ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಸುನಿಲ್‌ ಬೋಸ್‌ ಮುಂದಿದೆ ಹಲವು ಸವಾಲುಗಳು

Published 9 ಜೂನ್ 2024, 6:44 IST
Last Updated 9 ಜೂನ್ 2024, 6:44 IST
ಅಕ್ಷರ ಗಾತ್ರ

ಚಾಮರಾಜನಗರ: ಚೊಚ್ಚಲ ಚುನಾವಣೆಯಲ್ಲೇ ಭಾರಿ ಮತಗಳ ಅಂತರದಲ್ಲಿ ಗೆದ್ದುಬೀಗಿರುವ ಯುವ ಸಂಸದ ಸುನಿಲ್‌ ಬೋಸ್‌ ಅವರ ಮುಂದೆ ಜಿಲ್ಲೆಗೆ ಸಂಬಂಧಿಸಿದಂತೆ ಬೆಟ್ಟದಷ್ಟು ಸವಾಲುಗಳಿವೆ. 

ಸಂಸದರಾಗಿದ್ದುಕೊಂಡು ಏನೆಲ್ಲ ಕೆಲಸ ಮಾಡಬಹುದು ಎಂಬುದನ್ನು, ಎರಡು ಬಾರಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿವಂಗತ ಆರ್‌.ಧ್ರುವನಾರಾಯಣ ಅವರು ತೋರಿಸಿಕೊಟ್ಟಿದ್ದರು. 2019ರ ಚುನಾವಣೆಯಲ್ಲಿ ಅವರಿಗೆ ಸೋಲಾಗಿತ್ತು. ಸಂಸದರಾಗಿ ಆಯ್ಕೆಯಾಗಿದ್ದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಅನಾರೋಗ್ಯ ಕಾಡಿದ್ದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. 

ರಾಜಕೀಯದಲ್ಲಿ ಇನ್ನೂ ಯುವಕರಾಗಿರುವ ಸುನಿಲ್‌ ಬೋಸ್‌ ಅವರು ಈ ಹಿಂದಿನ ಐದು ವರ್ಷಗಳ ಕೊರತೆಯನ್ನು ತುಂಬಿ, ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿದ್ದಾರೆ ಎಂಬ ನಿರೀಕ್ಷೆ ಜನರಲ್ಲಿದೆ. 

ಹಣೆಪಟ್ಟಿ ಕಳಚಬೇಕಿದೆ: ನಂಜುಂಡಪ್ಪ ಸಮಿತಿ ವರದಿಯಂತೆ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿದೆ. ವರದಿ ಸಲ್ಲಿಕೆಯಾಗಿ ಎರಡು ದಶಕಗಳು ಕಳೆದಿದ್ದರೂ, ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಕಂಡಿಲ್ಲ. ಐದಾರು ವರ್ಷಗಳಿಂದ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಇನ್ನಷ್ಟು ವರ್ಷಗಳೇ ಬೇಕು. ಸ್ಥಳೀಯ ಶಾಸಕರ ಸಹಕಾರದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಬಹುದೊಡ್ಡ ಸವಾಲು ಸುನಿಲ್‌ ಬೋಸ್‌ ಅವರ ಮುಂದಿದೆ. 

ನಗರ ಪಟ್ಟಣಗಳ ಅಭಿವೃದ್ಧಿ: ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಜಿಲ್ಲೆಯ ನಗರ ಪಟ್ಟಣಗಳು ವ್ಯವಸ್ಥಿತವಾಗಿ ಇನ್ನೂ ಅಭಿವೃದ್ಧಿಯಾಗಿಲ್ಲ. ರಸ್ತೆ, ಚರಂಡಿಯಂತಹ ಮೂಲ ಸೌಕರ್ಯಗಳೇ ಸಮರ್ಪಕವಾಗಿ ಇಲ್ಲ. ನಗರ, ಪಟ್ಟಣಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿ ಬರುತ್ತಲೇ ಇದೆ.  

ಉದ್ದಿಮೆಗಳ ಸ್ಥಾಪನೆ: ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳೇ ಹೆಚ್ಚಿರುವ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಶಿಕ್ಷಣ ಪಡೆದಿರುವ ಸ್ಥಳೀಯರಿಗೆ ಜಿಲ್ಲೆಯಲ್ಲೇ ಉದ್ಯೋಗ ಸಿಗುತ್ತಿಲ್ಲ. ಕೆಲಸ ಅರಸಿಕೊಂಡು ದೊಡ್ಡ ನಗರಗಳು, ಹೊರ ರಾಜ್ಯಗಳಿಗೆ ತೆರಳಬೇಕಿದೆ. ಇತ್ತೀಚಿನ ವರ್ಷಗಳಿಂದ ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆಗಳು ಸ್ಥಾಪನೆಯಾಗುತ್ತಿವೆ. ಆದರೆ, ಬೇರೆ ತಾಲ್ಲೂಕುಗಳಲ್ಲಿ ಉದ್ದಿಮೆ ಸ್ಥಾಪನೆ ವಾತಾವರಣ ನಿರ್ಮಿಸುವ ಅಗತ್ಯವಿದೆ. 

ನನೆಗುದಿಗೆ ಬಿದ್ದ ರೈಲು ಯೋಜನೆ: ಚಾಮರಾಜನಗರ–ಕೊಳ್ಳೇಗಾಲ–ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಇದರ ಅನುಷ್ಠಾನದಲ್ಲಿ ಸಂಸದರು ಬಹುಮುಖ್ಯ ಪಾತ್ರ ವಹಿಸುತ್ತಾರೆ.  ಮೈಸೂರು–ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯೂ ಕೊನೆಯ ಹಂತದಲ್ಲಿ ಸ್ಥಗಿತಗೊಂಡಿದೆ. ಅದನ್ನು ಜಾರಿಗೆ ತರಬೇಕಿದೆ. 

ಪ್ರವಾಸೋದ್ಯಮಕ್ಕೆ ಒತ್ತು: ನಾಲ್ಕು ಸಂರಕ್ಷಿತಾರಣ್ಯ, ಜಲಪಾತಗಳು, ಪ್ರಸಿದ್ಧ ದೇವಾಲಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕಿದೆ. ಭರಚಕ್ಕಿ ಜಲಪಾತ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಯೋಜನೆ ಇನ್ನೂ ಕಡತದ ಹಂತದಲ್ಲೇ ಇದೆ. 

ರಸ್ತೆಗಳ ಅಭಿವೃದ್ಧಿ: ಎಂಟು ವರ್ಷಗಳ ಹಿಂದೆ ಆರಂಭಗೊಂಡ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅಭಿವೃದ್ಧಿಯಾದ ಹೆದ್ದಾರಿಗಳು ಹದಗೆಡಲು ಆರಂಭಿಸಿವೆ. ಚಾಮರಾಜನಗರ–ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ. 

ಶಿಕ್ಷಣಕ್ಕೆ ಬೇಕಿದೆ ಗಮನ: ಜಿಲ್ಲೆಯ ಹಿಂದುಳಿದಿರುವಿಕೆಗೆ ಸಾಕ್ಷರತೆ ಕೊರತೆಯೂ ಕಾರಣ. ಈಗೀಗ ಹೆಚ್ಚು ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಹೊಂದಬೇಕಿದೆ. ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿದ್ದರೂ, ಇನ್ನೂ ಆರಂಭಗೊಂಡಿಲ್ಲ. 

ಆರೋಗ್ಯ ಕ್ಷೇತ್ರ: ಜಿಲ್ಲೆಯಲ್ಲಿ ಆರೋಗ್ಯ ಸೇವೆ ಸುಧಾರಿಸಬೇಕಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕಡಿಮೆ. ಜನರು ಜಿಲ್ಲಾಸ್ಪತ್ರೆ, ಸಿಮ್ಸ್‌ ಬೋಧನಾ ಆಸ್ಪತ್ರೆಯನ್ನೇ ಚಿಕಿತ್ಸೆಗಾಗಿ ಅವಲಂಬಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಇನ್ನೂ ಪೂರ್ಣ ಪ್ರಮಾಣದ ಚಿಕಿತ್ಸೆ ಲಭ್ಯವಿಲ್ಲ. ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಗ್ರಾಮೀಣ ಭಾಗಗಳಲ್ಲೂ ತುರ್ತು ಆರೋಗ್ಯ ಸೇವೆ ಸಿಗುವಂತೆ ಮಾಡಬೇಕಿದೆ.

ಜೂನ್‌ 4ರಂದು ಮತ ಎಣಿಕೆಯ ದಿನ ಗೆಲುವಿನ ನಂತರ, ‘ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ, ಕೇಂದ್ರದಿಂದ ಅನುದಾನ ತರುವೆ’ ಎಂಬ ಭರವಸೆಯನ್ನು ಬೋಸ್‌ ನೀಡಿದ್ದಾರೆ. ಎಷ್ಟರ ಮಟ್ಟಿಗೆ ಭರವಸೆಯನ್ನು ಈಡೇರಿಸಲು ಅವರಿಗೆ ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಡಂಚಿನ ಅಭಿವೃದ್ಧಿಗೆ ಬೇಕಿದೆ ಕಾಳಜಿ

ಜಿಲ್ಲೆಯಲ್ಲಿ ನಾಲ್ಕು ಸಂರಕ್ಷಿತ ಪ್ರದೇಶಗಳಿವೆ. ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ಸಾವಿರಾರು ಜನರು ನೆಲೆಸಿದ್ದಾರೆ. ಗಿರಿಜನರ ಹಾಡಿಗಳು, ಕಾಡಂಚಿನ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳು ಸೌಕರ್ಯಗಳಿಂದ ವಂಚಿತವಾಗಿದ್ದು, ಅಲ್ಲಿನ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. 

ಕಾಡಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷವೂ ಹೆಚ್ಚಿದ್ದು, ರೈತರು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  ಈ ಸಂಘರ್ಷಕ್ಕೆ ಕಡಿವಾಣ ಹಾಕುವುದರ ಜೊತೆಗೆ ಕಾಡಂಚಿನ ಪ್ರದೇಶಗಳ ಅಭಿವೃದ್ಧಿ ಪಡಿಸುವ ಸವಾಲು ಕೂಡ ಹೊಸ ಸಂಸದರ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT