ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಮೂರು ದಿನಗಳ ಹಕ್ಕಿ ಹಬ್ಬಕ್ಕೆ ಚಾಲನೆ

ರಾಜ್ಯ ಮಟ್ಟದ ಏಳನೇ ಉತ್ಸವ, ಬುಧವಾರದಿಂದ ಎರಡು ದಿನ ಪಕ್ಷಿ ವೀಕ್ಷಣೆಗೆ ಅವಕಾಶ
Last Updated 5 ಜನವರಿ 2021, 14:07 IST
ಅಕ್ಷರ ಗಾತ್ರ

ಚಾಮರಾಜನಗರ: ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಜಂಟಿಯಾಗಿ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆಯೋಜಿಸಿರುವ ಮೂರು ದಿನಗಳ ಹಕ್ಕಿ ಹಬ್ಬಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಬಿಳಿಗಿರಿರಂಗನಬೆಟ್ಟದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್‌ ಮಿಶ್ರಾ ಅವರು, ‘ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ, ಪಕ್ಷಿ ವೀಕ್ಷಣೆಗೆ ಪ್ರೋತ್ಸಾಹ ನೀಡುವ ಹಾಗೂ ಹುಲಿ ಕೇಂದ್ರಿತ ಪ‍್ರವಾಸೋದ್ಯಮ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಆರು ವರ್ಷಗಳಿಂದ ಹಕ್ಕಿ ಹಬ್ಬವನ್ನು ಆಚರಿಸುತ್ತಾ ಬಂದಿದೆ. 7ನೇ ಆವೃತ್ತಿ ಬಿಆರ್‌ಟಿಯಲ್ಲಿ ನಡೆಯುತ್ತಿದೆ’ ಎಂದರು.

‘ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ನಡುವೆ ಸೇತುವೆಯಾಗಿರುವ ಬಿಆರ್‌ಟಿ ಅರಣ್ಯ 540 ಚದರ ಕಿ.ಮೀ ವ್ಯಾಪ್ತಿ ಹೊಂದಿದ್ದು, ಅಪರೂಪದ ಸಸ್ಯ ಸಂಕುಲ ಹಾಗೂ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. ಪಕ್ಷಿ ತಜ್ಞ ಡಾ.ಸಲೀಂ ಅಲಿ ಅವರು ಇಲ್ಲಿಗೆ ಭೇಟಿ ನೀಡಿ ಬರ್ಡ್ಸ್‌ ಆಫ್‌ ಮೈಸೂರು ಸಮೀಕ್ಷೆಯನ್ನು ಆರಂಭಿಸಿದ್ದರು. ವೈವಿಧ್ಯತೆಗಳ ತಾಣವಾಗಿರುವ ಈ ಅರಣ್ಯವು ಕುರುಚಲು ಪೊದೆ, ಒಣ ಮತ್ತು ತೇವಾಂಶವುಳ್ಳ ಎಲೆ ಉದುರಿಸುವ, ಅರೆ ಮತ್ತು ನಿತ್ಯಹರಿದ್ವರ್ಣ ಶೋಲಾ ಕಾಡನ್ನು ಹೊಂದಿದೆ. ಹುಲ್ಲುಗಾವಲು ಪ್ರದೇಶವೂ ಇದೆ. ಇಲ್ಲಿ 250ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಲಾಗಿದ್ದು, ಇದನ್ನು ದೇಶದ ಪ್ರಮುಖ ಪ‍ಕ್ಷಿಗಳ ತಾಣ ಎಂದು ಗುರುತಿಸಲಾಗಿದೆ’ ಎಂದರು.

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ ಹಕ್ಕಿ ಹಬ್ಬ ನಡೆಯುತ್ತಿರುವುದು ಹೆಮ್ಮೆಯ ವಿಚಾರ.ಭೂದೇವಿಯ ಮುಕುಟ ಮಣಿಗಳಲ್ಲಿ ಒಂದಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ 282ಕ್ಕೂ ಹೆಚ್ಚು ಪಕ್ಷಿಗಳ ಪ್ರಬೇಧಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಹಬ್ಬವು ಇನ್ನಷ್ಟು ಪ್ರಭೇದಗಳನ್ನು ಗುರುತಿಸಲು ನೆರವಾಗಲಿ’ ಎಂದು ಆಶಿಸಿದರು.

‘ಪರಿಸರಕ್ಕೆ ಅಪಾಯ ಆದಷ್ಟೂ ಜೀವ ಜಗತ್ತಿಗೆ ತೊಂದರೆಯಾಗುತ್ತದೆ. ಪ್ರಕೃತಿಯಲ್ಲಿ ಅಸಮತೋಲನ ಹೆಚ್ಚಾದಾಗ ಸ್ವತಃ ಅದುದೇ ಸಮತೋಲನ ತರಲು ಯತ್ನಿಸುತ್ತದೆ. ಈಗ ಜಗತ್ತನ್ನು ಕಾಡುತ್ತಿರುವ ಕೋವಿಡ್‌ಗೂ ಇದೇ ಕಾರಣ ಇರಬಹುದು ಎಂಬುದು ನನ್ನ ನಂಬುಗೆ. ಪರಿಸರ ಉಳಿದರೆ ಮಾತ್ರ ಮನುಷ್ಯರು ಸೇರಿದಂತೆ ಭೂಮಿಯಲ್ಲಿರುವ ಎಲ್ಲವೂ ಸುರಕ್ಷಿತವಾಗಿರುತ್ತವೆ. ಪರಿಸರ ಸಂರಕ್ಷಿಸುವ ನಿಟ್ಟಿನಲ್ಲೂ ಹಕ್ಕಿ ಹಬ್ಬ ಪ್ರೇರಣೆಯಾಗಲಿ’ ಎಂದರು.

ಸೋಲಿಗರನ್ನು ಉಳಿಸಿ: ‘ಅರಣ್ಯ ಇಲಾಖೆಯು ಕಾಡುಗಳ ರಕ್ಷಣೆಯ ಬಗ್ಗೆ ತುಂಬಾ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ನಾವು ಪ್ರಸ್ತಾಪಿಸುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಣ್ಯ ಅಧಿಕಾರಿಗಳು ತಕರಾರು ತೆಗೆದಾಗ ಸ್ವಲ್ಪ ಕಿರಿಕಿರಿಯಾಗುತ್ತದೆ. ಆದರೆ, ಅವರು ವಿರೋಧಿಸುವುದರಲ್ಲಿ ಅರಣ್ಯ ಸಂರಕ್ಷಣೆಯ ಉದ್ದೇಶ ಇರುತ್ತದೆ’ ಎಂದರು.

‘ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿರುವ ಸೋಲಿಗರು ಇಲ್ಲಿನ ಮೂಲನಿವಾಸಿಗಳು. ಅವರಿಂದಾಗಿ ಕಾಡು ಉಳಿದಿದೆ. ಈ ಸಮುದಾಯವನ್ನು ಉಳಿಸಿ ಬೆಳೆಸಲೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕರು ಸಲಹೆ ನೀಡಿದರು.

ರೂಫಸ್‌ ಬೆಲ್ಲಿಡ್‌ ಹದ್ದು ರಾಯಭಾರಿ: ಅಳಿವಿನಂಚಿನಲ್ಲಿರುವ ರೂಫಸ್‌ ಬೆಲ್ಲಿಡ್ ಹದ್ದನ್ನು ಈ ಬಾರಿಯ ಹಕ್ಕಿ ಹಬ್ಬದ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಬಿಆರ್‌ಟಿಯಲ್ಲಿ ಈ ಹದ್ದು ಹೆಚ್ಚಾಗಿ ಕಂಡುಬರುತ್ತದೆ ಎಂದು ಅಜಯ್‌ ಮಿಶ್ರಾ ಅವರು ಹೇಳಿದರು.

74 ಮಂದಿ ನೋಂದಣಿ: ಹಕ್ಕಿ ಹಬ್ಬಕ್ಕಾಗಿ 74 ಮಂದಿ ನೋಂದಣಿ ಮಾಡಿಕೊಂಡಿದ್ದು, ಬುಧವಾರ ಮತ್ತು ಗುರುವಾರ ಬಿಆರ್‌ಟಿಯ ವಿವಿಧ ಪ್ರದೇಶಗಳಿಂದ ತಂಡಗಳಾಗಿ ಅರಣ್ಯದ ಒಳಗೆ ಸಾಗಿ ಹಕ್ಕಿ ವೀಕ್ಷಣೆ ಮಾಡಿ ದಾಖಲು ಮಾಡಿಕೊಳ್ಳಲಿದ್ದಾರೆ.

ಅಂಚೆ ಚೀಟಿ, ಲಕೋಟೆ ಬಿಡುಗಡೆ: ಹಕ್ಕಿ ಹಬ್ಬದ ಅಂಗವಾಗಿ ಅಂಚೆ ಇಲಾಖೆಯು ಹೊರತಂದಿರುವ ಅಂಚೆ ಚೀಟಿ ಹಾಗೂ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕುಣಗಾಲಶಾಂತಮೂರ್ತಿ ಅವರು ಮಾತನಾಡಿದರು.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್‌ ಧವೆ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಮೈಸೂರು–ಕೊಡಗು ವೃತ್ತದ ಸಿಸಿಎಫ್‌ ಹೀರಾಲಾಲ್‌, ಅಂಚೆ ಸೇವೆಗಳ ನಿರ್ದೇಶಕ ಕೆ.ರವೀಂದ್ರನ್‌, ಚಾಮರಾಜನಗರ ಸಿಸಿಎಫ್‌ ಮನೋಜ್‌ಕುಮಾರ್‌, ಬಿಆರ್‌ಟಿ ಡಿಸಿಎಫ್‌ ಸಂತೋಷ್‌ಕುಮಾರ್‌, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ವಿ.ಏಡುಕುಂಡಲು, ಕಾವೇರಿ ವನ್ಯಧಾಮದ ಡಿಸಿಎಫ್‌ ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT