ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಹಸುಗೂಸು ಅಪಹರಿಸಿದ ಮಹಿಳೆ

ಜಿಲ್ಲಾಸ್ಪ‍ತ್ರೆಯಲ್ಲಿ ಹಾಡಹಗಲೇ ಹುಣಸೂರಿನ ಗೃಹಿಣಿಯ ಕೃತ್ಯ
Last Updated 17 ಜೂನ್ 2020, 15:25 IST
ಅಕ್ಷರ ಗಾತ್ರ

ಚಾಮರಾಜನಗರ/ಹುಣಸೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಐದು ದಿನಗಳ ಹಿಂದೆ ಹುಟ್ಟಿದ್ದ ಶಿಶುವನ್ನು ಮಹಿಳೆಯೊಬ್ಬರು ಹಗಲು ಹೊತ್ತಿನಲ್ಲೇ ಪೋಷಕರ ಕಣ್ತಪ್ಪಿಸಿ ಮಗುವಿನೊಂದಿಗೆ ಪರಾರಿಯಾಗಿ ನಂತರ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಮಹಿಳೆಯನ್ನು ಬಂಧಿಸಿರುವ ಹುಣಸೂರು ಪೊಲೀಸರು ಗಂಡು ನವಜಾತ ಶಿಶುವನ್ನು ರಕ್ಷಿಸಿದ್ದಾರೆ.‌ ಮಹಿಳೆಯನ್ನು ಹುಣಸೂರು ಪಟ್ಟಣದವರು ಲಾಲ್‌ಬನ್‌ ಬೀದಿಯ ರಂಜಿತ (24) ಎಂದು ಗುರುತಿಸಲಾಗಿದೆ.

ಐದು ತಿಂಗಳ ಹಿಂದೆ ಆಕೆಗೆ ಗರ್ಭಪಾತವಾಗಿತ್ತು. ಪತಿ ವಸಂತ ಎಂಬುವವರು ತನಗೆ ಮಗು ಬೇಕೇ ಬೇಕು ಎಂದು ಕಿರುಕುಳ ಕೊಡುತ್ತಿದ್ದರು. ಹಾಗಾಗಿ, 20 ದಿನಗಳ ಹಿಂದೆ ಚಾಮರಾಜನಗರದಲ್ಲಿರುವ ಅಜ್ಜಿ ಮನೆಗೆ ರಂಜಿತ ಬಂದಿದ್ದರು. ಮಗುವಿನೊಂದಿಗೇ ಮನೆಗೆ ಹಿಂದಿರುಗಬೇಕು ಪತಿ ಕಟ್ಟುನಿಟ್ಟಾಗಿ ಹೇಳಿದ್ದರಿಂದ ಅನ್ಯ ಮಾರ್ಗದಲ್ಲಿ ಮಗು ಸಂಪಾದಿಸುವ ಆಲೋಚನೆ ಅವರಲ್ಲಿತ್ತು. ಬುಧವಾರಜಿಲ್ಲಾಸ್ಪತ್ರೆಗೆ ಬಂದಿದ್ದ ಅವರು ನವಜಾತಶಿಶುವನ್ನು ಅದರ ಪೋಷಕರ ಕಣ್ತಪ್ಪಿಸಿ ಹೇಳದೆ ಕೇಳದೆ ಊರಿಗೆ ಕರೆತಂದಿದ್ದಾರೆ ಎಂದು ಹುಣಸೂರು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಹಿಳೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪೂವಯ್ಯ ತಿಳಿಸಿದರು.

ಘಟನೆಯ ವಿವರ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ವ್ಯಾಸರಾಜನಪುರ ಗ್ರಾಮದ ಕುಮಾರ ಎಂಬುವವರ ಪತ್ನಿ ಮುತ್ತುರಾಜಮ್ಮ (30) ಅವರು ಇದೇ 13ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದರು. ಶಸ್ತ್ರಕ್ರಿಯೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಇದೆ. ಇದು ಎರಡನೇ ಹೆರಿಗೆ.

‘ಬುಧವಾರ ಮಧ್ಯಾಹ್ನ ಮಗುವಿಗೆ ಭೇದಿ ಆಗಿದ್ದರಿಂದ ಹಸುಗೂಸಿನ ಅಜ್ಜಿ ರಾಜಮ್ಮ ಅವರು ವೈದ್ಯರ ಬಳಿ ಮಗುವನ್ನು ತೋರಿಸುವುದಕ್ಕಾಗಿ ಹೊರ ರೋಗಿಗಳ ವಿಭಾಗಕ್ಕೆ ಬಂದು ಚಿಕಿತ್ಸೆ ಕೊಡಿಸಿ ಹೋಗಿದ್ದರು. ಮತ್ತೆ ಭೇದಿಯಾದಾಗ ವಾಪಸ್‌ ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಮುಂದಾದಾಗ ಅಲ್ಲೇ ಇದ್ದ ಮಹಿಳೆ (ರಂಜಿತ), ತಾನು ಮಗುವನ್ನು ತೋರಿಸಿಕೊಂಡು ಬರುವುದಾಗಿ ರಾಜಮ್ಮ ಅವರ ಕೈಯಿಂದ ಪಡೆದಿದ್ದರು. ಕೊಠಡಿಯೊಳಗೆ ವೈದ್ಯರು ಇದ್ದಾರೆಯೇ ಎಂದು ನೋಡುವಂತೆ ರಾಜಮ್ಮ ಅವರಿಗೆ ತಿಳಿಸಿದರು. ರಾಜಮ್ಮ ಅವರು ಹೋಗಿ ಬರುವಷ್ಟರಲ್ಲಿ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದರು’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಸ್ಪತ್ರೆ ಬಳಿಯಿಂದ ಆಟೊದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳಿದ ಮಹಿಳೆ, 3 ಗಂಟೆ ಸುಮಾರಿಗೆ ಹುಣಸೂರು ಬಸ್‌ಗೆ ಹತ್ತಿದ್ದಾರೆ.

ಘಟನೆ ಬೆಳಕಿಗೆ ಬಂದ, ತಕ್ಷಣ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದರು. ಮಹಿಳೆಯು ಹುಣಸೂರು ಬಸ್‌ ಹತ್ತಿದ ಬಗ್ಗೆ ಆಟೊ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪಟ್ಟಣ ಠಾಣೆಯ ಪೊಲೀಸರು ಹುಣಸೂರು ಪೊಲೀಸರಿಗೆ ವಿಷಯ ತಿಳಿಸಿದರು.

ಹುಣಸೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಪೂವಯ್ಯ ನೇತೃತ್ವದ ತಂಡ ಬಸ್‌ ನಿಲ್ದಾಣದಲ್ಲಿ ಕಾದುಕುಳಿತಿತ್ತು. ಸಂಜೆ 5.30ರ ಸುಮಾರಿಗೆ ಮಗುವಿನೊಂದಿಗೆ ಬಸ್‌ ಇಳಿದ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು, ಮಗುವನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದರು.

ಹುಣಸೂರಿನಲ್ಲಿ ಮಗುವನ್ನು ರಕ್ಷಿಸಿದ್ದು ದೃಢಪಡುತ್ತಲೇ, ಮಗುವಿನ ಪೋಷಕರು ನಗರದಿಂದ ಆಂಬುಲೆನ್ಸ್‌ನಲ್ಲಿ ಹುಣಸೂರಿಗೆ ಹೊರಟರು.

ವಿಶ್ವಾಸಗಳಿಸಿದ್ದ ಮಹಿಳೆ

ಮುತ್ತುರಾಜಮ್ಮ ಹಾಗೂ ಅವರ ಮನೆಯ ಸದಸ್ಯರಿಗೆ ಮಹಿಳೆಯ ಪರಿಚಯ ಇರಲಿಲ್ಲ. ಹಾಗಿದ್ದರೂ ಹಸುಗೂಸಿನ ಅಜ್ಜಿಯು ಆಕೆಯ ಕೈಯಲ್ಲಿ ಮಗುವನ್ನು ಕೊಡಲು ಹೇಗೆ ಸಾಧ್ಯ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಆದರೆ, ಬುಧವಾರ ಬೆಳಿಗ್ಗೆಯಿಂದಲೇ ಮಹಿಳೆಯು ಇವರಿದ್ದ ವಾರ್ಡ್‌ನಲ್ಲಿ ಕಾಣಿಸಿಕೊಂಡಿದ್ದರು. ವೈದ್ಯರ ಬಳಿಗೆ ಶಿಶುವನ್ನು ಕರೆತರುವಾಗ ಜೊತೆಯಲ್ಲೇ ಇದ್ದರು ಎಂದು ವೈದ್ಯಾಧಿಕಾರಿಗಳು, ಸಿಬ್ಬಂದಿ ಹೇಳಿದ್ದಾರೆ.

‘ಬೆಳಿಗ್ಗೆಯಿಂದಲೇ ಬಾಣಂತಿ ಹಾಗೂ ಅವರ ಕುಟುಂಬದವರೊಂದಿಗೆ ಇದ್ದು, ಅವರ ವಿಶ್ವಾಸ ಗಳಿಸಿದ ಮಹಿಳೆ ಕೊನೆಗೆ ಈ ಕೃತ್ಯ ಎಸಗಿದಂತೆ ಕಾಣುತ್ತದೆ’ ಎಂದು ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT