ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರಿಗೆ ಸರ್ಕಾರಿ ಕೆಲಸ, ಇನ್ನಿಬ್ಬರಿಗೆ ಶೀಘ್ರ

ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಸಮಿತಿ ಸಭೆ: ಸುಳ್ವಾಡಿ ಪ್ರಕರಣ ಚರ್ಚೆ
Last Updated 8 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ 2018ರ ಡಿಸೆಂಬರ್‌ 14ರಂದು ನಡೆದಿದ್ದ ವಿಷಪ್ರಸಾದ ದುರಂತ ಪ್ರಕರಣದ ನಾಲ್ವರು ಸಂತ್ರಸ್ತರ ಅವಲಂಬಿತರಿಗೆ ಸರ್ಕಾರಿ ಕೆಲಸ ಸಿಕ್ಕಿದೆ.

ಇನ್ನೂ ಇಬ್ಬರು ಅವಲಂಬಿತರ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ನಡೆಯುತ್ತಿದೆ. ಮೂವರು ಅವಲಂಬಿತರ ಅರ್ಜಿ ತಿರಸ್ಕೃತವಾಗಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸುಳ್ವಾಡಿ ದುರಂತದ ಬಗ್ಗೆ ಚರ್ಚೆ ನಡೆದಿದೆ.

ಸಮಿತಿ ಸದಸ್ಯರಾದ ಕೆಂಪನಪುರ ಸಿದ್ದರಾಜು, ಆಸೀಫ್‌ ಉಲ್ಲಾ ಅವರು ಮಾತನಾಡಿ, ‘ಕೆಲವು ಸಂತ್ರಸ್ತ ಅವಲಂಬಿತರ ಪ್ರಸ್ತಾವಗಳು ತಿರಸ್ಕೃತವಾಗಿವೆ. ಇವರಿಗೆ ಮಾನವೀಯತೆ ಆಧಾರದ ಮೇಲೆ ಪರ್ಯಾಯವಾಗಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಪರಿಗಣಿಸಬೇಕಿದೆ’ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾಗೀರಥಿ ಅವರು ನೇಮಕಾತಿಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೆಂಪನಪುರ ಸಿದ್ದರಾಜು, ನಲ್ಲೂರು ಸೋಮೇಶ್ವರ ಕಲಿಗೌಡನಹಳ್ಳಿ ಸಿದ್ದರಾಜು, ಟಿ.ಎಸ್.ರಾಜೇಂದ್ರ, ಆಸೀಫ್ ಉಲ್ಲಾ ಅವರು ಮಾತನಾಡಿ, ‘ಸುಳ್ವಾಡಿ ಪ್ರಕರಣದಲ್ಲಿ ನೊಂದವರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಇತ್ತೀಚೆಗೆ ಜಿಲ್ಲಾಡಳಿತ ಆಯೋಜಿಸಿದ್ದು ಶ್ಲಾಘನೀಯ. ಇನ್ನೂ ಹಲವರು ಅನಾರೋಗ್ಯದಿಂದ ಬಳಲುತ್ತಿದ್ದು ನಿರಂತರವಾಗಿ ಚಿಕಿತ್ಸೆ ನೆರವು ಅಗತ್ಯವಿದೆ. ಇದಕ್ಕಾಗಿ ವಿಶೇಷವಾಗಿ ಆರೋಗ್ಯ ಕಾರ್ಡ್ ಇತರೆ ಸೌಲಭ್ಯಗಳ ಮೂಲಕ ಚಿಕಿತ್ಸೆಗೆ ಮುಂದಾಗಬೇಕಿದೆ’ ಎಂದರು.

ಜಿಲ್ಲಾಧಿಕಾರಿ ಚಾರುಲತಾ ಅವರು ಪ್ರತಿಕ್ರಿಯಿಸಿ, ‘ಆರೋಗ್ಯ ಇಲಾಖೆ ವತಿಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸುಳ್ವಾಡಿಯಲ್ಲಿಯೇ ವಿಶೇಷ ಶಿಬಿರ ಆಯೋಜಿಸಿ ಆರೋಗ್ಯ ಕಾರ್ಡ್ ಇನ್ನಿತರ ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

ತ್ವರಿತ ಪರಿಹಾರಕ್ಕೆ ಸೂಚನೆ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

2021, 2022ನೇ ಸಾಲಿನಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳು ಹಾಗೂ ಸಂತ್ರಸ್ತರಿಗೆ ಈವರೆಗೆ ನೀಡಿರುವ ಪರಿಹಾರಗಳು ಹಾಗೂ ಇನ್ನೂ ಪರಿಹಾರ ನೀಡಬೇಕಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ವಿಳಂಬ ಮಾಡದೇ ಅಗತ್ಯ ದಾಖಲೆಗಳನ್ನು ಪಡೆದು ಪರಿಹಾರ ನೀಡುವಂತೆ ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪಬ್ಲಿಕ್‌ ಪ್ರಾಸಿಕ್ಯೂಟರ್‌ ಟಿ.ಎಚ್.ಲೋಲಾಕ್ಷಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಎಲ್. ಗಂಗಾಧರ್, ಚಿಕ್ಕಬಸವಯ್ಯ, ಜಯಕಾಂತಮ್ಮ, ನಂಜುಂಡೇಗೌಡ ಇತರರು ಇದ್ದರು.

ಜಾಗೃತಿ ಶಿಬಿರ, ಕಾರ್ಯಾಗಾರ ಏರ್ಪಡಿಸಿ

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನುಷ್ಠಾನದಲ್ಲಿರುವ ಕಾಯ್ದೆ, ಶಿಕ್ಷೆ ಬಗ್ಗೆ ಎಲ್ಲ ವರ್ಗದ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಾಗಾರ ತರಬೇತಿ ಶಿಬಿರಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಬೇಕು ಎಂದುಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಚಾರುಲತಾ ಅವರು ಪ್ರತಿಕ್ರಿಯಿಸಿ, ‘ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಕಾರ್ಯಾಗಾರ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಬೇಕು. ಮುಂದಿನ ಸಭೆಗೂ ಮೊದಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT