ಬುಧವಾರ, ಜುಲೈ 28, 2021
20 °C
ಫಸಲು ತೆಗೆದಿದ್ದ ಜಮೀನು ಸಮೀಕ್ಷಾ ವರದಿಯಲ್ಲಿ ‘ಕೃಷಿಯೇತರ ಭೂಮಿ’!

ಸಮೀಕ್ಷೆ ಎಡವಟ್ಟು: ಪರಿಹಾರ ವಂಚಿತ ರೈತರು

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಬೆಳೆ ಸಮೀಕ್ಷೆ ನಡೆಸಿದ ಸಿಬ್ಬಂದಿಯ ಎಡವಟ್ಟಿನಿಂದಾಗಿ, ಕೋವಿಡ್‌–19 ಲಾಕ್‌ಡೌನ್‌ ಸಮಯದಲ್ಲಿ ಬೆಳೆನಷ್ಟ ಅನುಭವಿಸಿದ ಜಿಲ್ಲೆಯ ಹಲವು ರೈತರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಸಿಗದಂತಾಗಿದೆ. 

ಫಸಲು ಬೆಳೆದಿದ್ದ ಜಮೀನನ್ನು, ಸಮೀಕ್ಷೆ ಸಂದರ್ಭದಲ್ಲಿ ಕೃಷಿಯೇತರ ಭೂಮಿ ಎಂದು ನಮೂದಿಸಿದ್ದು, ಸಮಸ್ಯೆಯ ಮೂಲ ಕಾರಣ. ಇದರಿಂದ ಹನೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ರೈತರು ಪರಿಹಾರ ವಂಚಿತರಾಗುವಂತಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ, ಕಟಾವು ಮಾಡಿದ ಬೆಳೆಯನ್ನು ಸಾಗಿಸಲು ಸಾಧ್ಯವಾಗದೇ ನಷ್ಟ ಅನುಭವಿಸಿದ್ದ ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ ₹15 ಸಾವಿರ, ಮೆಕ್ಕೆಜೋಳ ಬೆಳೆದಿರುವವರಿಗೆ ₹5,000 ಪರಿಹಾರವನ್ನು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಬೆಳೆ ಸಮೀಕ್ಷೆ ನಡೆಸಲು ಸೂಚಿಸಿತ್ತು.

ಸಮೀಕ್ಷೆಯ ಹೊಣೆಯನ್ನು ಖಾಸಗಿಯವರಿಗೆ ವಹಿಸಲಾಗಿತ್ತು. ತಾಲ್ಲೂಕಿನ ಲೊಕ್ಕನಹಳ್ಳಿ, ರಾಮಾಪುರ ಹಾಗೂ ಹನೂರು ಹೋಬಳಿಗಳಲ್ಲಿ ಸಮೀಕ್ಷಾ ಕಾರ್ಯ ನಡೆದಿದೆ.

ಪ್ರತಿ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿ ಸಮೀಕ್ಷೆಯ ಮೇಲುಸ್ತುವಾರಿ ವಹಿಸಿಕೊಂಡಿರುತ್ತಾರೆ. ಸರ್ವೆ ಮಾಡುವವರು ಸ್ಥಳಕ್ಕೆ ತೆರಳಿ ಜಮೀನಿನಲ್ಲಿ ಬೆಳೆದಿರುವ ಫಸಲಿನ ಫೋಟೊ ತೆಗೆದು ಬೆಳೆ ದರ್ಶಕ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಈ ಕೆಲಸ ಸರಿಯಾಗಿ ಆಗದೇ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. 

‘ಬೆಳೆ ಸಮೀಕ್ಷೆಯಲ್ಲಿ ತಾಲ್ಲೂಕಿನ ಶೇ 80 ರಷ್ಟು ರೈತರ ಜಮೀನನ್ನು ಕೃಷಿಯೇತರ ಭೂಮಿ ಎಂದು ನಮೂದಾಗಿಸಲಾಗಿದೆ. ಜಮೀನಿನ ಯಾವುದೇ ಒಂದು ಭಾಗದಲ್ಲಿ ಪೋಟೋ ತೆಗೆದು ಇಲ್ಲಿ ಯಾವುದೇ ಫಸಲು ಬೆಳೆದಿಲ್ಲ ಎಂದು ನಮೂದಿಸಲಾಗಿದೆ. ಸರ್ವೆ ವರದಿಯಲ್ಲಿ ಹೆಸರು ಬಿಟ್ಟು ಹೋಗಿರುವ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಪ್ರತಿ ರೈತರಿಗೂ ತಲಾ ₹10 ಸಾವಿರ ಪರಿಹಾರ ನೀಡಬೇಕು’ ಎಂದು ಮುಖಂಡ ಮರುಡೇಶ್ವರಸ್ವಾಮಿ ಅವರು ಒತ್ತಾಯಿಸಿದರು.

‘ಆರು ಎಕರೆ ಜಮೀನಿನಲ್ಲಿ ಬಾಳೆ, ಕನಕಾಂಬರ ಹಾಗೂ ಜೋಳ ಬೆಳೆದಿದ್ದೆ. ಆದರೂ, ‘ಕೃಷಿಯೇತರ ಭೂಮಿ’ ಎಂದು ನಮೂದಿಸಿದ್ದಾರೆ. ತಮ್ಮ ತಂದೆಯವರ ಕಾಲದಿಂದಲೂ ಈ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಹಾಗಿದ್ದರೂ ಇಲಾಖೆಯ ಪ್ರಕಾರ, ನಮ್ಮದು ಕೃಷಿಯೇತರ ಜಮೀನು’ ಎಂದು ಅಜ್ಜೀಪುರದ ಕೃಷಿಕ ನಾಗರಾಜು ಅವರು ಬೇಸರ ವ್ಯಕ್ತಪಡಿಸಿದರು. 

ಸಮೀಕ್ಷೆ ಆಧಾರದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಪರಿಹಾರ ನೀಡುತ್ತಿವೆ. ತೋಟಗಾರಿಕೆ ಇಲಾಖೆಯು ಈಗ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಕೃಷಿ ಇಲಾಖೆಯು ಮೆಕ್ಕೆಜೋಳ ಬೆಳೆದ ರೈತರ ಖಾತೆಗೆ ಪರಿಹಾರ ಹಣವನ್ನು ಜಮೆ ಮಾಡಿದೆ.   

‘ಮೆಕ್ಕೆಜೋಳ ಬೆಳೆದ ರೈತರಿಗೆ ಪರಿಹಾರವನ್ನು ಅವರ ಖಾತೆಗೆ ಹಾಕುತ್ತಿದ್ದೇವೆ. ಸಮೀಕ್ಷೆಯಲ್ಲಿ ತಪ್ಪಾಗಿರುವ ಬಗ್ಗೆ ದೂರುಗಳು ಬಂದಿಲ್ಲ. ಪರಿಶೀಲನೆ ನಡೆಸುತ್ತೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ‘ಪ್ರಜಾವಾಣಿ’ಗೆ ತಿಳಿಸಿದರು. 

--

ನಾಲ್ಕು ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದೆ. ಆದರೆ, ಸಮೀಕ್ಷಾ ವರದಿಯಲ್ಲಿ ‘ಕೃಷಿಯೇತರ ಭೂಮಿ’ ಎಂದು ನಮೂದಾಗಿದೆ
ಜಗದೀಶ್, ಹನೂರಿನ ರೈತ

---

ಕೆಲವು ಕಡೆಗಳಲ್ಲಿ ಈ ರೀತಿ ಆಗಿದ್ದು, ಆಕ್ಷೇಪಣೆ ಸಲ್ಲಿಸುವಂತೆ ರೈತರಿಗೆ ತಿಳಿಸಿದ್ದೇವೆ. ಸಮಸ್ಯೆ ಪರಿಹರಿಸಲಾಗುವುದು
ಶಿವಪ್ರಸಾದ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು