ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹೆದ್ದಾರಿ ತಡೆದು ಪ್ರತಿಭಟಿಸಿದ ಕಬ್ಬು ಬೆಳೆಗಾರರು

ಕಬ್ಬಿನ ಎಫ್‌ಆರ್‌ಪಿ ಪರಿಷ್ಕರಣೆಗೆ ಆಗ್ರಹ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 12 ಆಗಸ್ಟ್ 2022, 11:50 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರವು 2022–23ನೇ ಸಾಲಿಗೆ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ಬೆಲೆಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಕಬ್ಬು ಬೆಳೆಗಾರರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸಂತೇಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಜಾಲಹಳ್ಳಿಹುಂಡಿ ಸೇತುವೆ ಹತ್ತಿರ ಸೇರಿದ ಪ್ರತಿಭಟನಕಾರರು ವಾಹನಗಳ ಸಂಚಾರ ತಡೆದರು. ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಪ್ರತಿ ಟನ್‌ಗೆ ₹4,500 ಬೆಲೆ ನಿಗದಿ ಮಾಡಬೇಕು ಎಂಬುದು ನಮ್ಮ ಒತ್ತಾಯ. ಸರ್ಕಾರ ಈಗ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದ್ದು, ಅದನ್ನು ಪರಿಷ್ಕರಿಸಬೇಕು’ ಎಂದು ಆಗ್ರಹಿಸಿದರು.

‘ಕಳೆದ ವರ್ಷ, ಶೇ 10ರಷ್ಟು ಇಳುವರಿಗೆ ₹2,950 (ಪ್ರತಿ ಟನ್‌ಗೆ) ಎಫ್‌ಆರ್‌ಪಿ ನಿಗದಿ ಮಾಡಲಾಗಿತ್ತು. ಈ ಬಾರಿ ಈ ದರವನ್ನು ₹3,050ಕ್ಕೆ ಹೆಚ್ಚಿದ್ದರೂ, ಇಳುವರಿ ಪ್ರಮಾಣವನ್ನು ಶೇ 10.25ಕ್ಕೆ ಏರಿಸಲಾಗಿದೆ. ಇಳುವರಿಯನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆಗಳು ರೈತರಿಗೆ ಕಡಿಮೆ ಹಣ ನೀಡುತ್ತವೆ. ಯಾವುದೇ ಕಾರಣಕ್ಕೂ ಇಳುವರಿ ಪ್ರಮಾಣವನ್ನು ಹೆಚ್ಚಿಸಬಾರದು’ ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಮೈಸೂರು– ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ‘ಸರ್ಕಾರ ಎಫ್‌ಆರ್‌ಪಿ ದರವನ್ನು ಕೆಜಿಗೆ 15 ಪೈಸೆಯಷ್ಟು ಜಾಸ್ತಿ ಮಾಡಿದೆ. ಆದರೆ ಸರ್ಕಾರದ ಬೆಂಬಲಿಗರು ₹150 ಜಾಸ್ತಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಅವರು, ‘2023ರ ವೇಳೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ರಸಗೊಬ್ಬರ ಬೆಲೆ, ಕೃಷಿ ಯಂತ್ರೋಪಕರಣ, ಮಜ್ಜಿಗೆ, ಮೊಸರು, ಅಕ್ಕಿ ಬೇಳೆ ಸೇರಿದಂತೆ ರೈತರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹಾಕಿ ಅವುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್‌ ಬಂಡವಾಳಶಾಹಿಗಳ ಸಾಲವನ್ನು ಮನ್ನಾ ಮಾಡಿದೆ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮೀನ ಮೇಷ ಎಣಿಸುತ್ತಿದೆ. ರೈತರ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಮಾಡುತ್ತಿಲ್ಲ’ ಎಂದರು.

ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಭೆ ಕರೆಯಬೇಕು. ಆನೆ ಮಡುವಿನ ಕೆರೆಗೆ ಉಡಿಗಾಲ ಗ್ರಾಮದ ತಾಯಿ ಕಾಲುವೆ ಚಿಕ್ಕ ಮೋರಿ ಮೂಲಕ ನೀರು ಹರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್‌ ಶಿವಮೂರ್ತಿ, ಮುಖಂಡರಾದ ಹಾಲಿನ ನಾಗರಾಜ್‌, ಮೂಕಹಳ್ಳಿ ಮಹದೇವಸ್ವಾಮಿ, ಹೆಗ್ಗೋಠಾರ ಶಿವಸ್ವಾಮಿ, ಯರಿಯೂರು ಮಹೇಶ್‌, ಮಲೆಯೂರು ಬಸರವರಾಜು, ಪ್ರವೀಣ್‌ ಹರ್ಷ, ನರ್ಸರಿ ಗುರು, ಉಡಿಗಾಲ ಮಹದೇವಸ್ವಾಮಿ, ರೇವಣ್ಣ, ಪೃಥ್ವಿ, ಅಭಿ, ಜನ್ನೂರು ಶಾಂತರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT