ಚಾಮರಾಜನಗರ: ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು 1ರಿಂದ 8ನೇ ತರಗತಿಯವರೆಗೆ ಶಿಕ್ಷಣ ಪಡೆಯಲು 37 ಉರ್ದು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಆದರೆ, ಪ್ರೌಢಶಾಲಾ ಹಂತದ ಶಿಕ್ಷಣ ಪಡೆಯಲು ಉರ್ದು ಪ್ರೌಢಶಾಲೆಗಳೇ ಇಲ್ಲ ! ಪರಿಣಾಮ, ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುವ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣ ಪಡೆಯಲು ಭಾಷಾ ಸಮಸ್ಯೆ ಎದುರಿಸುತ್ತಿದ್ದಾರೆ.
ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು 9ನೇ ತರಗತಿ ಪ್ರವೇಶ ಪಡೆಯಲು ಜಿಲ್ಲೆಯಲ್ಲಿ ಉರ್ದು ಪ್ರೌಢಶಾಲೆಗಳು ಇಲ್ಲದ ಪರಿಣಾಮ ಅನಿವಾರ್ಯವಾಗಿ ಇಂಗ್ಲೀಷ್ ಅಥವಾ ಕನ್ನಡ ಮಾಧ್ಯಮದ ಶಾಲೆಗಳಿಗೆ ಪ್ರವೇಶಾತಿ ಪಡೆಯಬೇಕಾಗಿದೆ. ಈ ಹಂತದಲ್ಲಿ ಎದುರಾಗುತ್ತಿರುವ ಭಾಷಾ ತೊಡಕುಗಳಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಮಸ್ಯೆ ಏಕೆ?
1ರಿಂದ 8ನೇ ತರಗತಿಯವರೆಗೆ ಉರ್ದು ಭಾಷೆಯಲ್ಲಿ ಶಿಕ್ಷಣ ಸಿಗುವುದರಿಂದ ವಿದ್ಯಾರ್ಥಿಗಳು ಉರ್ದು ಮೇಲೆ ಹಿಡಿತ ಸಾಧಿಸಿ ಸಂಪೂರ್ಣ ಒಗ್ಗಿರುತ್ತಾರೆ. 9ನೇ ತರಗತಿಗೆ ಪ್ರವೇಶ ಪಡೆದಾಗ ಉರ್ದು ಬದಲಾಗಿ ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕಾಗುವುದರಿಂದ ಭಾಷಾ ತೊಡಕಿನ ಸಮಸ್ಯೆಗೆ ಸಿಲುಕುತ್ತಿದ್ದು ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣದಲ್ಲಿ ಉತ್ತಮ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲಿ ಭಾಷಾ ಸಮಸ್ಯೆ ಕಾರಣದಿಂದ ಕಡಿಮೆ ಅಂಕ ಪಡೆಯುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದು ವಿದ್ಯಾಭ್ಯಾಸ ಮುಂದುವರಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಸಮುದಾಯದ ಮುಖಂಡರಾದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಬ್ರಾರ್ ಅಹಮದ್.
ಮುಸ್ಲಿಂ ಸಮುದಾಯ ಶಿಕ್ಷಣ ಕಲಿಕೆಯಲ್ಲಿ ಇತರ ಸಮುದಾಯಗಳಿಗಿಂತ ಹಿಂದುಳಿದಿದೆ. ಹೀಗಿರುವಾಗ ಕಲಿಕೆಗೆ ಪೂರಕ ವಾತಾವರಣ ಇಲ್ಲವಾದರೆ ಸಮುದಾಯ ಮತ್ತಷ್ಟು ಹಿಂದುಳಿಯವ ಅಪಾಯಕ್ಕೆ ಸಿಲುಕಲಿದೆ. ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿಕೆಗೆ ಅವಕಾಶ ಇರುವಂತೆ, ಪ್ರೌಢಶಾಲಾ ಶಿಕ್ಷಣಕ್ಕೂ ಅವಕಾಶ ಸಿಗಬೇಕು. ಇದರಿಂದ ಸಮುದಾಯದ ವಿದ್ಯಾರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನಾದರೂ ಪೂರೈಸಿ ಉನ್ನತ ಶಿಕ್ಷಣ ಪಡೆಯುವತ್ತ ಆಸಕ್ತಿ ತೋರುತ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎನ್ನುತ್ತಾರೆ ಮುಖಂಡರು.
ಎಸ್.ಎಸ್.ಎಲ್.ಸಿ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಮಹತ್ವದ ಘಟ್ಟ. ಬದುಕಿಗೆ ತಿರುವ ನೀಡುವ ಹಂತವೂ ಹೌದು. ಈ ಹಂತದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಹಾದಿತಪ್ಪುವ ಅಪಾಯ ಹೆಚ್ಚು. ಶಾಲೆಗೆ ಹೋಗಬೇಕಾದ ಮಕ್ಕಳು ಗ್ಯಾರೇಜ್, ಹೋಟೆಲ್ ಸೇರಿದಂತೆ ಅಪಾಯಕಾರಿ ವೃತ್ತಿಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯಬೇಕಾದ ಸಾಧ್ಯತೆಗಳು ಹೆಚ್ಚು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶಿಕ್ಷಣ ತಜ್ಞರು.
2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 10,20,791 ಜನಸಂಖ್ಯೆ ಇದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮರು 47,210 ಮಂದಿ ಇದ್ದು ಶೇ 4.62ರಷ್ಟಿದ್ದಾರೆ.
ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1,388 ವಿದ್ಯಾರ್ಥಿಗಳು ಉರ್ದು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದು ಪ್ರೌಢಶಾಲಾ ಹಂತದಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.