ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಷ್ಯನಲ್ಲಿರುವ ಗುರು ಗುರುತಿಸುವವನೇ ಒಳ್ಳೆಯ ಶಿಕ್ಷಕ’

ಶಿಕ್ಷಕರ ದಿನಾಚರಣೆ, 14 ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
Last Updated 5 ಸೆಪ್ಟೆಂಬರ್ 2021, 15:55 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗುರು ವ್ಯಕ್ತಿಯಲ್ಲ. ಅದು ಶಕ್ತಿ. ಅಂತರಂಗದಲ್ಲಿ ಗುರುವನ್ನು ಕಂಡು ಕೊಳ್ಳಬೇಕು’ ಎಂದು ಮೈಸೂರಿನ ಸೋಮಾನಿ ಬಿಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಎಸ್.ಮಲ್ಲಿಕಾರ್ಜುನಶಾಸ್ತ್ರಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

'ಗುರು ಎಂದರೆ ಬರೀ ಪಾಠ ಮಾಡುವುದಲ್ಲ. ಹೊಸ ಹೊಸ ಪಾಠವನ್ನು ಕಲಿಯುವುದು. ನಾನು ಮೇಷ್ಟ್ರಾಗಿ ಒಂದು ದಿನವೂ ಪಾಠ ಮಾಡಿಲ್ಲ. ಆದರೆ ಶಿಷ್ಯರೊಂದಿಗೆ ಚರ್ಚೆ ಮಾಡಿದ್ದೇನೆ. ವಿದ್ಯಾರ್ಥಿಗಳ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದೇನೆ' ಎಂದರು.

‘ಶಿಷ್ಯನಲ್ಲಿ ಇರುವ ಗುರುವನ್ನು ಗುರುತಿಸಿದರೆ, ಅವನಂತಹ ಒಳ್ಳೆಯ ಶಿಕ್ಷಕ ಬೇರೆ ಇಲ್ಲ’ ಎಂದು ಮಲ್ಲಿಕಾರ್ಜುನ ಶಾಸ್ತ್ರಿ ಅವರು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಸಮಾಜದ, ಹೊಸ ಪೀಳಿಗೆಯೊಂದರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ದದು.ಶಿಕ್ಷಕರು ಹಾಗೂ ಮಕ್ಕಳ ನಡುವಿನ ಒಡನಾಟದಿಂದ ಮಕ್ಕಳು ಮಾತ್ರವಲ್ಲ; ಶಿಕ್ಷಕರೂ ಬೆಳೆಯುತ್ತಾರೆ’ ಎಂದರು.

‘ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ ಮಾಡುವುದು ದೊಡ್ಡ ಸವಾಲು. ಅವರು ಮಕ್ಕಳ ಮಟ್ಟಕ್ಕೆ ಇಳಿದು ಪಾಠ ಮಾಡುತ್ತಾರೆ. ಅಧ್ಯಾಪಕ ವೃಂದದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಮೌಲ್ಯ, ಗುಣಮಟ್ಟಗಳ ಬಗ್ಗೆ ಎಲ್ಲರ‌ಲ್ಲಿಯೂ ಪ್ರಶ್ನೆ ಕಾಡುತ್ತಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಮಾತನಾಡಿ, ‘ಕೋವಿಡ್‌ ನಿಯಮ ಪಾಲಿಸುಕೊಂಡು ಚೊಕ್ಕವಾಗಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಕೋವಿಡ್‌ ಹಾವಳಿಯ ನಡುವೆಯೇ ಶಾಲೆಗಳು ಆರಂಭವಾಗಿದ್ದು, ಜಿಲ್ಲಾಡಳಿತ ಎಲ್ಲ ಶಿಕ್ಷಕರಿಗೆ ಹಾಗೂ ಗಡಿ ಭಾಗದ ಎಲ್ಲರಿಗೂ ಶೇ 100ರಷ್ಟು ಲಸಿಕೆ ನೀಡಲು ಕ್ರಮ ಕೈಗೊಂಡಿದೆ’ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರ ಜೊತೆಗೆ ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರ ಕುಟುಂಬದವರನ್ನು ಸನ್ಮಾನಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಕೋವಿಡ್‌ ಸಮಯದಲ್ಲಿ ಖಾಸಗಿ ಶಾಲೆಗಳ ಅರೆಕಾಲಿಕ ಶಿಕ್ಷಕರು ತುಂಬಾ ಕಷ್ಟ ಅನುಭವಿಸಿದ್ದಾರೆ. ಜಮೀನುಗಳಲ್ಲಿ ಕೂಲಿ ಕೆಲಸಗಳಲ್ಲಿ ತೊಡಗಿದ್ದಾರೆ. ಇಂತಹ ಕಷ್ಟ ಯಾರಿಗೂ ಬರದಿರಲಿ’ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ಮಾತನಾಡಿದರು.

ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್‌ರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಡಿಡಿಪಿಐ ಪಿ.ಮಂಜುನಾಥ್‌ ಬಿಇಒ ಲಕ್ಷ್ಮಿಪತಿ ಇದ್ದರು.

14 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ 2021–22ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 14 ಬೋಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಿ.ಎಸ್‌.ಲತಾ, ಸಿ.ಪರಿಮಳ, ಸಿ.ಮಾದೇಶ, ಗೋಪಾಲಸ್ವಾಮಿ, ನಾಗೇಶ್‌,ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎನ್‌.ಎಸ್‌.ಮಹದೇವಸ್ವಾಮಿ, ಮಹದೇಶ್ವರಸ್ವಾಮಿ, ಸಾವಿತ್ರಿ ಎಚ್‌.ಎನ್‌., ವೆಂಕಟರಾಜು, ಉಮಾ ಟಿ. ಹಾಗೂಪ್ರೌಢ ಶಾಲಾ ವಿಭಾಗದಲ್ಲಿ ಕೆ.ಬಿ.ರವೀಂದ್ರ, ಮಲ್ಲು ಎಂ., ರಾಜಮ್ಮ ಆರ್‌, ಹಾಗೂ ಶೇಷಾದ್ರಿ ಎಂ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೋವಿಡ್‌ ಹಾಗೂ ಇತರ ಕಾರಣಗಳಿಂದ ಅಕಾಲಿಕ ಮರಣಕ್ಕೀಡಾದ ಶಿಕ್ಷಕರ ಕುಟುಂಬದ ಸದಸ್ಯರನ್ನೂ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT