ಸೋಮವಾರ, ಜುಲೈ 26, 2021
27 °C
8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ, ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ

ಸುರಕ್ಷತಾ ಕ್ರಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ತಡೆಗೆ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ದೇವಾಲಯಗಳು, ಮಸೀದಿಗಳು, ಚರ್ಚ್‌ ಸೇರಿದಂತೆ ಇನ್ನಿತರ ಧಾರ್ಮಿಕ ಕೇಂದ್ರಗಳನ್ನು ಇದೇ 8ರಿಂದ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ.

‘ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಸಂದರ್ಭದಲ್ಲಿ ಜನರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಕೋವಿಡ್–19 ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ವಿವಿಧ ಧರ್ಮಗಳ ದೇವಾಲಯಗಳ ಮುಖಂಡರು, ಅರ್ಚಕರು, ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ‘ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಸಂಪ್ರದಾಯ ಪದ್ಧತಿಗಳನ್ನು ಅನುಸರಿಸುವಾಗ ಕೋವಿಡ್-19 ತಡೆಗಾಗಿ ಕೆಲವು ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ವಿಶೇಷವಾಗಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಕೇಂದ್ರಗಳಲ್ಲಿ ಫಲಕಗಳನ್ನೂ ಅಳವಡಿಸಬೇಕು’ ಎಂದರು.

‘ಸ್ಯಾನಿಟೈಸರ್‌ಗಳನ್ನು ಇಡಬೇಕು. ಶುಚಿತ್ವಕ್ಕೆ ವಿಶೇಷ ಗಮನ ನೀಡಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಹಾಗೂ ಅವರಣದ ಸುತ್ತಲೂ ಸೋಂಕು ನಿವಾರಕಗಳನ್ನು  ಮಾಡಬೇಕು. ಸಾರ್ವಜನಿಕ ಶೌಚಾಲಯಗಳನ್ನು ಪ್ರತಿ ದಿನ ಶುಚಿಗೊಳಿಸಬೇಕು. ಅಗತ್ಯವಿದಲ್ಲಿ ಗ್ರಾಮ, ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಆರೋಗ್ಯ ಇಲಖೆಯ ಸಹಕಾರ ಪಡೆಯಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಭಕ್ತಾದಿಗಳಿಗೆ ದೇವಾಲಯ ಬಳಿ ದಾಸೋಹ, ಇತರೆ ಊಟ ಬಡಿಸುವಿಕೆ ಮಾಡುವಂತಿಲ್ಲ. ಪ್ರಸಾದವನ್ನು ಪ್ಯಾಕೆಟ್ ಮೂಲಕ ವಿತರಿಸಬೇಕು. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ರವಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ‌ಕುಮಾರ್ ಅವರು ಮಾತನಾಡಿ, ‘ಹಸಿರು ವಲಯದಲ್ಲಿರುವ ಏಕೈಕ ಜಿಲ್ಲೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸಿಕೊಂಡು ಹೋಗುವುದು ಬಹಳ ಜವಾಬ್ದಾರಿಯುತ ಕಾರ್ಯದೆ. ಧಾರ್ಮಿಕ ಮುಖಂಡರು, ಗುರುಗಳು ಜನರಿಗೆ ಅರಿವು ಮೂಡಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ತಹಶೀಲ್ದಾರ್ಗಳಾದ ಜೆ.ಮಹೇಶ್, ನಂಜುಂಡಯ್ಯ, ಬಸವರಾಜ ಚಿಗರಿ, ವಿವಿಧ ಧರ್ಮಗಳ ಗುರುಗಳು, ಧಾರ್ಮಿಕ ಕೇಂದ್ರಗಳ ಅರ್ಚಕರು, ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಇದ್ದರು.

ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಪ್ರವೇಶ

‘ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 8ರವರೆಗೆ ಮಾತ್ರ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಬೇಕು. ಧಾರ್ಮಿಕ ಕೇಂದ್ರಗಳ ಒಳಭಾಗ ಸಾಮರ್ಥ್ಯದ ಪೈಕಿ ಶೇ 50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಬೇಕು. ಹೆಚ್ಚು ಜನಸಂದಣಿಯಾಗುವ ವಿಶೇಷ ಪೂಜೆ, ಉತ್ಸವ, ಆರಾಧನೆಗಳನ್ನು ಸ್ವಲ್ಪ ದಿನಗಳವರೆಗೆ ಮುಂದೂಡಬೇಕು. ತೀರ್ಥ ಪ್ರಸಾದ ವಿತರಿಸುವಾಗ ಅಂತರ ಕಾಯ್ದುಕೊಳ್ಳಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸೂಚಿಸಿದರು. 

‘ಚಿಕ್ಕಮಕ್ಕಳು, ವಯಸ್ಸಾದವರು ಮತ್ತು ಗರ್ಭಿಣಿಯರು ಆರೋಗ್ಯ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳಿಗೆ ಬರದಿರುವುದು ಒಳಿತು. ಹಾಗೆಯೇ ಜ್ವರ, ಕೆಮ್ಮು, ನೆಗಡಿ ಅಥವಾ ಇತರ ಕಾಯಿಲೆ ಲಕ್ಷಣಗಳಿರುವವರು ಬರದಿರುವಂತೆ ಜಾಗೃತಿ ಮೂಡಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.