ಶನಿವಾರ, ಆಗಸ್ಟ್ 8, 2020
23 °C
ಮಹಾಮಾರಿ ಕೋವಿಡ್‌–19 ವಿರುದ್ಧದ ಹೋರಾಟ: ಶುಶ್ರೂಷಕರ ಸೇವೆ ಅನನ್ಯ

ಪತ್ನಿ ಹಾವೇರಿಯಲ್ಲಿ, ಪತಿ ಇಲ್ಲಿ; ನವ ನರ್ಸ್‌ದಂಪತಿ ಕಥೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೋವಿಡ್‌–19 ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ವೈದ್ಯರಿಗೆ ಸರಿ ಸಮನಾಗಿ ಸೆಣಸುತ್ತಿರುವರು ಶುಶ್ರೂಷಕರು (ಸ್ಟಾಫ್‌ ನರ್ಸ್‌). 

ಒಂದರ್ಥದಲ್ಲಿ ಇವರು ವೈದ್ಯರಿಗಿಂತಲೂ ಹೆಚ್ಚು ಹೋರಾಟ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್‌–19 ರೋಗಿಗಳ ಜೊತೆ ಹೆಚ್ಚು ಒಡನಾಡುವವರು ಇವರೇ. ಸೋಂಕು ತಗುಲಿದವರಿಗೆ ಔಷಧಗಳನ್ನು ನೀಡುವುದರ ಜೊತೆಗೆ ವಾರ್ಡ್‌ನಲ್ಲಿ ಅವರ ಎಲ್ಲ ಅಗತ್ಯಗಳನ್ನು ಪೂರೈಸುವವರು ನರ್ಸ್‌ಗಳು. 

ಆರು ತಿಂಗಳಿಂದ ಕುಟುಂಬ ಭೇಟಿ ಇಲ್ಲ: ಕೋವಿಡ್‌ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಮಾಲ್ ಸಾಬ್‌ ಅವರು ಹಾವೇರಿಯವರು. ಎರಡು ವರ್ಷಗಳ ಹಿಂದೆಯಷ್ಟೇ ಈ ಕೆಲಸಕ್ಕೆ ಸೇರಿದ್ದಾರೆ. ಆರು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಮದುವೆ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾದವರಿಗೆ ಮತ್ತೆ ಊರಿಗೆ ಹೋಗುವುದಕ್ಕೆ ಆಗಿಲ್ಲ. ಅವರ ಪತ್ನಿಯೂ ಹಾವೇರಿಯಲ್ಲಿ ಸ್ಟಾಫ್‌ ನರ್ಸ್‌ ಆಗಿದ್ದಾರೆ. ಕೋವಿಡ್‌–19 ಕಾರಣದಿಂದ ಆರು ತಿಂಗಳಿಂದ ನೇರವಾಗಿ  ಅವರಿಗೆ ಜೊತೆಗೆ ಇರುವುದಕ್ಕೆ ಆಗಿಲ್ಲ. ರಂಜಾನ್‌ ಸಂದರ್ಭದಲ್ಲೂ ಅವರಿಗೆ ಊರಿಗೆ ಹೋಗುವುದಕ್ಕೆ ಕೋವಿಡ್‌ ಬಿಟ್ಟಿಲ್ಲ. 

ಅವರಿಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ತಂದೆಗೆ ಕಫದ ಸಮಸ್ಯೆ ಇದೆ. ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ತಾನು ನರ್ಸ್‌ ಆಗಿದ್ದರೂ, ಅಪ್ಪನಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎಂಬ ಬೇಸರ ಅವರದ್ದು. ತಂದೆ ತಾಯಿ, ಪತ್ನಿಯನ್ನು ಕಾಣಲು ಹಂಬಲಿಸುತ್ತಲೇ, ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಆರಂಭದಲ್ಲಿ ಇದ್ದ ಭಯ ಈಗ ಅವರಿಗಿಲ್ಲ. ಎಲ್ಲ ರಕ್ಷಣಾ ಸಲಕರಣೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಕೋವಿಡ್‌–19 ವಾರ್ಡ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿದಾಗ ಸಹಜವಾಗಿ ಸ್ವಲ್ಪ ಭಯವಾಯಿತು. ಆದರೆ, ಜಿಲ್ಲಾ ಸರ್ಜನ್‌ ಹಾಗೂ ಇತರ ವೈದ್ಯರು ಧೈರ್ಯ ತುಂಬಿದರು. ಸುರಕ್ಷಿತ ಸಾಧನಗಳನ್ನು ಧರಿಸುವುದರಿಂದ ಏನೂ ಆಗುವುದಿಲ್ಲ ಎಂದು ಮನವರಿಕೆ ಮಾಡಿದರು. ನರ್ಸ್‌ ಆಗಿ ನನ್ನ ಕರ್ತವ್ಯವವನ್ನು ಮಾಡಲೇಬೇಕು’ ಎಂದು ಜಮಾಲ್‌ ಸಾಬ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನನ್ನ ತಂದೆ, ತಾಯಿ ಹಾಗೂ ಪತ್ನಿ ಹಾವೇರಿಯಲ್ಲಿದ್ದಾರೆ. ಪತ್ನಿಯೂ ಸ್ಟಾಫ್‌ ನರ್ಸ್‌ ಆಗಿರುವುದರಿಂದ ಈಗಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾಳೆ. ಆಕೆ ಕೂಡ ಕೋವಿಡ್‌–19 ಕರ್ತವ್ಯದಲ್ಲಿ ಇದ್ದಾಳೆ. ಆದರೆ, ತಂದೆ ತಾಯಿಗೆ ಸ್ವಲ್ಪ ಆತಂಕ ಇದೆ. ದೂರವಾಣಿಯಲ್ಲಿ ಮಾತನಾಡಿ ಧೈರ್ಯ ತುಂಬುತ್ತಾ ಇರುತ್ತೇನೆ. ಆರು ತಿಂಗಳುಗಳಿಂದ ಅವರನ್ನು ಭೇಟಿ ಯಾಗಲು ಆಗಿಲ್ಲ ಎಂಬ ಬೇಸರ ಇದೆ’ ಎಂದು ಅವರು ಹೇಳಿದರು. 

ಜಮಾಲ್‌ ಅವರ ಜೊತೆಗೆ ಸರಳ, ರಮ್ಯಾ, ಮಹೇಶ್ವರಿ ಎಂಬ ಶುಶ್ರೂಷಕರೂ ಕೆಲಸ ಮಾಡಿದ್ದಾರೆ. ಇವರು ಕೂಡ ಒಂದು ವಾರ ಕೋವಿಡ್‌–19 ಕರ್ತವ್ಯ ನಿರ್ವಹಿಸಿ ಎರಡು ದಿನಗಳ ಹಿಂದೆಯಷ್ಟೇ ತಮ್ಮ ಕುಟುಂಬಗಳನ್ನು ಸೇರಿದ್ದಾರೆ. 

ಸರಳ ಅವರು ಮೂಲತಃ ಯಳಂದೂರಿನವರು. ವ‌ಯಸ್ಸಾಗಿರುವ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಚಾಮರಾಜನಗರದವರಾದ ರಮ್ಯಾ ಅವರು ಇಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಕೊಳ್ಳೇಗಾಲದ ಮಹೇಶ್ವರಿ ಅವರಿಗೂ ಐದು ವರ್ಷದ ಮಗುವಿದೆ.

ವಾರ ಕಾಲ ಆಸ್ಪತ್ರೆಯಲ್ಲೇ ವಾಸ್ತವ್ಯ

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರ ರೀತಿಯಲ್ಲಿ ನರ್ಸ್‌ಗಳಿಗೂ ಒಂದು ವಾರದ ಪಾಳಿ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ, ಮಧ್ಯಾಹ್ನ ಹಾಗೂ ರಾತ್ರಿ ಪಾಳಿಯಲ್ಲಿ ಅವರು ಕರ್ತವ್ಯ ನಿರ್ವಹಿಸಬೇಕು. ವಾರದ ಕಾಲ ಅವರು ಆಸ್ಪತ್ರೆಯಿಂದ ಹೊರಗಡೆ ಹೋಗುವಂತಿಲ್ಲ. ಮನೆಗೆ ಹೋಗಿ ಪತಿ, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಬೆರೆಯುವುದಕ್ಕೆ ಆಗುವುದಿಲ್ಲ. ವಾರದ ಕರ್ತವ್ಯ ಮುಗಿದ ನಂತರ ಗಂಟಲ ದ್ರವ ಸಂಗ್ರಹಿಸಿ ಕೋವಿಡ್‌–19 ಪರೀಕ್ಷೆ ನಡೆಸಲಾಗುತ್ತದೆ. ವರದಿ ನೆಗೆಟಿವ್‌ ಬಂದ ನಂತರವಷ್ಟೇ ಮನೆಗೆ ಹೋಗಬೇಕು. ಪ್ರತಿ ವಾರ ವೈದ್ಯರಂತೆ, ನರ್ಸ್‌ಗಳ ತಂಡವೂ ಬದಲಾಗುತ್ತಿರುತ್ತದೆ.

ಈ ವಾರದಿಂದ ಹೊಸ ತಂಡ ಕರ್ತವ್ಯಕ್ಕೆ ಹಾಜರಾಗಿದೆ. 

ಪಿಪಿಇ ಕಿಟ್‌ ಧರಿಸಿ ಕೆಲಸ ಕಷ್ಟ

‘ವೈಯಕ್ತಿಕ ಸುರಕ್ಷಿತಾ ಸಾಧನಗಳನ್ನು (ಪಿಪಿಇ ಕಿಟ್‌) ಧರಿಸಿ ಕೆಲಸ ಮಾಡುವುದು ಕಷ್ಟ. ಗರಿಷ್ಠ ಎಂದರೆ ಆರು ಗಂಟೆಗಳ ಕಾಲ ಅದನ್ನು ಧರಿಸಿ ಕೆಲಸ ಮಾಡಬಹುದು. ಅದಕ್ಕಿಂತ ಹೆಚ್ಚು ಹೊತ್ತು ಧರಿಸುವುದು ಭಾರಿ ಕಷ್ಟ’ ಎಂದು ಜಮಾಲ್‌ ಸಾಬ್‌ ಹೇಳಿದರು. 

ವೈದ್ಯರ ಸ್ಪಂದನೆ: ‘ಒಂದು ದಿನ ರಾತ್ರಿ ಪಾಳಿಗೆ ಒಬ್ಬನೇ ಇದ್ದೆ. 12 ಗಂಟೆ ಪಿಪಿಇ ಕಿಟ್‌ ಧರಿಸಿಕೊಂಡು ಕೆಲಸ ಮಾಡಿದೆ. ತುಂಬ ಕಷ್ಟವಾಯಿತು. ಇದನ್ನು ಜಿಲ್ಲಾ ಸರ್ಜನ್‌ ಹಾಗೂ ಹಿರಿಯ ವೈದ್ಯರ ಗಮನಕ್ಕೆ ತಂದೆ. ಆ ಬಳಿಕ ರಾತ್ರಿ ಪಾಳಿಗೂ ಇಬ್ಬರನ್ನು ನಿಯೋಜಿಸಿದರು. ನಮ್ಮ ಕಷ್ಟಕ್ಕೆ ಹಿರಿಯ ವೈದ್ಯರು ಸ್ಪಂದಿಸುತ್ತಿದ್ದಾರೆ. ಹಾಗಾಗಿ, ಕೆಲಸ ಮಾಡುವುದು ಕಷ್ಟ ಅನಿಸುತ್ತಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು