ಸಹ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿ, ಹೊಸ ಪಠ್ಯಕ್ರಮ ಹಾಗೂ ಪ್ರಶ್ನೆಪತ್ರಿಕೆಗಳ ರೂಪುರೇಷೆಗಳ ಬಗ್ಗೆ ತಿಳಿಸಿಕೊಡಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸಿ, ಅವರಿಗೆ ವಿಶೇಷ ಗಮನ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಅವರಿಗಾಗಿಯೇ ಸಂಪನ್ಮೂಲ ಸಾಹಿತ್ಯವನ್ನು ಸೃಷ್ಟಿಸಲು ಶಿಕ್ಷಕರಿಗೆ ಅಧಿಕಾರಿಗಳು ಸೂಚಿಸಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಸರಳ ವಿಧಾನಗಳ ಮೂಲಕ ಪಾಠ ಮಾಡುವ ಪ್ರಯತ್ನವನ್ನೂ ಶಿಕ್ಷಕರು ಮಾಡಿದ್ದರು.

‘ವಿವಿಧ ವಿಷಯಗಳಲ್ಲಿ ಕಷ್ಟಕರವಾದ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಿ, ಆ ವಿಚಾರಗಳನ್ನು ಪುನರಾವರ್ತನೆ ಮಾಡುವುದು, ಶಾಲೆಗಳಲ್ಲಿ ಪುನರ್‌ಮನನ ಕಾರ್ಯಕ್ರಮಗಳು ಹಾಗೂ ನಿರಂತರ ಅಭ್ಯಾಸಕ್ಕೆ ಗಮನ ನೀಡಲಾಗಿತ್ತು. ಮಕ್ಕಳಿಗೆ ಪ್ರತಿ ತಿಂಗಳು ಪರೀಕ್ಷೆ ನಡೆಸುವುದು, ಅಧಿಕಾರಿಗಳಿಂದ ಮಾಸಿಕ ಪ್ರಗತಿ ಪರಿಶೀಲನಾ ಸಭೆ, ಶಾಲಾ ಅವಧಿಗಿಂತಲೂ ಹೆಚ್ಚು ಸಮಯ ಮಕ್ಕಳನ್ನು ಶಾಲೆಯಲ್ಲಿ ಇರಿಸಿಕೊಂಡು ಅವರಿಗೆ ತರಬೇತಿ ನೀಡಲೂ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಡಿಡಿಪಿಐ ತಿಳಿಸಿದರು.

ಪರೀಕ್ಷಾ ಮಾರ್ಗದರ್ಶನ: ಪರೀಕ್ಷೆಯನ್ನು ಎದುರಿಸುವ ಬಗ್ಗೆ ಉತ್ತರ ಬರೆಯುವ ವಿಧಾನ ಹಾಗೂ ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಣೆಗಾಗಿ ಪರೀಕ್ಷಾ ಮಾರ್ಗದರ್ಶನ ಎಂಬ ಕಾರ್ಯಕ್ರಮವನ್ನೂ ರೂಪಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಪ್ರತಿಭಾ ಪೋಷಣೆ, ಮಕ್ಕಳ ಕಲಿಕಾ ಮಟ್ಟ ಪರಿಶೀಲನೆಗೆ ಶಾಲಾ ಹಂತದಲ್ಲಿ ಮೇಲ್ವಿಚಾರಣಾ ತಂಡ ರಚನೆ, ಮಕ್ಕಳು ಗುಂಪು ಅಧ್ಯಯನ ಮಾಡುವುದಕ್ಕೆ ಆದ್ಯತೆ.. ಹೀಗೆ ಹಲವು ಕಾರ್ಯಕ್ರಮಗಳನ್ನು ಶಿಕ್ಷಣ ‌ಇಲಾಖೆ ಜಿಲ್ಲೆಯಲ್ಲಿ ಹಮ್ಮಿಕೊಂಡಿತ್ತು.

40 ಶಾಲೆಗಳಿಗೆ ಶೇ 100 ಫಲಿತಾಂಶ

ಶೇ 100 ಫಲಿತಾಂಶ ದಾಖಲಿಸಿರುವ ಪ್ರೌಢಶಾಲೆಗಳ ಸಂಖ್ಯೆಯೂ ಈ ವರ್ಷ ಹೆಚ್ಚಳವಾಗಿದೆ. ಕಳೆದ ವರ್ಷದ 25 ಶಾಲೆಗಳು ಶೇ 100 ಫಲಿತಾಂಶದ ದಾಖಲೆ ಮಾಡಿದ್ದವು. ಈ ವರ್ಷ 40 ಶಾಲೆಗಳ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 17 ಪ್ರೌಢಶಾಲೆಗಳು, ಹನೂರು ತಾಲ್ಲೂಕಿನ 16, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ತಲಾ ಮೂರು ಹಾಗೂ ಗುಂಡ್ಲುಪೇಟೆಯ ಒಂದು ಪ್ರೌಢ ಶಾಲೆ ಶೇ 100 ಫಲಿತಾಂಶ ದಾಖಲಿಸಿದೆ.

12 ಸರ್ಕಾರಿ ಪ್ರೌಢ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ಐದು ವಸತಿ ಶಾಲೆಗಳ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT