ಮಂಗಳವಾರ, ಮೇ 18, 2021
23 °C
ಮಹದೇಶ್ವರ ಬೆಟ್ಟದಲ್ಲಿ ಕಲುಷಿತಗೊಳ್ಳುತ್ತಿರುವ ದೊಡ್ಡಕೆರೆ: ಹೆಚ್ಚಿದ ಭಕ್ತರ ಆತಂಕ

ಮಹದೇಶ್ವರ ಬೆಟ್ಟ: ತೆಪ್ಪೋತ್ಸವ ಕೆರೆಗೆ ಸೇರುತ್ತಿದೆ ಕೊಳಚೆ ನೀರು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು (ಚಾಮರಾಜನಗರ ಜಿಲ್ಲೆ): ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲೂ ಅಪಾರ ಭಕ್ತರನ್ನು ಹೊಂದಿರುವ ಮಲೆಮಹದೇಶ್ವರ ಬೆಟ್ಟದಲ್ಲಿರುವ ಶೌಚಾಲಯದ ಕೊಳಚೆ ನೀರು ತೆಪ್ಪೋತ್ಸವ ನಡೆಯುವ ದೊಡ್ಡಕೆರೆಗೆ (ಕಾರಯ್ಯನ ಕೆರೆ) ಸೇರುತ್ತಿದ್ದು, ಕೆರೆಯ ನೀರು ಕಲುಷಿತಗೊಳ್ಳುತ್ತಿದೆ.

ಮೂಡಲಸೀಮೆ ಆರಾಧ್ಯ ದೈವ, 77 ಮಲೆಗಳ ಒಡೆಯ ಎಂದೆಲ್ಲಾ ಭಕ್ತರಿಂದ ಹಾಡಿ ಹೊಗಳಿಸಿಕೊಳ್ಳುವ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ಶುಚಿತ್ವ ಎಂಬುದು ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಬಿಸಾಡಿರುವ ತ್ಯಾಜ್ಯಗಳು, ಬಳಕೆಗೆ ಯೋಗ್ಯವಾಗಿಲ್ಲದಂತಿರುವ ಶೌಚಾಲಯಗಳು ಹೀಗೆ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟರೇ ಸಮಸ್ಯೆಗಳೇ ಕಣ್ಣಿಗೆ ರಾಚುತ್ತವೆ.

ದೇವಾಲಯದ ಮುಂಭಾಗದಲ್ಲಿರುವ ದೊಡ್ಡಕೆರೆ ಭಕ್ತರ ದೃಷ್ಟಿಯಲ್ಲಿ ಅತ್ಯಂತ ಪವಿತ್ರ ಸ್ಥಾನ ಪಡೆದಿದೆ. ದಶಕಗಳ ಹಿಂದೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಇದೇ ಕುಡಿಯುವ ನೀರಿನ ಮೂಲವಾಗಿತ್ತು. ನಂತರದ ದಿನಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ ಮೇಲೆ ಇದರ ಬಳಕೆ ಸಂಪೂರ್ಣವಾಗಿ ನಿಂತು ಹೋಯಿತು. ಅಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ದೊಡ್ಡಕೆರೆಯ ಪಾವಿತ್ರ್ಯತೆ ಇತ್ತೀಚೆಗೆ ಕಳಚಿ ಹೋಗುತ್ತಿದೆ ಎಂಬುದು ಭಕ್ತರ ಆತಂಕ ಮತ್ತು ಆರೋಪವಾಗಿದೆ.

ಮೇಲ್ಭಾಗದಲ್ಲಿರುವ ವಸತಿ ಗೃಹಗಳಿಂದ ಹಾಗೂ ಸಾರ್ವಜನಿಕ ಶೌಚಾಲಯದಿಂದ ಹೊರಬರುವ ಕೊಳಚೆ ನೀರು ಚರಂಡಿ ಮೂಲಕ ಕೆರೆಗೆ ಹೊಂದಿಕೊಂಡಿರುವ ಮಾವಿನತೋಟದ ಮೂಲಕ ಕೆರೆಗೆ ಸೇರುತ್ತಿದೆ. ಅತ್ಯಂತ ಪವಿತ್ರ ಸ್ಥಳ ಎಂದು ಭಾವಿಸಿದ್ದ ದೊಡ್ಡಕೆರೆ ಭಕ್ತರಿಗೆ ತಿಳಿಯದಂತೆ ಕಲುಷಿತಗೊಳ್ಳುತ್ತಿದೆ. ವರ್ಷಕ್ಕೆ ಕೋಟ್ಯಂತರ ಆದಾಯ ತರುವ ಇಲ್ಲಿ ಪುರಾತನ ಕೆರೆಯನ್ನು ಸಂರಕ್ಷಿಸುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆರೆಯ ಪಾವಿತ್ರ್ಯತೆಯನ್ನು ಉಳಿಸಬೇಕು ಎನ್ನುತ್ತಾರೆ ಮಂಡ್ಯದ ಭಕ್ತ ಷಣ್ಮುಖಸ್ವಾಮಿ.

ದೊಡ್ಡಕೆರೆಗೆ ಸೇರುತ್ತಿರುವ ಕಲುಷಿತ ನೀರು ಒಳಚರಂಡಿ ಮೂಲಕ ಕೊಕ್ಕರೆಹಳ್ಳ ಮೂಲಕ ಕಾಡನ್ನು ಪ್ರವೇಶಿಸುತ್ತಿದೆ. ವನ್ಯಪ್ರಾಣಿಗಳು ಇದನ್ನು ಕುಡಿಯುವುದರಿಂದ ಅವುಗಳ ಜೀವಕ್ಕೂ ಕುತ್ತು ಬರುವ ಸಂಭವವಿದೆ. ಈ ಹಳ್ಳದಲ್ಲಿ ಹರಿಯುವ ಕೊಳಚೆ ನೀರಲ್ಲಿ ಸ್ನಾನ ಮಾಡಿದ ಪರಿಣಾಮ ಮೂರು ವರ್ಷದ ಹಿಂದೆ ಮೆದಗನಾಣೆ ಗ್ರಾಮಸ್ಥರು ಚರ್ಮ ಕಾಯಿಲೆಗೆ ತುತ್ತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ‘ಈ ಹಿಂದೆಯೂ ಇದೇ ಸಮಸ್ಯೆ ಉದ್ಭವವಾಗಿತ್ತು. 2013ರಲ್ಲಿ ನಾನು ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಕಲುಷಿತ ನೀರು ದೊಡ್ಡಕೆರೆಗೆ ಸೇರುವುದನ್ನು ತಡೆಯಲು ಬೈಪಾಸ್ ಮಾಡಿ ತಡೆಹಿಡಿಯಲಾಗಿತ್ತು. ಈಗ ಮತ್ತೆ ಈ ಸಮಸ್ಯೆ ಉದ್ಭವಿಸಿರುವ ಬಗ್ಗೆ ದೂರು ಬಂದಿದೆ. ಸ್ಥಳ ಪರಿಶೀಲಿಸಿದ್ದೇನೆ. ವಸತಿಗೃಹಗಳ ನೀರು ಮಾವಿನ ತೋಟದ ಮೂಲಕ ಕೆರೆಗೆ ಸೇರುತ್ತಿರುವುದು ಕಂಡು ಬಂದಿದೆ. ಇದನ್ನು ತಡೆದು ಯುಜಿಡಿ ಚರಂಡಿಗೆ ಸೇರಿಸಿ ಅದು ಕೆರೆಗೆ ಸೇರದಂತೆ ಕ್ರಮವಹಿಸಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು