ಶನಿವಾರ, ಫೆಬ್ರವರಿ 27, 2021
28 °C
ತಾಲ್ಲೂಕಿಗೆ ಹೊಸ ಬೆಳೆ, ಆಮೆಕರೆ ಸುತ್ತಮುತ್ತ ಕೃಷಿ

ಯಳಂದೂರು: ಬಾವಲಿ ಬಾಧೆಗೆ ನಲುಗಿದ ನಕ್ಷತ್ರ ನೇರಳೆ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನಲ್ಲಿ ಪ್ರಗತಿಪರ ಕೃಷಿಕರು ಹೊಸದಾಗಿ ಪರಿಚಿತಗೊಳಿಸಿದ ಬೆಳೆ ನಕ್ಷತ್ರ ನೇರಳೆ. ನೀರಿನ ಅಂಶ ಹೆಚ್ಚಾಗಿರುವ ಈ ಹಣ್ಣು ರುಚಿಕರ. ಹಾಗಾಗಿ ಬೇಡಿಕೆ ಹೆಚ್ಚಿದೆ. ಆದರೆ, ಬಾವಲಿಗಳ ಹಾವಳಿಯಿಂದಾಗಿ ಹಣ್ಣುಗಳು ಉದುರುತ್ತಿವೆ.

ಜಂಬು ನೇರಳೆಯ ವರ್ಗದ ಈ ಹಣ್ಣನ್ನು ಸ್ಥಳೀಯವಾಗಿ ಪೇರಲೆ ಎಂದು ಕರೆಯುತ್ತಾರೆ. ಸ್ಟಾರ್‌  ಆ್ಯಪಲ್‌ ಎಂದೂ ಕರೆಯುವವರು ಇದ್ದಾರೆ. 

ತಾಲ್ಲೂಕಿನ ಆಮೆಕೆರೆ ಸುತ್ತಮುತ್ತಲಿನ ರೈತರು ನಕ್ಷತ್ರ ನೇರಳೆಯನ್ನು ಬೆಳೆದಿದ್ದಾರೆ. ಉತ್ತರ ಕರ್ನಾಟಕದ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಂಡು ಬೆಳೆಯುವ ಈ ಹಣ್ಣಿನ ಗಿಡಗಳು, ಇತ್ತೀಚಿಗೆ ದಕ್ಷಿಣದ ಜಿಲ್ಲೆಗಳಲ್ಲೂ ರೈತರ ಜನಪ್ರಿಯ ಕೃಷಿಯಾಗಿದೆ. 

ಸ್ವಾದಿಷ್ಟಕರವಾಗಿರುವ ಈ ಹಣ್ಣಿನಲ್ಲಿ ಹಾಗೂ ‘ಸಿ’ ಜೀವಸತ್ವದ ಕಾರಣ ಹೆಚ್ಚಿದೆ. ಇದರಿಂದ ಜಾಮ್‌, ಜೆಲ್ಲಿ, ನೆಕ್ಟರ್‌ ತಯಾರಿಸಲಾಗುತ್ತದೆ. ನೀರು ಬಸಿದು ಹೋಗುವ ಕೆಂಪುಗೋಡು ಮಣ್ಣು ಇರುವೆಡೆ ಉತ್ತಮ ಫಸಲು ಸಿಗುತ್ತದೆ.

‘ಒಣ ಪ್ರದೇಶದಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ. ಹೆಚ್ಚಾಗಿ ಮಳೆ ಬರುವುವಲ್ಲೂ ಉತ್ತಮ ಬೆಳವಣಿಗೆ ಇದೆ. ನಾಟಿ ಮಾಡಿದ ಸಸಿಗಳು ಒಂದೆರಡು ವರ್ಷಗಳಲ್ಲಿ ಫಸಲು ಕೊಡುತ್ತದೆ. ಆಮೆಕೆರೆ ಸುತ್ತಮುತ್ತಲ ಕೆಲ ರೈತರು ನಕ್ಷತ್ರ ನೇರಳೆಯ ನಾಟಿಗೆ ಮುಂದಾಗಿದ್ದು, ಹಲವಾರು ತಳಿಗಳನ್ನು ಪರಿಚಯಿಸಿದ್ದಾರೆ. ಹೊಸ ಬೆಳೆಗೆ ಬಾವಲಿ ಜಾತಿಯ ಪಕ್ಷಿಗಳ ಹಾವಳಿ ಹೆಚ್ಚಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಕೃಷಿಕರು.

‘ಅಲಹಾಬಾದ್‌ ಸಫೇದ, ಸರ್ದಾರ, ಅರ್ಕಾ ಮೃದಲ ತಳಿಗಳು ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ಸಿಗುತ್ತವೆ. ರಾಜ್ಯದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿ ಇರುವ ‘ನವಿಲೂರು’ ತಳಿಯ 20ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಿದ್ದು, ಈಗ ಹತ್ತಾರು ಕೆಜಿ ಹಣ್ಣು ಬಿಟ್ಟಿತ್ತು. ಈ ಹಂತದಲ್ಲಿ ಬಾವಲಿಗಳು ಈ ಹಣ್ಣು ಮತ್ತು ಹೂವಿನ ರುಚಿಗೆ ಮುತ್ತಿದವು. ನೂರಾರು ಕೆಜಿ ಹಣ್ಣು ಕೈಗೆ ಸಿಗದಂತೆ ಆಯಿತು’ ಎನ್ನುತ್ತಾರೆ ಬೆಳೆಗಾರ ಮದ್ದೂರು ರಾಮಣ್ಣ.

‘ಹಣ್ಣು ಗುಂಡಾಗಿದ್ದು, ನುಣುಪಾದ ಸಿಪ್ಪೆ, ಬಿಳಿ ತಿರುಳು ಕಡಿಮೆ ಬೀಜ ಹೊಂದಿದೆ. ಕೆಲವು ತಿಳಿ ಹಸಿರು, ಬಿಳಿ ತಿರುಳು, ಮೃದುವಾದ ಬೀಜ ಹೊಂದಿರುತ್ತವೆ. ಹಣ್ಣುಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚು. ಇದರ ಆಕರ್ಷಕ ಹೂವನ್ನು ಪಕ್ಷಿಗಳು ಸೇವಿಸಲು ಮುಗಿಬೀಳುತ್ತವೆ’ ಎನ್ನುತ್ತಾರೆ ಇವರು.

ತಾಲ್ಲೂಕಿಗೆ ಹೊಸ ಬೆಳೆ

ಇಲ್ಲಿನ ಪರಿಸರಕ್ಕೆ ಇದು ಹೊಸ ಬೆಳೆ. ಇದರ ಸಂಗ್ರಹ ಸಾಮರ್ಥ್ಯ ಹೆಚ್ಚು ಇರುವುದರಿಂದ ಬೇಡಿಕೆ ಏರುತ್ತಿದೆ. ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳ ನಡುವೆ ಕೃಷಿ ಮಾಡಬಹುದು. ಹಾಗಾಗಿ, ಹೆಚ್ಚಿನ ರೈತರು ನಕ್ಷತ್ರ ನೇರಳೆ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ.

‘ವರ್ಷದಲ್ಲಿ ಮೂರು ಸಲ ಹೂ ಬಿಡುತ್ತದೆ. ನಾಟಿ ಮಾಡಿದ ಮೂರ್ನಾಲ್ಕು ವರ್ಷಗಳ ನಂತರ ಇಳುವರಿ ಕೊಡಲು ಆರಂಭಿಸುತ್ತದೆ. ಆರ್ಥಿಕ ಇಳುವರಿಗೆ ಐದಾರು ವರ್ಷಗಳ ತನಕ ಕಾಯಬೇಕು. ವಯಸ್ಸಿಗೆ ಅನುಗುಣವಾಗಿವ ಹಣ್ಣಿನ ಇಳುವರಿ ವ್ಯತ್ಯಾಸ ಆಗುತ್ತದೆ. ಹತ್ತು ವರ್ಷದ ಗಿಡಗಳಿಂದ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 20ರಿಂದ 30 ಟನ್‌ಗಳಷ್ಟು ಹಣ್ಣು ಮಾಡಬಹುದು. ಹಿಡುವಳಿ ಪ್ರಮಾಣ ಹೆಚ್ಚಾದಷ್ಟು ಬಾವಲಿಗಳ ಪ್ರಮಾಣ ಕಡಿಮೆ ಆಗುತ್ತದೆ. ಬೆಳೆಗಾರರು ಆತಂಕ ಪಡಬೇಕಿಲ್ಲ’ ಎಂಬುದು ತೋಟಗಾರಿಕಾ ತಜ್ಞರ ಸಲಹೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು