ಶುಕ್ರವಾರ, ಜುಲೈ 23, 2021
23 °C
ಕೋವಿಡ್‌–19 ಗೆದ್ದ, ಸೆಸ್ಕ್‌ನ ಲೆಕ್ಕಾಧಿಕಾರಿ ಭಾಸ್ಕರ ರಾವ್ ಮಾತುಗಳು

ಭಯ ಪಡಬೇಕಾಗಿಲ್ಲ, ಎಚ್ಚರಿಕೆ ಇದ್ದರೆ ಸಾಕು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ’ಕೋವಿಡ್‌–19 ಸಾಮಾನ್ಯ ಜ್ವರದ ರೀತಿ ಇರುತ್ತದೆ. ಭಯ ಪಡುವಂತಹದ್ದು ಏನಿಲ್ಲ. ಮೂರರಿಂದ ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳಬಹುದು. ಮಾನಸಿಕವಾಗಿ ಸದೃಢರಾಗಿದ್ದರೆ ಸೋಂಕಿನ ವಿರುದ್ಧ ಜಯ ಕಟ್ಟಿಟ್ಟಬುತ್ತಿ’ 

– ಕೋವಿಡ್‌–19 ಜಯಿಸಿ ಬಂದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಚಾಮರಾಜನಗರ ಉಪ ವಿಭಾಗದ ಲೆಕ್ಕಾಧಿಕಾರಿ ಭಾಸ್ಕರ್‌ ಅವರ ಮಾತುಗಳಿವು. 

ಐದು ದಿನಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ತೆರಳಿದ ನಂತರ ಕ್ವಾರಂಟೈನ್‌ನಲ್ಲಿರುವ ಭಾಸ್ಕರ್‌ ಅವರು ತಮ್ಮ ಅನುಭವಗಳನ್ನು ಹಾಗೂ ಸೋಂಕು ಹರಡುವುದನ್ನು ತಡೆಯಲು ಪಾಲಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. 

‘ನನ್ನಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಸೋಂಕು ತಗುಲಿದ್ದ ನಮ್ಮ ಸಿಬ್ಬಂದಿಯೊಬ್ಬರ ಪ್ರಾಥಮಿಕ ಸಂಪರ್ಕಿತನಾಗಿದ್ದರಿಂದ ನಾನು ಪರೀಕ್ಷೆ ಮಾಡಿಸಿಕೊಂಡಿದ್ದೆ. ಎರಡು ದಿನಗಳ ನಂತರ ಬಂದ ವರದಿಯಲ್ಲಿ ಕೋವಿಡ್‌–19 ದೃಢಪಟ್ಟಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಚೆನ್ನಾಗಿ ಚಿಕಿತ್ಸೆ ನೀಡಿದರು. 10 ದಿನಗಳಲ್ಲಿ ವಾಪಸ್‌ ಮನೆಗೆ ಬಂದೆ’ ಎಂದು ಹೇಳುತ್ತಾರೆ ಅವರು. 

‘ಹೊರಗಡೆ ಬಿಂಬಿಸಲಾಗುತ್ತಿರುವ ರೀತಿಯಲ್ಲಿ ಏನಿಲ್ಲ. ನಾನು ಆಸ್ಪತ್ರೆಯಲ್ಲಿದ್ದಾಗ ದಾಖಲಾದವರಲ್ಲಿ ಹೆಚ್ಚಿನ ಮಂದಿಗೆ ರೋಗ ಲಕ್ಷಣಗಳಿರಲಿಲ್ಲ. ಕೆಲವರಲ್ಲಿ ಮಾತ್ರ ಸ್ವಲ್ಪ ಲಕ್ಷಣಗಳಿದ್ದವು. ವಯಸ್ಸಾಗಿದ್ದರೂ, ಆರೋಗ್ಯದಿಂದ ಇದ್ದರೆ ಕೋವಿಡ್‌–19ನಿಂದ ಯಾವ ತೊಂದರೆಯೂ ಇಲ್ಲ. ನಾನು ಮೂರು ದಿನಗಳಲ್ಲೇ ಸಹಜ ಸ್ಥಿತಿಗೆ ಬಂದೆ. ಆ ನಂತರ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್‌ ಕೇರ್‌ ಕೇಂದ್ರಕ್ಕೆ ಹೋಗಬೇಕಾಗಿತ್ತು. ನಮ್ಮ ಮತ್ತೊಬ್ಬ ಸಿಬ್ಬಂದಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದುದರಿಂದ ಅವರ ಜೊತೆಗಾಗಿ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದೆ. ಅವರಿಗೆ ಸ್ವಲ್ಪ ಹೃದಯದ ಸಮಸ್ಯೆ ಇತ್ತು. ಅವರೂ ಚೇತರಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು. 

ಮನೋಬಲ ಮುಖ್ಯ: ‘ಈ ಕಾಯಿಲೆಯನ್ನು ಎದುರಿಸಲು ಮಾನಸಿಕವಾಗಿ ನಾವು ಹೆಚ್ಚು ಪ್ರಬಲವಾಗಿರಬೇಕು. ಸೋಂಕು ದೃಢಪಟ್ಟ ತಕ್ಷಣ ಯಾರೂ ಭಯ ಪಡಬಾರದು’ ಎಂಬುದು ಜನರಿಗೆ ಭಾಸ್ಕರ್‌ ಅವರು ನೀಡುವ ಸಲಹೆ. 

‘ನಮ್ಮ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿ ನೀಡುತ್ತಿದ್ದಾರೆ. ವೈದ್ಯರು, ಶುಶ್ರೂಷಕರು ರೋಗಿಗಳಿಗೆ ಧೈರ್ಯ ತುಂಬುತ್ತಾರೆ. ತಜ್ಞ ವೈದ್ಯರಾದ ಡಾ.ಚಂದ್ರಿಕ್‌ ಬಾಬು ತಮ್ಮ ಮೊಬೈಲ್‌ ಸಂಖ್ಯೆಯನ್ನು ಎಲ್ಲ ರೋಗಿಗಳಿಗೂ ನೀಡಿ, ಏನೇ ಸಮಸ್ಯೆ ಇದ್ದರೂ ಕರೆ ಮಾಡುವಂತೆ ಸೂಚಿಸಿದ್ದರು. ಊಟೋಪಚಾರವೂ ಚೆನ್ನಾಗಿತ್ತು’ ಎಂದು ತಮ್ಮ ಆಸ್ಪತ್ರೆಯ ಅನುಭವಗಳನ್ನು ವಿವರಿಸಿದರು. 

ಜಾಗರೂಕತೆ ಅತ್ಯಂತ ಮುಖ್ಯ 

ಭಾಸ್ಕರ್‌ ಅವರು ಕೋವಿಡ್‌–19ಗೆ ತುತ್ತಾಗಿದ್ದರೂ, ಅವರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿಲ್ಲ. ಇದಕ್ಕೆ ಕಾರಣ, ಅವರು ತೆಗೆದುಕೊಂಡ ಮುನ್ನೆಚ್ಚರಿಕೆಗಳು.

‘ನಾವು ಎಚ್ಚರಿಕೆಯಿಂದ ಇದ್ದರೆ, ಸೋಂಕು ಹರಡುವುದನ್ನು ತಡೆಯಬಹುದು. ನಾನು ಕಚೇರಿ ಕೆಲಸಕ್ಕೆ ಮೈಸೂರು, ಬೆಂಗಳೂರಿಗೆ ಓಡಾಡುತ್ತಿದೆ. ಹಾಗಾಗಿ, 10 ದಿನಗಳಿಂದ ಕುಟುಂಬದ ಸದಸ್ಯರಿಂದ ಪ್ರತ್ಯೇಕವಾಗಿದ್ದೆ. ಸಿಬ್ಬಂದಿಗೆ ಸೋಂಕು ದೃಢಪಟ್ಟ ನಂತರ ಇನ್ನಷ್ಟು ಜಾಗರೂಕನಾಗಿದ್ದೆ’ ಎಂದು ಭಾಸ್ಕರ್‌ ಅವರು ಹೇಳಿದರು. 

‘ದೂರದ ಊರುಗಳಿಗೆ ಹೋಗಿ ಬಂದ ನಂತರ, ರೋಗ ಲಕ್ಷಣಗಳು ಕಂಡು ಬಂದಾಗ ನಾವು ಹೆಚ್ಚು ಎಚ್ಚರದಿಂದಿದ್ದು, ಎಲ್ಲರಿಂದಲೂ ದೂರ ಉಳಿಯಬೇಕು. ದೊಡ್ಡ ಮನೆಗಳಲ್ಲಿ, ಕೊಠಡಿಗಳಿರುವಲ್ಲಿ ಪ್ರತ್ಯೇಕವಾಗಿರುವುದಕ್ಕೆ ಸುಲಭ. ಸಣ್ಣ ಮನೆಗಳಲ್ಲಿ ಸ್ವಲ್ಪ ಕಷ್ಟ. ಆದರೆ, ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ, ಸೋಂಕಿನ ಸರಣಿಯನ್ನು ಮುರಿಯಬಹುದು’ ಎಂಬುದು ಅವರ ಬಲವಾದ ನಂಬಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು