ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೊದಲ ದಿನ ಭಕ್ತರು, ಪ್ರವಾಸಿಗರ ಸಂಖ್ಯೆ ಕಡಿಮೆ

ಅನ್‌ಲಾಕ್‌: ದೇವಸ್ಥಾನ, ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತ
Last Updated 5 ಜುಲೈ 2021, 14:43 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ 2ನೇ ಅಲೆ ತಡೆಗಾಗಿ ಏಪ್ರಿಲ್‌ 22ರಂದು ಹೇರಲಾಗಿದ್ದ ಲಾಕ್‌ಡೌನ್‌ ನಿಯಮಗಳನ್ನು ಸೋಮವಾರದಿಂದ (ಜುಲೈ 5) ಬಹುತೇಕ ಸಡಿಲಗೊಳಿಸಿರುವುದರಿಂದಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳಗಳು ಹಾಗೂ ಪ್ರವಾಸಿ ತಾಣಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಯಿತು.

ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯ, ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ, ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗನಾಥ ಹಾಗೂ ಸಮೂಹ ದೇವಾಲಯಗಳು, ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯ, ಚಾಮರಾಜನಗರದ ಚಾಮರಾಜೇಶ್ವರ ದೇವಾಲಯಗಳು ಸೇರಿದಂತೆ ಎಲ್ಲ ದೇವಾಲಯಗಳನ್ನು ಭಕ್ತರ ಪ್ರವೇಶಕ್ಕೆ ತೆರೆಯಲಾಯಿತು.

ಅದೇ ರೀತಿ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತ, ಹನೂರು ತಾಲ್ಲೂಕಿನ ಹೊಗೆನಕಲ್‌ ಜಲಪಾತ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕೂಡ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.

ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಮೊದಲ ದಿನ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಎಲ್ಲ ಕಡೆಗಳಲ್ಲೂ ಕೋವಿಡ್‌ ನಿಯಮ ಪಾಲನೆಗೆ ಒತ್ತು ನೀಡಲಾಗಿತ್ತು.

ಮಹದೇಶ್ವರ ಬೆಟ್ಟ ವರದಿ: ಇಲ್ಲಿನ ಪ್ರಸಿದ್ಧಯಾತ್ರಾ ಸ್ಥಳ ಮಲೆಮಹದೇಶ್ವರಸ್ವಾಮಿಯ ಸನ್ನಿಧಿಯು‌ಎರಡೂವರೆ ತಿಂಗಳ ನಂತರ ಭಕ್ತರ ಪ್ರವೇಶಕ್ಕೆ ಮುಕ್ತವಾಯಿತು. ಸರ್ಕಾರದ ಸೂಚನೆಯ ಅನುಸಾರ ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬೆಟ್ಟಕ್ಕೆ ಭಕ್ತರು ಬಂದಿದ್ದರಾದರೂ ಸಂಖ್ಯೆ ಕಡಿಮೆ ಇತ್ತು.

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರವು ಅಗತ್ಯ ಕ್ರಮ ಕೈಗೊಂಡಿತ್ತು. ವೈಯಕ್ತಿಕ ಅಂತರವನ್ನು ಕಾಪಾಡುವುದಕ್ಕಾಗಿ ರಂಗ ಮಂದಿರದಲ್ಲಿ ಭಕ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ನಂತರ ಒಬ್ಬೊಬ್ಬರನ್ನೇ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಸ್ಯಾನಿಟೈಸರ್‌ ನೀಡಿ ದೇವರ ದರ್ಶನ ಮಾಡಲು ಅನುವು ಮಾಡಲಾಗಿತ್ತು. ದಾಸೋಹ ವ್ಯವಸ್ಥೆ, ಪ್ರಸಾದ ವಿತರಣೆ, ಸೇವೆ ಉತ್ಸವಗಳು ಇರಲಿಲ್ಲ. ದೇವರ ದರ್ಶನ ಮಾಡಿ, ಮಂಗಳಾರತಿ, ತೀರ್ಥ ಪ್ರಸಾದ ತೆಗೆದುಕೊಂಡು ಭಕ್ತರು ಹಿಂದಿರುಗಿದರು.

ರಂಗಪ್ಪನ ದರ್ಶನಕ್ಕೆ ಉತ್ಸಾಹ (ಯಳಂದೂರು ವರದಿ):ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ರಂಗನಾಥನ ದೇವಾಲಯಕ್ಕೆ ಸೋಮವಾರ ನೂರಾರು ಭಕ್ತರು ಬಂದು, ರಂಗಪ್ಪನ ದರ್ಶನ ಪಡೆದರು.

ಅನ್‌ಲಾಕ್‌ ಆದ ಮೊದಲ ದಿನವೇ ಸ್ಥಳೀಯರು ಮತ್ತುಪ್ರವಾಸಿಗರು ದೇಗುಲದತ್ತ ತೆರಳಿ, ದರ್ಶನ ಪಡೆಯಲು ಉತ್ಸಾಹ ತೋರಿದರು. ಕೆಲವರು ಕಮರಿಯ ಸುತ್ತಲೂ ನಿಂತು ಪರಿಸರವನ್ನು ವೀಕ್ಷಿಸಿ, ಕಣ್ತುಂಬಿಕೊಂಡರು. ಮಹಿಳೆಯರು ದೇವಳದಮುಂಭಾಗದ ಆರತಿ ಸ್ತಂಭದ ಬಳಿ ಕರ್ಪೂರ ಹಚ್ಚಿ, ದೀಪ ಬೆಳಗಿದರು. ಮಕ್ಕಳು ಮತ್ತುಯುವಕರು ರಥದ ಬೀದಿಯ ಮೆಟ್ಟಿಲುಗಳ ಮೂಲಕ ಮೇಲೇರಿ ಬಂದರು. ನಂತರ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ತೀರ್ಥ, ಪ್ರಸಾದಮತ್ತು ಲಾಡು ವಿತರಣೆ ಇರಲಿಲ್ಲ.

‘ಸೋಮವಾರ ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ರಿಂದ 2 ಮತ್ತು ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಪೂಜೆಗೆ ಅವಕಾಶ ಇದೆ. ಮಹಾಮಂಗಳಾರತಿ ನಂತರ ದೇವಳವನ್ನು ಮುಚ್ಚಲಾಗುತ್ತದೆ. ಪ್ರತಿದಿನ ಸ್ಯಾನಿಟೈಸ್ ಮಾಡಿ,ಸಾರ್ವಜನಿಕರ ಪ್ರವೇಶಕ್ಕೆ ದೇವಾಲಯ ತರೆಯಲಾಗುತ್ತದೆ. ಭಕ್ತರು ಕೋವಿಡ್ ಮಾರ್ಗದರ್ಶಿಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್. ಮೋಹನ್ ಕುಮಾರ್ ಅವರು ತಿಳಿಸಿದರು.

ಗುಂಡ್ಲುಪೇಟೆ ವರದಿ:ತಾಲ್ಲೂಕಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಸೋಮವಾರ 100ಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ತಾನಕ್ಕೆ ಬರುವವರಿಗೆ ಚೆಕ್‌ಪೋಸ್ಟ್‌ ಬಳಿಯೇ ತಪಾಸಣೆ ಮಾಡಿ ಬಸ್ ಹತ್ತಿಸಲಾಗತ್ತಿದೆ. ದೇವಸ್ಥಾನದ ದ್ವಾರದ ಬಳಿ ಸ್ಯಾನಿಟೈಸರ್ ಸಿಂಪಡಣೆ ಮಾಡಿ ದೇವಾಲಯದ ಒಳಗೆ ಬಿಡಲಾಗುತ್ತಿದೆ. ಇಲ್ಲೂ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಸಫಾರಿಗೆ ಹೆಚ್ಚಿದ ಜನ: ‘ಬಂಡೀಪುರ ಸಫಾರಿಗೂ ಸೋಮವಾರ ಬೆಳಿಗ್ಗೆ 90ಕ್ಕೂ ಹೆಚ್ಚು ಜನರು ಸಫಾರಿಗೆ ಬಂದಿದ್ದರು. 4 ಗಂಟೆಗೆ ₹16 ಸಾವಿರ ಹಣ ಸಂಗ್ರಹವಾಗಿತ್ತು’ ಎಂದು ವಲಯಾರಣ್ಯಧಿಕಾರಿ ನವೀನ್ ಕುಮಾರ್ ಅವರು ಮಾಹಿತಿ ನೀಡಿದರು.

ಭರಚುಕ್ಕಿಗೆ ಬೆರಳೆಣಿಕೆಯ ಪ್ರವಾಸಿಗರು

ಕೊಳ್ಳೇಗಾಲ: ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣ ಭರಚುಕ್ಕಿ ಜಲಪಾತದ ವೀಕ್ಷಣೆಗೆ ಸೋಮವಾರ ಬೆರಳೆಣಿಕೆಯಷ್ಟು ಪ್ರವಾಸಿಗರು ಬಂದಿದ್ದರು.

ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೂ ಪ್ರವಾಸಿಗರ ಸುಳಿವಿರಲಿಲ್ಲ. ಆ ಬಳಿಕ ಕೆಲವರು ಬರುವುದಕ್ಕೆ ಆರಂಭಿಸಿದರು. ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಪ್ರವಾಸಿಗರು ಮುಖ್ಯದ್ವಾರ ಪ್ರವೇಶ ಮಾಡುವುದಕ್ಕೂ ಮೊದಲು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಜಲಪಾತ ವೀಕ್ಷಣೆ ಸ್ಥಳದಲ್ಲಿ ಸ್ಯಾನಿಟೈಸರ್‌ ಇಡಲಾಗಿತ್ತು.

‘ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಹೇಳಿ ನಂತರ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತೇವೆ. ಮೊದಲನೇ ದಿನ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ. ಕೆಲವರಿಗೆ ಮಾಹಿತಿ ಕೊರತೆಯೂ ಇರಬಹುದು. ಮುಂದಿನ ದಿನಗಳಲ್ಲಿ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇದೆ’ ಎಂದು ವಲಯ ಅರಣ್ಯ ಅಧಿಕಾರಿ ಪ್ರವೀಣ್ ರಾಮಪ್ಪ ಚಲವಾದಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ತಾಲ್ಲೂಕಿನ ಹೊಗೆನಕಲ್‌ ಜಲಪಾತ ಕೂಡ ವೀಕ್ಷಣೆಗೆ ಮುಕ್ತವಾಗಿದ್ದು, ಮೊದಲ ದಿನ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿಲ್ಲ.

ವಹಿವಾಟು, ಜನಜೀವನ ಸಹಜ ಸ್ಥಿತಿಗೆ

ಚಾಮರಾಜನಗರ: ಮೂರನೇ ಹಂತದ ಅನ್‌ಲಾಕ್‌ ಜಾರಿಗೊಂಡ ಮೊದಲ ದಿನವಾದ ಸೋಮವಾರ ಜಿಲ್ಲೆಯಾದ್ಯಂತ ವ್ಯಾಪಾರ ಹಾಗೂ ಜನ ಜೀವನ ಸಹಜ ಸ್ಥಿತಿಗೆ ಬಂತು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೂ ತೆರೆದಿದ್ದವು.

ಗ್ರಾಹಕರು ಹೋಟೆಲ್‌ಗಳಲ್ಲಿಯೇ ಆಹಾರ ಸೇವಿಸಿದರು. ಬಾರ್‌ಗಳಲ್ಲಿ ಮದ್ಯ ಸೇವನೆ ಮಾಡುವುದಕ್ಕೂ ನಿರ್ಬಂಧವಿರಲಿಲ್ಲ.

ಜನರ ಓಡಾಟ, ವಾಹನಗಳ ಸಂಚಾರ ಕೂಡ ಹೆಚ್ಚಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು ಕಂಡು ಬಂತು. ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಜನ ಸಂದಣಿ ಹೆಚ್ಚಾಗಿತ್ತು.

ಲಾಕ್‌ಡೌನ್‌ ನಿರ್ಬಂಧಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಡಿಲಗೊಂಡಿಲ್ಲ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT